ADVERTISEMENT

ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ | ಭಾರತ ಜತೆ ಕೈಜೋಡಿಸಲು ನಾಸಾ ಸಿದ್ಧ: ನೆಲ್ಸನ್

ಅಮೆರಿಕ ಬಾಹ್ಯಾಕಾಶ ಸಂಸ್ಥೆ ಆಡಳಿತಾಧಿಕಾರಿ ನೆಲ್ಸನ್ ಹೇಳಿಕೆ

ಪಿಟಿಐ
Published 28 ನವೆಂಬರ್ 2023, 14:25 IST
Last Updated 28 ನವೆಂಬರ್ 2023, 14:25 IST
ಬಿಲ್‌ ನೆಲ್ಸನ್
ಬಿಲ್‌ ನೆಲ್ಸನ್   

ನವದೆಹಲಿ: ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಭಾರತದ ಕಾರ್ಯಕ್ಕೆ ಕೈಜೋಡಿಸಲು ಅಮೆರಿಕ ಮುಕ್ತವಾಗಿದೆ ಎಂದು ನಾಸಾ ಆಡಳಿತಾಧಿಕಾರಿ ಬಿಲ್‌ ನೆಲ್ಸನ್ ಮಂಗಳವಾರ ಹೇಳಿದ್ದಾರೆ.

ಭಾರತ ಪ್ರವಾಸದಲ್ಲಿರುವ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಾಣಿಜ್ಯ ಬಳಕೆ ಉದ್ದೇಶಕ್ಕಾಗಿ ಭಾರತವು 2040ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದಲು ಯೋಜಿಸಿದೆ. ಈ ಕಾರ್ಯದಲ್ಲಿ ಅಮೆರಿಕದ ಸಹಯೋಗ ಬೇಕು ಎಂದು ಭಾರತ ಬಯಸುವುದಾದಲ್ಲಿ ಕೈಜೋಡಿಸಲು ನಾವು ಸಿದ್ಧ. ಈ ಬಗ್ಗೆ ನಿರ್ಧರಿಸುವುದು ಭಾರತಕ್ಕೆ ಬಿಟ್ಟಿದ್ದು’ ಎಂದರು.

ADVERTISEMENT

‘ಮುಂದಿನ ವರ್ಷದ ಅಂತ್ಯದ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಉಭಯ ದೇಶಗಳು ಯೋಜನೆ ರೂಪಿಸುತ್ತಿವೆ. ಗಗನಯಾತ್ರಿ ಕುರಿತು ಇಸ್ರೊ ನಿರ್ಧಾರ ಕೈಗೊಳ್ಳಲಿದ್ದು, ಈ ವಿಷಯದಲ್ಲಿ ನಾಸಾ ಪಾತ್ರ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಭೇಟಿ: ಬಿಲ್‌ ನೆಲ್ಸನ್‌ ಅವರು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರನ್ನು ಭೇಟಿ ಮಾಡಿ, ಚರ್ಚಿಸಿದರು. ನಂತರ, ಮುಂಬೈಗೆ ತೆರಳಿ, ಬಾಹ್ಯಾಕಾಶ ಕ್ಷೇತ್ರದ ಉದ್ಯಮಿಗಳೊಂದಿಗೆ ಸಭೆ ನಡೆಸಿದರು.

ಅವರು ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ಜೊತೆಗೆ, ಭಾರತದ ಮೊದಲ ಗಗನಯಾನಿ ರಾಕೇಶ್‌ ಶರ್ಮಾ ಅವರನ್ನೂ ಭೇಟಿ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.