ವೈದ್ಯಕೀಯ ಲೋಕದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಾಗೂ ರೋಗಿಗಳಿಗೆ ವರದಾನವಾಗಿರುವ ಒಂದು ಶಸ್ತ್ರಚಿಕಿತ್ಸೆ ಎಂದರೆ ಅದು ‘ಲ್ಯಾಪ್ರೋಸ್ಕೋಪಿ’ ಶಸ್ತ್ರಚಿಕಿತ್ಸೆ ಎನ್ನಬಹುದು. ಇದು ತೀರ ಹೊಸತಲ್ಲವಾದರೂ ಅನೇಕ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳು ಈಗ ಲ್ಯಾಪ್ರೋಸ್ಕೋಪಿ ವಿಧಾನವನ್ನು ಅಳವಡಿಸಿಕೊಂಡಿದ್ದರಿಂದ ಇದರ ಬಳಕೆ ಗಮನೀಯವಾಗಿ ಏರಿದೆ ಎನ್ನಬಹುದು. ‘ಉದರದರ್ಶಕ ಚಿಕಿತ್ಸೆ’ ಎಂದೂ ಕರೆಯಲಾಗುತ್ತದೆ.
‘ಲ್ಯಾಪ್ರೋಸ್ಕೋಪಿ’ ಎಂದರೆ, ಹೊಟ್ಟೆಯ ಮೇಲಿನ ಚರ್ಮದ ಮೇಲೆ ಸುಮಾರು ಒಂದು ಸೆಂ.ಮೀ. ವ್ಯಾಸದ ರಂಧ್ರಮಾಡಿ, ಲೋಹದ ನಳಿಕೆಯನ್ನು ಒಳತೂರಿಸಿ, ಹೊಟ್ಟೆಯಲ್ಲಿನ ಅಂಗಗಳನ್ನು ನೋಡುವುದು ಎಂದರ್ಥ. ಇದರ ಪ್ರಥಮ ಉಪಯೋಗ ಆಗಿದ್ದು 1901ರಲ್ಲಿ. ಜರ್ಮನಿಯ ವೈದ್ಯನೊಬ್ಬ ನಾಯಿಯ ಹೊಟ್ಟೆಯನ್ನು ಇಂಥ ಒಂದು ಲ್ಯಾಪ್ರೋಸ್ಕೋಪ್ ನಳಿಕೆಯ ಮೂಲಕ ವೀಕ್ಷಿಸಿದ್ದ. ಅನಂತರ ಎಂಬತ್ತು-ತೊಂಬತ್ತರ ದಶಕಗಳಲ್ಲಿ ಲ್ಯಾಪ್ರೋಸ್ಕೋಪಿ ವಿಧಾನ ಜನಪ್ರಿಯವಾಗಿ ಅನೇಕ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳು ಈ ಹೊಸ ಆವಿಷ್ಕಾರಕ್ಕೆ ಹೊಂದಿಕೊಂಡವು.
ಕೆಲದಶಕಗಳ ಮೊದಲು ಹೊಟ್ಟೆಯ, ಸ್ತ್ರೀರೋಗಸಂಬಂಧಿ ಶಸ್ತ್ರಚಿಕಿತ್ಸೆಗಳು ಹೊಟ್ಟೆಯನ್ನು ಉದ್ದವಾಗಿ ಅಥವಾ ಅಡ್ಡವಾಗಿ ಕೊಯ್ಯುವ ಮೂಲಕ ನೆರವೇರುತ್ತಿದ್ದವು. ಉದಾಹರಣೆಗೆ, ಅಪೆಂಡಿಕ್ಸ್ ಅಥವಾ ಪಿತ್ತಕೋಶದ ತೊಂದರೆಗಳು, ಹರ್ನಿಯಾ, ಗರ್ಭಾಶಯ/ಅಂಡಾಶಯದ ತೊಂದರೆಗಳು ಇತ್ಯಾದಿ. ಇದರಿಂದ ರೋಗಿಗಳಿಗೆ ಸಹಜವಾಗಿಯೇ ಹೆಚ್ಚಿನ ನೋವು, ರಕ್ತಸ್ರಾವ ಉಂಟಾಗುತ್ತಿದ್ದವು. ಅಲ್ಲದೇ ಒಂದೆರಡು ವಾರ ಆಸ್ಪತ್ರೆಯಲ್ಲಿಯೇ ಆರೈಕೆ ಬೇಕಾಗುತ್ತಿತ್ತು. ಹೆಚ್ಚಿನ ಆ್ಯಂಟಿಬಯೋಟಿಕ್ ಔಷಧಗಳು, ನೋವುನಿವಾರಕ ಮಾತ್ರೆಗಳು ರೋಗಿಗಳಿಗೆ ಪಾರ್ಶ್ವಪರಿಣಾಮವನ್ನೂ ಉಂಟುಮಾಡುತ್ತಿದ್ದವು. ಈಗ ಈ ಶಸ್ತ್ರಚಿಕಿತ್ಸೆಗಳನ್ನು ಲ್ಯಾಪ್ರೋಸ್ಕೋಪಿ ವಿಧಾನದಲ್ಲಿ ಕೆಲವೇ ಚಿಕ್ಕ ರಂಧ್ರಗಳ ಮೂಲಕ ಮಾಡಬಹುದು. ಹಾಗಾಗಿ ಇದನ್ನು ‘ಕೀ ಹೋಲ್’ ಅಥವಾ ‘ಕನಿಷ್ಠ ಛೇದನ’ (ಮಿನಿಮಲಿ ಇನ್‌ವೇಸಿವ್) ಶಸ್ತ್ರಚಿಕಿತ್ಸೆಯೆಂದೂ ಕರೆಯುತ್ತಾರೆ.
ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗೆ ವಿಶೇಷ ಯಂತ್ರೋಪಕರಣಗಳ ಜೊತೆ ಹೆಚ್ಚಿನ ತರಬೇತಿಯೂ ಬೇಕಾಗುತ್ತದೆ. ಇಂಥ ಶಸ್ತ್ರಚಿಕಿತ್ಸೆಗಳಿಗೆ ಅರಿವಳಿಕೆ ನೀಡುವಲ್ಲಿ ಕೂಡ ಕೊಂಚ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಲ್ಯಾಪ್ರೋಸ್ಕೋಪಿಯ ಹೃದಯಭಾಗವೆಂದರೆ ಅದರ ಕ್ಯಾಮೆರಾ. ಮೊದಲು ಸಾದಾ ಗುಣಮಟ್ಟದ ಕ್ಯಾಮೆರಾಗಳಿಂದ ಹಿಡಿದು ‘3ಡಿ’ ಕ್ಯಾಮೆರಾದವರೆಗೂ ಬಂದ ತಂತ್ರಜ್ಞಾನ ಈಗ ‘ಎಚ್‌ಡಿ’ ಕ್ಯಾಮೆರಾಗಳವರೆಗೂ ಬೆಳೆದಿದೆ. ಇದರಲ್ಲಿ ಉದರದರ್ಶಕದ ಮೂಲಕ ಕಾಣುವ ಅಂಗಗಳು ಹೆಚ್ಚು ಸ್ಫುಟವಾಗಿರುತ್ತವೆ. ಇವು ನಿಖರವಾಗಿ ರೋಗವನ್ನು ಪತ್ತೆಮಾಡುವುದಲ್ಲದೆ ಶಸ್ತ್ರಚಿಕಿತ್ಸೆಯಲ್ಲೂ ಹೆಚ್ಚು ಸಹಕಾರಿ. ಕ್ಯಾಮೆರಾಗಳಂತೆಯೇ ಶಸ್ತ್ರಚಿಕಿತ್ಸಾ ಉಪಕರಣಗಳೂ ಕೂಡ ವಿಶೇಷವಾಗಿರುತ್ತವೆ. ತೆರೆದ ಶಸ್ತ್ರಚಿಕಿತ್ಸೆಯಲ್ಲಿ ಮಾಡುವ ಅಂಗಚ್ಛೇದ, ರಕ್ತಸ್ರಾವದ ನಿಲ್ಲಿಸುವಿಕೆ ಇನ್ನಿತರ ಕೆಲಸಗಳನ್ನು ಈ ವಿಶೇಷ ಉಪಕರಣಗಳು ಕೊಳವೆಯ ಮೂಲಕವೇ ಮಾಡುತ್ತವೆ.
ಲ್ಯಾಪ್ರೋಸ್ಕೋಪಿಯಲ್ಲಿ ಮೊದಲು ಹೊಟ್ಟೆಯನ್ನು ಇಂಗಾಲದ ಡೈಆಕ್ಸೈಡ್ ತೂರಿಸುವುದರ ಮೂಲಕ ಉಬ್ಬಿಸಲಾಗುತ್ತದೆ. ನಂತರ ಉಬ್ಬಿದ ಹೊಟ್ಟೆಯ ಮೇಲೆ 3-4 ಚಿಕ್ಕ ರಂಧ್ರಗಳನ್ನು ಮಾಡಿ ಅವುಗಳಲ್ಲಿ ಕೊಳವೆಗಳ ಮೂಲಕ ಕ್ಯಾಮೆರಾ ಮತ್ತಿತರ ಉಪಕರಣಗಳನ್ನು ತೂರಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ರೋಗಿಗೆ ಅರಿವಳಿಕೆ ನೀಡಿರುವುದರಿಂದ ಇವೆಲ್ಲವೂ ನೋವಿಲ್ಲದೇ ನಡೆಯುತ್ತವೆ. ಕೊನೆಗೆ ಇಂಗಾಲದ ಡೈಆಕ್ಸೈಡ್‌ನ್ನು ಹೊರಬಿಟ್ಟು ಕೊಳವೆಗಳನ್ನು ಹೊರತೆಗೆದು ರಂಧ್ರಗಳನ್ನು ಮುಚ್ಚಲಾಗುತ್ತದೆ. ಕೇವಲ ಚಿಕ್ಕ ಚಿಕ್ಕ ರಂಧ್ರಗಳನ್ನು ಮಾತ್ರ ಮಾಡುವುದರಿಂದ ಚರ್ಮದ ಮೇಲೆ ಹೆಚ್ಚಿನ ಗಾಯವಾಗುವುದಿಲ್ಲ. ನೋವೂ ಅತ್ಯಲ್ಪವಾಗಿರುವುದಲ್ಲದೇ ರಕ್ತಸ್ರಾವದ ತೊಂದರೆಯೂ ಕಡಿಮೆ. ಕೆಲಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯಾದ ಕೆಲವೇ ಗಂಟೆಗಳಲ್ಲಿ ರೋಗಿ ಮನೆಗೂ ತೆರಳಬಹುದು. ಮುಖ್ಯವಾಗಿ ರೋಗಿಗೆ ಬಹುದಿನಗಳವರೆಗೂ ಆಂಟಿಬಯೋಟಿಕ್ ಮತ್ತು ನೋವು ನಿವಾರಕ ಮಾತ್ರೆ/ಇಂಜೆಕ್ಷನ್‌ಗಳನ್ನು ನೀಡುವ ಅವಶ್ಯಕತೆ ಬೀಳುವುದಿಲ್ಲ.
ಲ್ಯಾಪ್ರೋಸ್ಕೋಪಿ ಯಶಸ್ವಿಯಾದ ನಂತರ ಇದೇ ಎಂಡೋಸ್ಕೋಪಿ ತಂತ್ರಜ್ಞಾನವನ್ನು ಬಳಸಿಕೊಂಡು ಕೀಲುಗಳ (ಆರ್ಥ್ರೋಸ್ಕೋಪಿ), ಎದೆಗೂಡಿನ (ಥೊರ‍್ಯಾಕೋಸ್ಕೋಪಿ), ಮೂತ್ರಜನಕಾಂಗದ, ಕರುಳಿನ, ಮೂಗಿನ ಮತ್ತು ಮಿದುಳಿನ ಶಸ್ತ್ರಚಿಕಿತ್ಸೆಗಳೂ ಈಗ ಹೆಚ್ಚಿನಸಂಖ್ಯೆಯಲ್ಲಿ ನಡೆಯುತ್ತಿವೆ. ಹೊಟ್ಟೆ ಮತ್ತು ಕಿಬ್ಬೊಟ್ಟೆಯ ಅನೇಕ ಶಸ್ತ್ರಚಿಕಿತ್ಸೆಗಳಂತೂ ಬಹುತೇಕ ಲ್ಯಾಪ್ರೋಸ್ಕೋಪಿ ವಿಧಾನದಲ್ಲೇ ನಡೆಯುತ್ತವೆ. ಗ್ರಾಮೀಣ ಸ್ತ್ರೀಯರಲ್ಲಿ ‘ಕರೆಂಟಿನ ಆಪರೇಷನ್’ ಎಂದೇ ಕರೆಯಲ್ಪಡುವ ಸಂತಾನಹರಣ ಶಸ್ತ್ರಚಿಕಿತ್ಸೆ ತುಂಬ ಜನಪ್ರಿಯ ಕೂಡ. ಬೊಜ್ಜುತನದ ನಿವಾರಣೆಗಾಗಿ ಮಾಡುವ ಕೆಲವು ಶಸ್ತ್ರಚಿಕಿತ್ಸೆಗಳಿಗೂ ಲ್ಯಾಪ್ರೋಸ್ಕೋಪಿಯ ಕೊಡುಗೆ ಅಪಾರ.
ಈಗ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗಳನ್ನು ರೋಬಾಟ್ ಮೂಲಕವೂ ಮಾಡಬಹುದು. ಶಸ್ತ್ರಚಿಕಿತ್ಸಕ ಆಪರೇಷನ್ ಕೋಣೆಯಲ್ಲಿರದೇ ಪಕ್ಕದ ಕೋಣೆಯಲ್ಲಿರುವ ‘ಕನ್‌ಸೋಲ್’ನಲ್ಲಿ (ವೀಡಿಯೊ ಗೇಮಿನಂತೆ ಜಾಯ್‌ಸ್ಟಿಕ್, ಮತ್ತಿತರೇ ಪರಿಕರಗಳನ್ನೊಳಗೊಂಡ ಪುಟ್ಟ ಕೊಠಡಿ) ಕುಳಿತುಕೊಂಡು ಆಪರೇಷನ್ ಕೋಣೆಯಲ್ಲಿರುವ ರೋಬಾಟ್‌ಗೆ ನಿರ್ದೇಶನ ನೀಡುತ್ತ ಅತ್ಯಂತ ಜಟಿಲ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು. ಸೂಕ್ಷ್ಮಾತಿಸೂಕ್ಷ್ಮ ಶಸ್ತ್ರಚಿಕಿತ್ಸೆಗಳ ಕೆಲವು ನಡೆಗಳು ಮಾನವಕೈಗಳಲ್ಲಿ ನಡುಕ, ಆಯಾಸ ತರಬಹುದು. ಆದರೆ ರೋಬಾಟ್ ಈ ಅಶಕ್ತತೆಯನ್ನು ಮೀರಿ ನಿಂತು ಜಟಿಲ ನಡೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಮೂಡಿಬಂದ ಮಹತ್ಸಾಧನೆಯೆಂದರೆ 2001ರಲ್ಲಿ ಫ್ರೆಂಚ್ ವೈದ್ಯರು ನ್ಯೂಯಾರ್ಕ್‌ನಿಂದ ರೋಬಾಟ್ ಮೂಲಕ ಫ್ರಾನ್ಸಿನ ಸ್ಟ್ರಾಸ್‌ಬರ್ಗಿನ ಆಸ್ಪತ್ರೆಯಲ್ಲಿನ ರೋಗಿಯೊಬ್ಬನಿಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಿದ್ದು! ಲಿಂಡ್‌ಬರ್ಗ್ ಶಸ್ತ್ರಚಿಕಿತ್ಸೆ ಎಂದೇ ಪ್ರಸಿದ್ಧಿಯಾದ ಈ ಘಟನೆಯಿಂದ ವೈದ್ಯಕೀಯ ರಂಗದಲ್ಲಿ ಹೊಸ ಆಶಾಕಿರಣವೊಂದು ಉದಯವಾಯಿತು. ಮುಂಬರುವ ದಿನಗಳಲ್ಲಿ ಶಸ್ತ್ರಚಿಕಿತ್ಸಾತಜ್ಞ ಒಂದೇ ಕಡೆ ಕುಳಿತು ದೂರದ ಆಸ್ಪತ್ರೆಗಳಲ್ಲಿ ಗುಣಮಟ್ಟದ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದಾಗಿದೆ. ಭಾರತದಂತಹ ದೇಶಗಳಲ್ಲಿ ಇದು ರೋಗಿಗಳಿಗೆ ವರದಾನವಾಗಬಹುದಾದ ಎಲ್ಲ ಸಾಧ್ಯತೆಗಳಿವೆ.
ಲ್ಯಾಪ್ರೋಸ್ಕೋಪಿಯಿಂದ ಏನಾದರೂ ತೊಂದರೆಗಳಿವೆಯೇ?
ವಿರಳ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಜಟಿಲವಾದರೆ ಹೊಟ್ಟೆಯನ್ನು ಕೊಯ್ದು ಸಾಂಪ್ರದಾಯಿಕ ರೀತಿಯಲ್ಲಿ ತೆರೆದ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಇದನ್ನು ಬಿಟ್ಟರೆ ರಕ್ತಸ್ರಾವ, ಸೋಂಕು, ನೋವು ಇತ್ಯಾದಿ ಪಾರ್ಶ್ವಪರಿಣಾಮಗಳು ತೆರೆದ ಶಸ್ತ್ರಚಿಕಿತ್ಸೆಗಳಿಗಿಂತಲೂ ತೀರಾ ಕಡಿಮೆಯೆಂದೇ ಹೇಳಬಹುದು. ಕೆಲವೊಮ್ಮೆ ಇಂಗಾಲದ ಡೈಆಕ್ಸೈಡ್‌ನಿಂದ ಬಲಭುಜದ ನೋವು ಕೊಂಚಮಟ್ಟಿಗೆ ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.