
ಸುಸುಮು ಕಿಟಾಗವಾ
ಚಿತ್ರ ಕೃಪೆ: ನೊಬೆಲ್ ಅಧಿಕೃತ ವೆಬ್‌ಸೈಟ್
ಅದು ಯಾವುದೇ ಕ್ಷೇತ್ರವಿರಲಿ, ಗೆದ್ದವರು ಮತ್ತು ಸೋತವರ ನಡುವೆ ಒಂದು ಸ್ಪಷ್ಟ ವ್ಯತ್ಯಾಸವಿರುತ್ತದೆ; ಅದೇ, ಅವರ ಮನೋಬಲ. ನಾವು ಸೋಲುವುದು ಯಾವಾಗ? ಮತ್ಯಾರೋ ಗೆದ್ದಾಗ ಅಲ್ಲ, ನಾವು ಸೋಲನ್ನು ಒಪ್ಪಿಕೊಂಡಾಗ ಮಾತ್ರ, ಅಲ್ಲವೇ? ಸವಾಲುಗಳೆಂದರೆ ಹೆದರಿ ಹಿಂದೋಡದೆ, ಸವಾಲಿನ ಹಿಂದೋಡಿ, ಅದಕ್ಕೆ ಸರಿಯಾದ ಜವಾಬು ನೀಡುವವರೆಗೂ ಕೈಕಟ್ಟಿಕೂರದ ವಿಜ್ಞಾನಿಯ ಬಗ್ಗೆ ತಿಳಿಯೋಣ ಬನ್ನಿ.
‘ಯಾವುದೇ ಒಂದು ಕೆಲಸವನ್ನು ಅಸಾಧ್ಯ ಎಂದು ನೀವು ಒಪ್ಪಲು ತಯಾರಿಲ್ಲದಿದ್ದರೆ, ಅದು ಹೇಗೆ ಅಸಾಧ್ಯವಾಗಲು ಸಾಧ್ಯ?’ ಎನ್ನುತ್ತಾರೆ, ಡಾ. ಸುಸುಮು ಕಿಟಾಗವಾ. ಈ ಬಾರಿ ರಸಾಯನ ವಿಜ್ಞಾನದಲ್ಲಿ ರಿಚರ್ಡ್ ರಾಬ್ಸನ್ ಮತ್ತು ಓಮರ್ ಯಾಘಿಯವರ ಜೊತೆಗೆ ನೊಬೆಲ್ ಪ್ರಶಸ್ತಿಗೆ ಭಾಜನರಾದ ಸುಸುಮು ಅವರ ಮಾತುಗಳನ್ನು ಕೇಳಿದರೆ, ಸ್ಥೈರ್ಯಗುಂದಿದ ಯಾರೇ ಆದರೂ, ಮತ್ತೊಮ್ಮೆ ಫೀನಿಕ್ಸ್‌ನಂತೆ ಎದ್ದುನಿಲ್ಲುವಂತಾಗುತ್ತದೆ; ಅಷ್ಟು ಧನಾತ್ಮಕತೆ, ಅಷ್ಟು ಗುರಿ ಕೇಂದ್ರೀಕೃತ ಮನಸ್ಸು ಮತ್ತು ಅಂತಹ ಛಲ ಬಿಡದ ಮನೋಭಾವ ಇವರದ್ದು.
2025ರ ರಸಾಯನವಿಜ್ಞಾನ ನೊಬೆಲ್ ದೊರೆತಿದ್ದು ಲೋಹ-ಸಾವಯವ ಚೌಕಟ್ಟುಗಳಿಗೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆಯಲ್ಲವೇ? ಅದರ ರಚನೆಯ ಹಿಂದಿನ ಸಿದ್ಧಾಂತ, ರಿಚರ್ಡ್ ರಾಬ್ಸನ್ ಅವರದ್ದು, ಆ ಚೌಕಟ್ಟಿಗೆ ಭೌತಿಕ ಬಲ ತುಂಬಿದ್ದು ಓಮರ್ ಯಾಘಿ ಅವರ ಸಂಶೋಧನೆ ಮತ್ತು ಈ ಚೌಕಟ್ಟುಗಳ ಅನ್ವಯಿಕೆಯನ್ನು ಸಾಧ್ಯವಾಗಿಸಿದ್ದು ಸುಸುಮು ಕಿಟಾಗವಾ ಅವರ ಪ್ರಯೋಗಗಳು. ಜಗತ್ತನ್ನು ಪೊರೆದದ್ದು ಅಚಾನಕ್ಕಾಗಿ ಆದ ಅನೇಕ ಆವಿಷ್ಕಾರಗಳು ಎಂಬ ಮಾತಿದೆ. ಏನೋ ಮಾಡಲು ಹೋಗಿ ಮತ್ತೇನೋ ಆದ ಕಥೆಗಳು ವಿಜ್ಞಾನಲೋಕದಲ್ಲಿ ಸಾಮಾನ್ಯ. ‘ಪೆನಿಸಿಲಿನ್’ ಎಂಬ ಮೊದಲ ಆ್ಯಂಟಿಬಯೋಟಿಕ್, ಎಕ್ಸ್–ರೇ, ಪೇಸ್‌ಮೇಕರ್, ಮೈಕ್ರೋವೇವ್ ಓವನ್ - ಹೀಗೆ ಪಟ್ಟಿ ದೊಡ್ಡದಿದೆ. ‘ಅಂತಹದ್ದೇ ಒಂದು ಅಚಾನಕ್ಕಾಗಿ ಆದ ಆವಿಷ್ಕಾರವೇ ಈ ಲೋಹ-ಸಾವಯವ ಚೌಕಟ್ಟುಗಳೊಳಗೆ ರಂಧ್ರಗಳಿವೆ ಮತ್ತು ಅವುಗಳನ್ನು ಅನಿಲದ ಅಣುಗಳನ್ನು, ಲೋಹದ ಅಣುಗಳನ್ನು ಹಿಡಿದಿಡಲು ಬಳಸಬಹುದು ಎಂಬುದು’ ಎನ್ನುತ್ತಾರೆ. ಸುಸುಮು.
ಹಿನ್ನೆಲೆ
1951ರ ಜುಲೈ 4ರಂದು ಜಪಾನಿನ ಕ್ಯೋಟೋದಲ್ಲಿ ಜನಿಸಿದ ಸುಸುಮು ಅವರು, ಚಿಕ್ಕಂದಿನಿಂದಲೂ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಕ್ಯೋಟೋದಲ್ಲಿಯೇ ತಮ್ಮ ಶಿಕ್ಷಣ ಮತ್ತು ಸಂಶೋಧನೆಯನ್ನು ನಡೆಸಿದರು. ಅಸಾವಯವ ರಸಾಯನವಿಜ್ಞಾನ ಇವರ ಕಾರ್ಯಕ್ಷೇತ್ರ. ಕಿಂಡೈ ವಿಶ್ವವಿದ್ಯಾಲಯ, ಟೋಕ್ಯೋ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾ, ಟೆಕ್ಸಸ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲೂ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿದರು; ತಮ್ಮ ವೃತ್ತಿಬದುಕಿನಲ್ಲಿ ವಿದ್ಯಾರ್ಥಿಗಳನ್ನು ಸಂಶೋಧನೆಯೆಡೆಗೆ ಸೆಳೆಯುವ ಮತ್ತು ವೈಜ್ಞಾನಿಕ ಮನೋಭಾವವನ್ನು ಅವರಲ್ಲಿ ಹಾಸುಹೊಕ್ಕಾಗಿಸುವ ಜವಾಬ್ದಾರಿ ಹೊತ್ತ ಸುಸುಮು ಅವರು, ಐ.ಸಿ.ಇ.ಎಂ.ಎಸ್. ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಕಾರ್ಯಪ್ರವೃತ್ತರಾಗಿದ್ದರು. ನೊಬೆಲ್ ಪ್ರಶಸ್ತಿ ಘೋಷಣೆಯಾದ ನಂತರ ನಡೆದ ಇವರ ಸಂದರ್ಶನದಲ್ಲಿ, ಸುಸುಮು ಕಿಟಾಗವಾ ಅವರು ನಗುತ್ತಾ, ‘ಯಾರಾದರೂ ಅಸಾಧ್ಯವೆಂದದ್ದನ್ನು ಸಾಧ್ಯ ಮಾಡಿತೋರಿಸಲು ನನಗೆ ಬಹಳ ಹುರುಪು’ ಎಂದು ಹೇಳಿದ್ದು, ಸಣ್ಣ ಸೋಲುಗಳಿಗೆ, ಚಿಕ್ಕ ಟೀಕೆಯೊಂದಕ್ಕೇ ಕೈಚೆಲ್ಲುವ ಹಲವರಿಗೆ ಸ್ಫೂರ್ತಿ ನೀಡುವಂತಿದೆ.
90ರ ದಶಕದಲ್ಲಿ ಲೋಹ-ಸಾವಯವ ಚೌಕಟ್ಟಿನ ರಂಧ್ರಗಳೊಳಗೆ ಅನಿಲದ ಅಣುಗಳನ್ನು ಹಿಡಿದಿಡಬಹುದು ಎಂದು ಸುಸುಮು ಮತ್ತು ಇನ್ನಿತರ ರಸಾಯನವಿಜ್ಞಾನಿಗಳು ಪ್ರತಿಪಾದಿಸಿದಾಗ, ಅದನ್ನು ಒಪ್ಪಲು ಬಹುಪಾಲು ವಿಜ್ಞಾನಿಗಳು ತಯಾರಿರಲಿಲ್ಲ. ‘ಅವರ ಅಪನಂಬಿಕೆಯೇ ನನ್ನ ಬಲವಾಯ್ತು’ ಎನ್ನುತ್ತಾರೆ, ಸುಸುಮು. ಬೇರೆ ಯಾವುದೇ ಸಂಶೋಧನೆ ಮಾಡುತ್ತಿದ್ದರೂ, ಈ ವಿಷಯವೊಂದು ಅವರ ಮನಸ್ಸಿನ ಮೂಲೆಯಲ್ಲಿ ಕುಳಿತು ಕುದಿಯುತ್ತಲೇ ಇತ್ತು. ಮತ್ತೇನೋ ವಿಷಯದ ಸಲುವಾಗಿ, ಲೋಹ-ಸಾವಯವ ಚೌಕಟ್ಟಿನ ಸ್ಫಟಿಕದ ರಚನೆಯನ್ನು ವಿಶ್ಲೇಷಣೆ ಮಾಡಲು ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಸುಸುಮು ಹೋಗಿದ್ದರು. ಅಲ್ಲಿ ಕಂಪ್ಯೂಟರ್ ಕೇಂದ್ರದಲ್ಲಿ, ಸ್ಫಟಿಕದ ವಿಶ್ಲೇಷಣೆಯ ಸಮಯದಲ್ಲಿ, ಈ ಲೋಹ-ಸಾವಯವ ಚೌಕಟ್ಟಿನಲ್ಲಿರುವ ವಿಶಿಷ್ಟ, ನಿರ್ದಿಷ್ಟ ಬಗೆಯ ರಂಧ್ರಗಳು ಅಚಾನಕ್ಕಾಗಿ ಕಣ್ಣಿಗೆ ಬಿದ್ದವು. ಇಂತಹ ಅಚಾನಕ್ ಆವಿಷ್ಕಾರವೇ, ನಿಜಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ಲೋಹ-ಸಾವಯವ ಚೌಕಟ್ಟಿನ ಸಾರ್ಥಕ ಅನ್ವಯಿಕೆಗೆ, ನೊಬೆಲ್ ಪ್ರಶಸ್ತಿಯು ಒಲಿಯುವುದಕ್ಕೆ, ಜನರ ಅಪನಂಬಿಕೆಯನ್ನು ಹುಸಿಯಾಗಸಲು ದಾರಿ ಮಾಡಿಕೊಟ್ಟಿತು.
ಒಂದೇ ಗುಂಗಿನಲ್ಲಿ, ಅಪರಿಮಿತ ಏಕಾಗ್ರತೆಯಲ್ಲಿ ಸಂಶೋಧನೆಯಲ್ಲಿ ತೊಡಗುವುದು ಎಷ್ಟು ಮುಖ್ಯವೋ, ಸಂಶೋಧನಾ ಪರಿಸರವೂ ಅಷ್ಟೇ ಮುಖ್ಯ ಎಂಬ ಸುಸುಮು ಅವರ ಮಾತನ್ನು ಎಲ್ಲ ವಿಜ್ಞಾನಿಗಳೂ ಖಂಡಿತವಾಗಿ ಒಪ್ಪುತ್ತಾರೆ. ಜಪಾನಿಗೆ ವಿಜ್ಞಾನದಲ್ಲಿ ನೊಬೆಲ್ ತಂದುಕೊಟ್ಟ ಅನೇಕ ಸಂಶೋಧಕರು ಸುಸುಮು ಅವರ ಮಾರ್ಗದರ್ಶಿಗಳು ಮತ್ತು ಒಡನಾಡಿಗಳು. ನೊಬೆಲ್ ವಿಜೇತ ಕೆನಿಚಿ ಫುಕುಯಿ ಅವರನ್ನಂತೂ ಸುಸುಮು ಅವರು ತಮ್ಮ ‘ಶೈಕ್ಷಣಿಕ ಪಿತಾಮಹ’ ಎಂದೇ ಬಣ್ಣಿಸುತ್ತಾರೆ.
ಕೆನಿಚಿ ಫುಕುಯಿ, ಅಕಿರಾ ಯೊಶಿನೋರಂತಹ ವಿಜ್ಞಾನಲೋಕದ ದಿಗ್ಗಜಗಳು ಕಾರ್ಯನಿರ್ವಹಿಸಿದ ಪ್ರಯೋಗಾಲಯಗಳಲ್ಲೇ ತಾವೂ ಸಂಶೋಧನೆ ಮಾಡುತ್ತಾ, ಅವರ ಪರಂಪರೆಯಿಂದ ಸ್ಫೂರ್ತಿ ಪಡೆಯುತ್ತಾ, ಮುಂದಿನ ತಲೆಮಾರಿಗೆ ಪ್ರೇರಣೆ ಒದಗಿಸಿದ್ದಾರೆ, ಸುಸುಮು ಕಿಟಾಗವಾ. ಇವರ ಲೋಹ-ಸಾವಯವ ಚೌಕಟ್ಟುಗಳು ಅನಿಲದ ಅಣುಗಳನ್ನು, ವೇಗವರ್ಧಕಗಳನ್ನು ಹಿಡಿದಿಟ್ಟುಕೊಳ್ಳುವ ಹಾಗೆ, ಇವರ ಕಾರ್ಯವೈಖರಿಯು ಯುವಜನರನ್ನೂ ಸೆಳೆದು, ವಿಜ್ಞಾನದೆಡೆಗೆ ಗಮನ ಹರಿಯುವಂತೆ ಮಾಡಿದ ಇವರಿಗೆ ಅಭಿನಂದನೆಗಳು ಸಲ್ಲಿಸಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.