ADVERTISEMENT

ಕೋವಿಡ್-19: ಆತಂಕ ಸೃಷ್ಟಿಸಿದ ರಕ್ತ ಹೆಪ್ಪುಗಟ್ಟುವ ನಿಗೂಢ ಲಕ್ಷಣ

ಏಜೆನ್ಸೀಸ್
Published 28 ಏಪ್ರಿಲ್ 2020, 11:07 IST
Last Updated 28 ಏಪ್ರಿಲ್ 2020, 11:07 IST
   

ವಾಷಿಂಗ್ಟನ್: ಲಾಸ್ ಏಂಜಲೀಸ್‌ನಲ್ಲಿರುವ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಮೂರು ವಾರಗಳನ್ನು ಕಳೆದ ನಂತರ ವೈದ್ಯರು ಕೋವಿಡ್ ಚಿಕಿತ್ಸೆಯಲ್ಲಿದ್ದ 41 ವರ್ಷದ ಬ್ರಾಡ್‌ವೇ ನಿಕ್ ಕೊರ್ಡೆರೊ ಅವರ ಬಲಗಾಲನ್ನು ಕತ್ತರಿಸಿ ತೆಗೆಯಬೇಕಾಗಿ ಬಂತು.

ರಕ್ತ ಹೆಪ್ಪುಗಟ್ಟಿರುವುದೇ ಇದಕ್ಕೆ ಕಾರಣ. ಕೋವಿಡ್ -19 ರೋಗ ಬಾಧಿತರಿಗೆ ರಕ್ತ ಹೆಪ್ಪುಗಟ್ಟುವಿಕೆ ಲಕ್ಷಣ ಕಾಣಿಸಿಕೊಂಡಿರುವುದು ಚೀನಾ, ಯುರೋಪ್ ಮತ್ತು ಅಮೆರಿಕದಲ್ಲಿ ಆತಂಕ ಸೃಷ್ಟಿಸಿದೆ. ತುರ್ತು ನಿಗಾ ಘಟಕದಲ್ಲಿರುವ ರೋಗಿಗಳಿಗೆ ಹಲವಾರು ಕಾರಣಗಳಿಂದ ರಕ್ತ ಹೆಪ್ಪುಗಟ್ಟುತ್ತದೆ. ಆದರೆ ಕೋವಿಡ್-19 ರೋಗ ಬಾಧಿತರಲ್ಲಿ ಇದು ಅಧಿಕವಾಗಿ ಕಾಣಿಸುತ್ತದೆ.

40 ವರ್ಷದ ವ್ಯಕ್ತಿಯೊಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದೆ. ಅವರ ಬೆರಳಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಬೆರಳೇ ಇಲ್ಲದಂತೆ ಕಾಣಿಸುತ್ತಿತ್ತು.ಆದರೆ ವೈರಸ್‌ನಿಂದಾಗಿಯೇ ಬೆರಳು ಆ ರೀತಿ ಆಗಿದ್ದು ಎಂದು ಎನ್‌ವೈಯುನ ಐಸಿಯು ಡಾಕ್ಟರ್ ಲಾಂಗೋನ್ ಹೇಳಿದ್ದಾರೆ.

ADVERTISEMENT

ಕೆಲವೊಂದು ರೋಗಿಗಳು ರಕ್ತದ ಸಂಚಾರದ ಕೊರತೆಯಿಂದ ಕಾಲು ಮತ್ತು ಕೈ ಮರಗಟ್ಟಿದಂತೆ ಇರುತ್ತದೆ. ಹಾಗಾಗಿ ಆ ಭಾಗ ಕತ್ತರಿಸಬೇಕಾಗಿ ಬರಬಹುದು, ಅಥವಾ ರಕ್ತನಾಳಗಳು ಹಾನಿಗೊಳಗಾಗಿ ಅದು ಉದುರಿ ಹೋಗಲೂಬಹುದು.

ನಮ್ಮ ಕೈಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟಿದರೆ ಅಷ್ಟೊಂದು ಅಪಾಯವಿಲ್ಲ, ಅದೇ ವೇಳೆ ಶ್ವಾಸಕೋಶ, ಹೃದಯ ಅಥವಾ ಮೆದುಳಿಗೆ ರಕ್ತ ಸಂಚಾರದಲ್ಲಿ ಈ ರೀತಿ ಆದರೆ ಧಮನಿಗಳಲ್ಲಿ ತಡೆಯುಂಟಾಗಿ ಹೃದಯಾಘಾತ, ಹೃದಯ ಸ್ತಂಭನ ಉಂಟಾಗಬಹುದು.

ನೆದರ್ಲೆಂಡ್‌ನ ಅಧ್ಯಯನ ವರದಿಯೊಂದರ ಪ್ರಕಾರ 184 ರೋಗಿಗಳ ಪೈಕಿ ಶೇ.31 ಮಂದಿಗೆ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣಗಳಿರುತ್ತವೆ. ಹೀಗಿದ್ದರೂ ದೇಹದ ಭಾಗವನ್ನು ಕತ್ತರಿಸುವ ಪ್ರಕರಣಗಳು ತುಂಬಾ ವಿರಳ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಈ ವಿಷಯದ ಬಗ್ಗೆ ಅಧ್ಯಯನ ಮಾಡಲು ನ್ಯೂಯಾರ್ಕ್‌ನ ಪ್ರೆಸ್ಬಿಟೇರಿಯನ್ ಆಸ್ಪತ್ರೆಯ ವೈದ್ಯ ಬೆಹನೂದ್ ಬಿಕಾಡೆಲಿ ಅಂತರರಾಷ್ಚ್ರೀಯ ಮಟ್ಟದ ತಜ್ಞರ ತಂಡವೊಂದನ್ನು ರಚಿಸಿದ್ದಾರೆ. ಇವರ ಸಂಶೋಧನೆಗಳು ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಡಿಯಲ್ಲಿ ಪ್ರಕಟವಾಗಿದೆ.

ಕೋವಿಡ್-19 ರೋಗಿಗಳಿಗೆ ರಕ್ತ ಹೆಪ್ಪುಗಟ್ಟದಿರುವಂತೆ ತಡೆಯುವ ಔಷಧಿಗಳನ್ನು ನೀಡಬೇಕಾಗುತ್ತದೆ ಎಂದು ಬಿಕ್‌ಡೆಲಿ ಹೇಳಿದ್ದಾರೆ. ಇದಕ್ಕೆ ಕಾರಣವೇನು? ಎಂಬುದು ಸರಿಯಾಗಿ ಗೊತ್ತಿಲ್ಲ ಎಂದು ಹೇಳಿದ ಅವರು ಸಾಧ್ಯತೆಯ ಕೆಲವು ಉದಾಹರಣೆಗಳನ್ನು ನೀಡಿದ್ದಾರೆ.ಕೋವಿಡ್-19 ರೋಗ ತೀವ್ರವಾಗಿದ್ದರೆ, ಅವರಿಗೆ ಶ್ವಾಸಕೋಶ ಅಥವಾ ಹೃದ್ರೋಗ ಇದ್ದರೆ ಅವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪ್ರಮಾಣ ಹೆಚ್ಚಾಗಿರುತ್ತದೆ.

ಐಸಿಯುವಿನಲ್ಲಿರುವ ರೋಗಿಗಳು ಸುಮಾರು ಹೊತ್ತು ಒಂದೇ ಭಂಗಿಯಲ್ಲಿ ಮಲಗಿಕೊಂಡೇ ಇರುವುದರಿಂದ ಅವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಆಗಾಗ ದೇಹ ಅಲುಗಾಡಿಸುತ್ತಾ, ಚಲನೆ ಮಾಡುತ್ತಿರಬೇಕು ಎಂದು ಹೇಳುವುದು.

ಕೋವಿಡ್-19 ರೋಗ ರೋಗಪ್ರತಿರೋಧ ಶಕ್ತಿಗೆ ಸಂಬಂಧಿಸಿದ್ದು. ಇದನ್ನು ಸೈಟೋಕಿನ್ ಸ್ಟ್ರೋಮ್ ಅಂತಾರೆ. ಕೆಲವೊಂದು ಅಧ್ಯಯನಗಳ ಪ್ರಕಾರ ಇದಕ್ಕೂ ರಕ್ತಹೆಪ್ಪುಗಟ್ಟುವಿಕೆಯೊಂದಿಗೆ ನಂಟು ಇದೆ.ಕೆಲವೊಂದು ವೈರಸ್ ಸೋಂಕು ಕಾಯಿಲೆಯಂತೆಯೇ ವೈರಸ್‌ನಿಂದಲೇ ರಕ್ತದ ಹೆಪ್ಪುಗಟ್ಟುವಿಕೆ ಆಗುತ್ತದೆ.

ದಿ ಲಾನ್ಸೆಟ್ ಜರ್ನಲ್‌ನಲ್ಲಿ ಕಳೆದವಾರ ಪ್ರಕಟವಾದ ವರದಿ ಪ್ರಕಾರ ರಕ್ತನಾಳಮತ್ತು ದೇಹಾಂಗದ ಒಳ ಪದರ ಅಂದರೆ ಎಂಡೋಥೇಲಿಯಂನ್ನು ಬಾಧಿಸುತ್ತದೆ.ಇದು ರಕ್ತಹೆಪ್ಪುಗಟ್ಟುವಿಕೆ ಪ್ರಕ್ರಿಯೆಗೆ ಕಾರಣವಾಗುತ್ತದೆ.

ಬ್ರೊಸ್‌ನಹಾನ್ ಅವರ ಪ್ರಕಾರ, ಕೆಲವು ರೋಗಿಗಳಿಗ ಹೆಪರಿನ್‌ನಂಥಾ ರಕ್ತಹೆಪ್ಪುಗಟ್ಟುವಿಕೆ ತಡೆ ಔಷಧಗಳು ಪರಿಣಾಮಕಾರಿ ಆಗಿದ್ದರೂ ಎಲ್ಲ ರೋಗಿಗಳಿಗೆ ಇದು ಪರಿಣಾಮಕಾರಿ ಆಗುವುದಿಲ್ಲ. ಯಾಕೆಂದರೆ ಆ ಹೊತ್ತಿಗೆ ರಕ್ತ ಹೆಪ್ಪುಗಟ್ಟುವಿಕೆ ತುಂಬಾ ಕಡಿಮೆ ಆಗಿರುತ್ತದೆ. ಹಲವಾರು ಮೈಕ್ರೋಕ್ಲೋಟ್ (ಸಣ್ಣ ಪ್ರಮಾಣದ ರಕ್ತ ಹೆಪ್ಪುಗಟ್ಟುವಿಕೆ) ಇರುತ್ತದೆ. ಎಲ್ಲಿ ರಕ್ತ ಹೆಪ್ಪುಗಟ್ಟಿರುವುದು ಎಂಬುದು ನಮಗೆ ಗೊತ್ತಿರುವುದಿಲ್ಲ.

ಮರಣೋತ್ತರ ಪರೀಕ್ಷೆ ಮಾಡಿದಾಗ ಕೆಲವರ ಶ್ವಾಸಕೋಶದಲ್ಲಿ ಹಲವಾರು ಮೈಕ್ರೊಕ್ಲೋಟ್ಸ್ ಕಂಡು ಬಂದದ್ದಿದೆ.ಈ ಹೊಸ ಕೌತುಕವು ಹಲವಾರು ಹಳೇ ಪ್ರಶ್ನೆಗಳಿಗ ಉತ್ತರವನ್ನು ನೀಡಿದೆ.

ರಕ್ತದಲ್ಲಿ ಕಡಿಮೆ ಆಮ್ಲಜನಕವಿರುವ ರೋಗಿಗಳಿಗೆ ವೆಂಟಿಲೇಟರ್ ಯಾಕೆ ಸಾಕಾಗುತ್ತಿಲ್ಲ ಎಂಬುದಕ್ಕೆ ಅವರ ಶ್ವಾಸಕೋಶದಲ್ಲಿ ಮೈಕ್ರೊಕ್ಲೋಟ್ಸ್ ಇರುವುದೇ ಕಾರಣ ಎಂದು ಮನ್‌ಹಟನ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯ ಐಸಿಯು ವೈದ್ಯೆ ಸಿಸಿಲಿಯಾ ಮಿರಾಂಟ್ ಬೋರ್ಡ್ ಹೇಳಿದ್ದಾರೆ.

ಈ ಹಿಂದೆ ತೀವ್ರವಾದ ಉಸಿರಾಟದ ಸೋಂಕು (ಇದನ್ನು ವೆಟ್ ಲಂಗ್ ಎಂದೂ ಕರೆಯುತ್ತಾರೆ) ತಡೆಯಲುಬೇಕಾದ ಕ್ರಮಗಳನ್ನು ಬಳಸಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲವೊಂದು ಪ್ರಕರಣಗಳಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿರುವುದರಿಂದ ಅಲ್ಲ.ಮೈಕ್ರೋಕ್ಲೋಟಿಂಗ್‌ನಿಂದಾಗಿ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ ಮತ್ತು ಶ್ವಾಸಕೋಶಕ್ಕೆ ಆಮ್ಲಜನಕದ ಪೂರೈಕೆ ಆಗುವುದಿಲ್ಲ.

ಚೀನಾದ ವುಹಾನ್‌ನಲ್ಲಿ ಕೊರೊನಾ ವೈರಸ್ ತಲೆದೋರಿ 5 ತಿಂಗಳಾಗಿದ್ದು, ಅಧ್ಯಯನಕಾರರು ಪ್ರತಿದಿನ ಸಂಶೋಧನೆ ಮಾಡುತ್ತಿದ್ದಾರೆ.ಈ ಬಗ್ಗೆ ಅಚ್ಚರಿ ಪಡುವ ಅಗತ್ಯವೇನಿಲ್ಲ. ವೈರಸ್‌ಗಳು ಇಂಥಾ ಕಿತಾಪತಿಗಳನ್ನು ಮಾಡುತ್ತಿರುತ್ತವೆ ಎಂದು ಬ್ರೊಸ್‌ನಾಹನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.