ಕಾಲ್ಪನಿಕ ಎಸ್ 1 ಗ್ರಹ
ಬೆಂಗಳೂರು: ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಇರಬಹುದಾದ ಗ್ರಹವನ್ನು ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಇತ್ತೀಚೆಗೆ ಪತ್ತೆ ಹಚ್ಚಿದೆ.
ಈ ವಿಷಯವನ್ನು ನಾಸಾದ ವೆಬ್‌ಸೈಟ್ science.nasa.gov ದಲ್ಲಿ ಪ್ರಕಟಿಸಲಾಗಿದೆ.
ಭೂಮಿಯಿಂದ ಕೇವಲ 4 ಜ್ಯೋತಿರ್ವರ್ಷಗಳ (light-years) ಅಂತರದಲ್ಲಿರುವ ‘ಆಲ್ಫಾ ಸೆಂಟೌರಿ’ ಎಂಬ ನಕ್ಷತ್ರ ಸಮೂಹದಲ್ಲಿನ ಸೂರ್ಯನಂತ ನಕ್ಷತ್ರವೊಂದನ್ನು ಭೂಮಿಯಂಥಹ ಗ್ರಹವೊಂದು ಸುತ್ತುತ್ತಿದೆ ಎಂದು ದೂರದರ್ಶಕ ಕಂಡುಕೊಂಡಿದೆ.
ಆಲ್ಫಾ ಸೆಂಟೌರಿ ನಕ್ಷತ್ರ ಸಮೂಹದಲ್ಲಿ ಕೇವಲ ಮೂರು ನಕ್ಷತ್ರಗಳಿವೆ. ಆ ಸಮೂದಲ್ಲಿ ‘ಆಲ್ಫಾ ಸೆಂಟೌರಿ–ಎ’, ‘ಆಲ್ಫಾ ಸೆಂಟೌರಿ– ಬಿ’ ಮತ್ತು ‘ಪ್ರಾಕ್ಸಿಮಾ ಸೆಂಟೌರಿ’ ಎಂಬ ಮೂರು ನಕ್ಷತ್ರಗಳಿವೆ.
ಸದ್ಯ ಸೂರ್ಯನಿಗೆ ಅತಿ ಹತ್ತಿರದ ನಕ್ಷತ್ರ ಎಂದು ‘ಪ್ರಾಕ್ಸಿಮಾ ಸೆಂಟೌರಿ’ಯನ್ನು ಗುರುತಿಸಲಾಗುತ್ತದೆ. ಇದು ಒಂದು ಕೆಂಪು ಕುಬ್ಜ ನಕ್ಷತ್ರವಾಗಿದ್ದು ಇಷ್ಟು ದಿನ ನಡೆದ ಸಂಶೋಧನೆಗಳು ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಮೂರು ಗ್ರಹಗಳು ಇರಬಹುದು ಎಂಬುದನ್ನು ಕಂಡುಕೊಂಡಿವೆಯಾದರೂ ಅವು ವಾಸಯೋಗ್ಯ ಎಂಬುದನ್ನು ಪತ್ತೆಹಚ್ಚಲಾಗಿಲ್ಲ.
ಆದರೆ, ವಿಜ್ಞಾನಿಗಳಿಗೆ ಅಭೂತಪೂರ್ವ ಯಶಸ್ಸು ಎಂಬಂತೆ JWST ಈಗ ಫಲಿತಾಂಶ ನೀಡಿದೆ.
ದೂರದರ್ಶಕದ ಇತ್ತೀಚಿನ ಫಲಿತಾಂಶಗಳ ಪ್ರಕಾರ, ‘ಆಲ್ಫಾ ಸೆಂಟೌರಿ–ಎ’ ನಕ್ಷತ್ರದ ಗ್ರಹವಾಗಿ ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಗ್ರಹ ಕಂಡು ಬಂದಿದೆ. ಸದ್ಯ ಆ ಗ್ರಹಕ್ಕೆ ‘ಎಸ್ 1’ ಎಂದು ಹೆಸರಿಡಲಾಗಿದೆ. ಅದು ಒಂದು ಅನಿಲ ದೈತ್ಯ ಎಂದು ತಿಳಿದು ಬಂದಿದ್ದು ಭೂಮಿಯಿಂದ 4.7 ಜ್ಯೋತಿರ್ವರ್ಷಗಳ ದೂರದಲ್ಲಿದೆ.
JWSTನ ಮಿಡ್-ಇನ್ಫ್ರಾರೆಡ್ ಇನ್ಸ್ಟ್ರುಮೆಂಟ್ (MIRI) ನಿಂದ ತಿಳಿದು ಬಂದಿರುವ ಸಂಗತಿ ಏನೆಂದರೆ, ಎಸ್1 ಗ್ರಹದಲ್ಲಿ ಸದ್ಯ ಜೀವಿಗಳು ಇರಬಹುದಾದ ಅನುಮಾನಗಳು ಮೂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವನ್ನು ಅತ್ಯಾಧುನಿಕವಾದ ಹಾಗೂ ವಿಶ್ವದ ಶಕ್ತಿಶಾಲಿ ದೂರದರ್ಶಕ ಎಂದು ಕರೆಯಲಾಗುತ್ತದೆ. ಗ್ಯಾಲಕ್ಸಿ, ನಕ್ಷತ್ರಗಳು ಹಾಗೂ ಹೊಸ ವಾಸಯೋಗ್ಯ ಗ್ರಹಗಳು ಇರಬಹುದಾದ ಅವಕಾಶಗಳನ್ನು ಪರಿಶೀಲಿಸಲು ಈ ದೊಡ್ದ ದೂರದರ್ಶಕ ಬಳಕೆಯಾಗುತ್ತಿದೆ.
JWST ಅನ್ನು 2021 ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಇನ್ನೂ 15 ವರ್ಷ ಅಧ್ಯಯನ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.