ಮೇರಿ ಬ್ರಂಕೋವ್
ಚಿತ್ರಕೃಪೆ: ನೊಬೆಲ್ ಅಧಿಕೃತ ವೆಬ್‌ಸೈಟ್
ಮೇರಿ ಬ್ರಂಕೋವ್ ಅಮೆರಿಕದ ಸಿಯಾಟಲ್ ಪಟ್ಟಣದಲ್ಲಿರುವ ಇನ್ಸ್‌ಟಿಟ್ಯೂಟ್ ಆಫ್ ಸಿಸ್ಟಮ್ಸ್ ಬಯಾಲಜಿ ಸಂಸ್ಥೆಯಲ್ಲಿ ಯೋಜನಾ ನಿರ್ವಹಣಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಇವರು ನಡೆಸಿದ ಸಂಶೋಧನೆಯಿಂದಾಗಿ ಈಗ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಾರೆ. ‘ನನ್ನ ಕಾರ್ಯಕ್ಷೇತ್ರವೇ ಬೇರೆಯಾಗಿ ಬಿಟ್ಟಿದೆ. ನಾನೀಗ, ಟಿ-ಕೋಶಗಳ ಬಗ್ಗೆ ಸಂಶೋಧನೆಯನ್ನು ಮಾಡುತ್ತಿಲ್ಲ’ ಎನ್ನುತ್ತಾರೆ, ಬ್ರಂಕೋವ್.
ಆದರೆ ಇಪ್ಪತ್ತು ವರ್ಷಗಳ ಹಿಂದೆ ಬ್ರಂಕೋವ್ ನಡೆಸಿದ ಸಂಶೋಧನೆ ಇಂದು ಫಲ ನೀಡುತ್ತಿದೆ ಎನ್ನಬಹುದು. ಆಗ ಇವರು ವಾಷಿಂಗ್ಟನ್ ರಾಜ್ಯದ ಬೊಥೇಲ್ ಪಟ್ಟಣದಲ್ಲಿದ್ದ ಸೆಲ್‌ಟೆಕ್ ಕೈರೊಸೈನ್ಸ್ ಎನ್ನುವ ಔಷಧ ಕಂಪನಿಯಲ್ಲಿ ಸಂಶೋಧಕಿಯಾಗಿದ್ದರು. ಇದೇ ಸಂಸ್ಥೆಯಲ್ಲಿ ಈ ವರ್ಷದ ನೊಬೆಲ್ ಪಾರಿತೋಷಕವನ್ನು ಪಡೆದಿರುವ ಮತ್ತೊಬ್ಬ ವಿಜ್ಞಾನಿ ಫ್ರೆಡ್ ರಾಮ್ಸ್‌ಡೆಲ್ ಕೂಡ ಇದ್ದರು. ಬ್ರಂಕೋವ್ ಅವರ ಸಹೋದ್ಯೋಗಿಯಾಗಿದ್ದರು.
ಆ ಸಂದರ್ಭದಲ್ಲಿ ಜಪಾನಿನ ಶಿಮೊನ್ ಸಕಾಗುಚಿ ರಕ್ತದಲ್ಲಿರುವ ಬಿಳಿಯ ರಕ್ತಕೋಶಗಳಲ್ಲಿ ರೋಗಪ್ರತಿರೋಧವನ್ನು ನಿಯಂತ್ರಿಸುವ ಟಿ-ಕೋಶಗಳು ಇವೆ ಎಂದು ಪತ್ತೆ ಮಾಡಿದ್ದರು. ಜೊತೆಗೆ ಅವುಗಳಿಗೂ ಆಟೊ ಇಮ್ಯೂನ್ ಕಾಯಿಲೆಗೂ ಸಂಬಂಧ ಇರಬಹುದು ಎಂಬ ಸೂಚನೆಯನ್ನೂ ನೀಡಿದ್ದರು. ಇದು ಇವರಿಬ್ಬರಿಗೂ ಕುತೂಹಲ ಎನ್ನಿಸಿತು. ಏಕೆಂದರೆ ಬ್ರಂಕೋವ್ ಮತ್ತು ರಾಮ್ಸ್‌ಡೆಲ್ ಕೂಡ ಆಟೊ ಇಮ್ಯೂನ್ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಹುಡುಕಲು ಪ್ರಯತ್ನಿಸುತ್ತಿದ್ದರು.
ಆಟೊ ಇಮ್ಯೂನ್ ಕಾಯಿಲೆಗಳಿಗೆ ಚಿಕಿತ್ಸೆ ಹುಡುಕುವ ಪ್ರಯೋಗಗಳಲ್ಲಿ ಇವರು ವಿಶಿಷ್ಟ ಬಗೆಯ ಇಲಿಯೊಂದನ್ನು ಬಳಸುತ್ತಿದ್ದರು. ಈ ಇಲಿ ಪರಮಾಣು ಬಾಂಬು ಯೋಜನೆಯ ಹುಟ್ಟು. ಪರಮಾಣು ಬಾಂಬನ್ನು ತಯಾರಿಸುವ ಸಂದರ್ಭದಲ್ಲಿ, ವಿಕಿರಣಗಳ ಪರಿಣಾಮವನ್ನು ಇಲಿಗಳ ಮೇಲೆ ಪರೀಕ್ಷಿಸುವಾಗ ಹುಟ್ಟಿದ ಒಂದು ತಳಿ. ಈ ತಳಿಯಲ್ಲಿ ಹುಟ್ಟುವ ಗಂಡುಮರಿಗಳಲ್ಲಿ ಅರ್ಧಕ್ಕರ್ಧ ಒಂದು ಬಗೆಯ ಆಟೊ ಇಮ್ಯೂನ್ ಕಾಯಿಲೆಯಿಂದ ನರಳುತ್ತವೆ. ಗಂಡುಇಲಿಗಳಲ್ಲಿಯಷ್ಟೆ ಈ ಕಾಯಿಲೆ ಕಾಣಿಸುತ್ತಿದ್ದುದರಿಂದ, ಇದು ‘ಎಕ್ಸ್’ ಎನ್ನುವ ವರ್ಣತಂತುವಿನ ಮೇಲೆ ಇರುವುದು ಖಚಿತವಾಗಿತ್ತು. ಎಕ್ಸ್–ಕ್ರೊಮೋಸೋಮು ಎಲ್ಲ ಜೀವಕೋಶಗಳಲ್ಲಿಯೂ ಇರುವ ಲಿಂಗವರ್ಣತಂತು ಜೋಡಿಯಲ್ಲಿ ಒಂದು. ಇದು ಸಾಮಾನ್ಯವಾಗಿ ತಾಯಿಯಿಂದ ಮರಿಗೆ ದಾಟಿ ಬರುತ್ತದೆ. ‘ವೈ’ ಎಂಬ ಹೆಸರಿನ, ಜೋಡಿಯ ಇನ್ನೊಂದು ವರ್ಣತಂತು ತಂದೆಯಿಂದ ಬಳುವಳಿಯಾಗಿರುತ್ತದೆ. ಈ ರೋಗಿಷ್ಠ ಇಲಿಗಳ ತಳಿಗಳನ್ನು ‘ಸ್ಕರ್ಫಿ’ ಎಂದು ಕರೆದಿದ್ದರು.
ಸ್ಕರ್ಫಿ ಇಲಿಗಳಲ್ಲಿ ಹಲವು ತೊಂದರೆಗಳು ಕಾಣಿಸುತ್ತವೆ. ಮೈ ಮೇಲೆ ರೋಮಗಳ ಜಾಗದಲ್ಲಿ ಹುರುಪೆಗಳಿರುತ್ತವೆ. ಗುಲ್ಮ ಮತ್ತು ದುಗ್ಧ ಗ್ರಂಥಿಗಳು ಸಾಮಾನ್ಯಕ್ಕಿಂತಲೂ ಊದಿಕೊಂಡಿರುತ್ತವೆ. ಅಂದರೆ ಯಾವುದೋ ದಾಳಿ ನಡೆಯುತ್ತಿರುವ ಕುರುಹು. ಈ ಇಲಿಗಳು ಹೆಚ್ಚು ಕಾಲ ಬದುಕುವುದೂ ಇಲ್ಲ. ಇವೆಲ್ಲವೂ ವಿಕಿರಣದಿಂದ ಉಂಟಾದ ಒಂದು ದೋಷ ಎಂಬುದು ಸ್ಪಷ್ಟವಾಗಿತ್ತು. ಅದು ಎಕ್ಸ್ ವರ್ಣತಂತುವಿನ ಮೇಲೆ ಇರಬೇಕು ಎಂಬುದೂ ನಿರ್ಣಯವಾಗಿತ್ತು. ಆದರೆ ವರ್ಣತಂತುವಿನಲ್ಲಿ ಎಲ್ಲಿ ಎಂಬುದು ಗೊತ್ತಿರಲಿಲ್ಲ. ಜೊತೆಗೆ ಅದರ ಕೆಲಸ ಏನು ಎಂಬುದೂ ಗೊತ್ತಿರಲಿಲ್ಲ. ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿದವರು ಬ್ರಂಕೋವ್.
ಸ್ಕರ್ಫಿ ಇಲಿಯ ಎಕ್ಸ್ ಕ್ರೋಮೋಸೋಮಿನಲ್ಲಿ ಈ ದೋಷ ಎಲ್ಲಿದೆ ಎಂದು ಪತ್ತೆ ಮಾಡುವ ಕೆಲಸ ಹದಿನೇಳು ಕೋಟಿ ಅಕ್ಷರಗಳಿರುವ ಪುಸ್ತಕದಲ್ಲಿ ಯಾವುದೋ ಪ್ಯಾರಾದಲ್ಲಿ ಇರುವ ಯಾವುದೋ ಅಕ್ಷರದೋಷವನ್ನು ಹುಡುಕಿದ ಹಾಗೆ. ಬ್ರಂಕೋವ್ ಮತ್ತು ರಾಮ್ಸ್‌ಡೆಲ್ ಸಂಶೋಧನೆ ನಡೆಸುತ್ತಿದ್ದ ಸಂದರ್ಭದಲ್ಲಿ ಇದು ಬಹಳ ಶ್ರಮ ಹಾಗೂ ನಿಧಾನದ ಕೆಲಸ ಆಗಿತ್ತು. ಹಾಗಿದ್ದೂ ಹತ್ತಾರು ವರ್ಷಗಳ ಕಾಲ ಸಂಶೋಧನೆ ನಡೆಸಿದ ಬ್ರಂಕೋವ್, ಎಕ್ಸ್ ವರ್ಣತಂತುವಿನಲ್ಲಿರುವ ಸಾವಿರಾರು ಜೀನ್‌ಗಳಲ್ಲಿ ಇಪ್ಪತ್ತು ಜೀನ್‌ಗಳ ಗುಂಪಿನಲ್ಲಿ ಈ ದೋಷ ಇರಬೇಕು ಎಂದು ಪತ್ತೆ ಮಾಡಿದರು. ಅನಂತರ ಈ ಇಪ್ಪತ್ತು ಜೀನ್‌ಗಳನ್ನೂ ಒಂದೊಂದನ್ನಾಗಿ ಆರೋಗ್ಯವಂತ ಇಲಿಯ ಅದೇ ಇಪ್ಪತ್ತು ಜೀನ್‌ಗಳ ಜೊತೆಗೆ ಹೋಲಿಸಬೇಕಿತ್ತು. ಪ್ರತಿಯೊಂದನ್ನು ಹೋಲಿಸುವುದಕ್ಕೂ ಮೊದಲಿಗೆ ವರ್ಣತಂತುವಿನ ಆ ಭಾಗದ ತುಣುಕನ್ನು ಗುರುತಿಸಿ, ಬೇರ್ಪಡಿಸಬೇಕಿತ್ತು. ಅನಂತರ ಅದರಲ್ಲಿರುವ ಡಿಎನ್‌ಎ ಸರಣಿಯನ್ನು ವಿವರಿಸಬೇಕಿತ್ತು. ಇದೇ ರೀತಿ ಆರೋಗ್ಯವಂತ ಇಲಿಯ ಡಿಎನ್‌ಎ ಸರಣಿಯನ್ನೂ ವಿವರಿಸಬೇಕಿತ್ತು. ಇವೆರಡೂ ಡಿಎನ್‌ಎ ಸರಣಿಯನ್ನು ಒಂದೊಂದೇ ಅಕ್ಷರವನ್ನಾಗಿ ಹೋಲಿಸಬೇಕಿತ್ತು.
ಡಿಎನ್‌ಎಗೆ ಹೋಲಿಸುವುದು ಎಂದರೆ ಕಣ್ಣಿಗೆ ಕಾಣದ ಮಾಯದ ವಸ್ತುವಿನಲ್ಲಿ ವ್ಯತ್ಯಾಸಗಳನ್ನು ಹುಡುಕುವುದು ಎಂದಷ್ಟೆ. ಅದಕ್ಕಾಗಿ ಅತಿ ಎಚ್ಚರದಿಂದ ರಾಸಾಯನಿಕ ಕ್ರಿಯೆಗಳನ್ನು ನಡೆಸಬೇಕಿತ್ತು. ಈ ಎಲ್ಲವನ್ನೂ ನಡೆಸಿದ ನಂತರವಷ್ಟೆ ವ್ಯತ್ಯಾಸ ಗೊತ್ತಾಗಬೇಕು. ಬ್ರಂಕೋವ್ ಮತ್ತು ರಾಮ್ಸ್‌ಡೆಲ್ ಹೀಗೆ ಸ್ಕರ್ಫಿ ಇಲಿಯ ಎಕ್ಸ್ ವರ್ಣತಂತುವಿನ ಆ ದೋಷಪೂರ್ಣ ಭಾಗದಲ್ಲಿದ್ದ ಹತ್ತೊಂಬತ್ತು ಜೀನ್‌ಗಳನ್ನು ಆರೋಗ್ಯವಂತ ಇಲಿಯದ್ದರ ಜೊತೆಗೆ ಹೋಲಿಸಿ ನೋಡಿದರು. ಏನೂ ವ್ಯತ್ಯಾಸ ಕಂಡಿರಲಿಲ್ಲ. ಅಂತೂ ಕೊನೆಗೆ ಇಪ್ಪತ್ತನೆಯ ಜೀನನ್ನು ಹೋಲಿಸಿದಾಗ ಒಂದು ವ್ಯತ್ಯಾಸ ಕಂಡಿತು. ಈ ಬಗೆಯಲ್ಲಿ ವ್ಯತ್ಯಾಸ ಕಂಡ ಜೀನ್ ಅನ್ನು ‘ಫಾಕ್ಸ್ 3’ (ಫಾಕ್ಸ್ ತ್ರೀ) ಎಂದು ಕರೆದರು. ಫಾಕ್ಸ್ 3 ಜೀನ್ ಪತ್ತೆ, ಆಟೊ ಇಮ್ಯೂನ್ ರೋಗವನ್ನು ಅರ್ಥ ಮಾಡಿಕೊಳ್ಳುವ ಹಾದಿಯಲ್ಲಿ ಮಹಾತಿರುವೆನ್ನಿಸಿದೆ. ಇದನ್ನು ಸಾಧಿಸಿದ್ದು ಮೇರಿ ಬ್ರಂಕೋವ್ ಮತ್ತು ಫ್ರೆಡ್ ರಾಮ್ಸ್‌ಡೆಲ್.
ಬ್ರಂಕೋವ್ ಸಂಶೋಧನೆ ಮಾಡಿದ್ದೆಲ್ಲವೂ ಖಾಸಗಿ ಕಂಪೆನಿಯಲ್ಲಿ. ಅವರು ಉದ್ಯೋಗಕ್ಕೆ ಸೇರಿದ್ದು ಡಾರ್ವಿನ್ ಮಾಲಿಕ್ಯುಲಾರ್ ಕಾರ್ಪೊರೇಷನ್ ಎನ್ನುವ ಜೈವಿಕ ತಂತ್ರಜ್ಞಾನದ ಕಂಪನಿಯಲ್ಲಿ. ಅನಂತರ ಆ ಕಂಪನಿ ಹಲವು ಬಾರಿ ಮಾರಾಟವಾಗಿ, ಬೇರೆ, ಬೇರೆ ಕಂಪನಿಗಳ ಜೊತೆಗೆ ಸೇರಿಕೊಂಡಿತು. ಇಷ್ಟೆಲ್ಲ ನಡೆದಾಗಲೂ ಮೇರಿ ಅಲ್ಲಿಯೇ ತಮ್ಮ ಉದ್ಯೋಗ ಮುಂದುವರೆಸಿದ್ದರು. ಫಾಕ್ಸ್ 3 ಪತ್ತೆಯಾದಾಗ ಕಂಪನಿ ಇಂಗ್ಲೆಂಡಿನ ಕಂಪನಿಯ ಒಡೆತನದಲ್ಲಿ ಇತ್ತು. ಯಾವುದೋ ಕಾರಣಕ್ಕೆ, ಬೊಥೆಲ್ ಪಟ್ಟಣದಲ್ಲಿದ್ದ ಸಂಶೋಧನಾಲಯವನ್ನು ಮುಚ್ಚಿಬಿಟ್ಟಿತು. ಬ್ರಂಕೋವ್ ಕೆಲಸ ಕಳೆದುಕೊಂಡು, ಬೇರೊಂದು ಕಂಪೆನಿ ಸೇರಿದರು. ಟಿ ಕೋಶಗಳ ಸಂಶೋಧನೆ ಅಲ್ಲಿಗೇ ನಿಂತಿತು.
ಎಂದೋ ನಡೆಸಿದ ಕೆಲಸ. ಕಷ್ಟದ ಹಾದಿಯಲ್ಲಿ ನಡೆದು ಮಾಡಿದ ಹೊಸ ಶೋಧ. ಅದಕ್ಕಾಗಿ ಪ್ರಪಂಚದ ಮೇರು ಪ್ರಶಸ್ತಿ ಮೇರಿ ಬ್ರಂಕೋವ್ ಅವರಿಗೆ ದಕ್ಕಿದೆ. ‘ಕರ್ಮ ಬೆನ್ನು ಹತ್ತುತ್ತದೆ’ ಎಂದು ಒಳ್ಳೆಯದಕ್ಕೂ ಹೇಳಬಹುದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.