ADVERTISEMENT

ಸೂರ್ಯನಿಗೆ ಟಾರ್ಚ್ ಹಾಕುವ ಕಾಲ ಬಂತೆ!

ರಾಕೇಶ ವಿ.ತಾಳಿಕೋಟಿ
Published 18 ನವೆಂಬರ್ 2025, 23:53 IST
Last Updated 18 ನವೆಂಬರ್ 2025, 23:53 IST
   

ಜಾಗತಿಕವಾಗಿ ಪರಿಸರದ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಿಳಿಯಲು, ತಡೆಗಟ್ಟಲು ವಿಶ್ವಸಂಸ್ಥೆಯ ಆಯೋಜಿತ ‘ಕೊಪ್30’ (ಸಿಓಪಿ30) ಶೃಂಗಸಭೆ ಬ್ರೆಝಿಲ್‍ನ ಬೆಲೆಂನಲ್ಲಿ ಇದೇ 10ರಿಂದ 21ರವರೆಗೆ ನಡೆಯುತ್ತಿದೆ. ಇಲ್ಲಿ ಪ್ರಮುಖ ಚರ್ಚೆಯಲ್ಲಿರುವ ವಿಷಯವೆಂದರೆ ‘ಜಾಗತಿಕ ತಾಪಮಾನ ಹೆಚ್ಚಳದ ತಡಗಟ್ಟುವಿಕೆ’.

ತಾಪಮಾನ ಏರಿಕೆಯಿಂದ ಭೂಮಿಯ ಮೇಲೆ ಅನೇಕ ಬದಲಾವಣೆಗಳು ಜರುಗುವುದು ಸಹಜ. ಭೂಮಿಯಿಂದ ಸೌರಮಂಡಲದವರೆಗೆ ಹರಡಿರುವ ಟ್ರೊಪೊಸ್ಪೇರ್, ಸ್ಟ್ರಾಟೋಸ್ಪೇರ್, ಮಿಸೋಸ್ಪೇರ್, ಥರ್ಮೊಸ್ಪೇರ್ ಹಾಗೂ ಎಕ್ಸೋಸ್ಪೇರ್ ವಾತಾವರಣದ ಹಂತಗಳು.

ಕೃತಕ ಮೋಡ ಬಿತ್ತನೆಯಿಂದ ಮಳೆ ಬರಿಸಿರುವುದು ನಮಗೆಲ್ಲ ತಿಳಿದ ಸಂಗತಿ. ಇತ್ತೀಚೆಗೆ ರಾಷ್ಟ್ರದ ರಾಜಧಾನಿಯಲ್ಲಿ ಉಂಟಾಗಿರುವ ಕಲುಷಿತ ವಾಯುತೊಂದರೆಗೆ ಸಿಲ್ವರ್ ಅಯೊಡೈಡ್ ಬಳಸಿಕೊಂಡು ಕ್ಲೌಡ್-ಸೀಡಿಂಗ್ ತಂತ್ರಜ್ಞಾನ ಮಾಡುವ ಮಾತು ಮುನ್ನೆಲೆಗೆ ಬಂದಿದೆ.

ADVERTISEMENT

ಹಲವು ಚಲನಚಿತ್ರಗಳಲ್ಲಿ ಹಾಸ್ಯಪದವಾಗಿ ಬಳಕೆಯಾಗಿರುವ ‘ಸೂರ್ಯನಿಗೆ ಟಾರ್ಚ್ ಹಾಕುವಿರಾ!’ ಎಂಬ ಮಾತನ್ನು ಇಂದು ನಿಜವಾಗಿಸಲು ಸಂಶೋಧನೆ ನಡೆದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅರಿತಿರುವ ವಿಜ್ಞಾನಿಗಳು ಇಂದು ಅದರ ಮುಂದುವರೆದ ಭಾಗವಾಗಿ ಸೂರ್ಯನ ಪ್ರಖರ ಕಿರಣಗಳನ್ನು ಮಂದಗೊಳಿಸುವ ಸಂಶೋಧನೆಯನ್ನು ಪ್ರಗತಿಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಿತ ‘ನೇಚರ್’ ಸಂಶೋಧನಾ ನಿಯತಕಾಲಿಕೆಯ ಅಕ್ಟೋಬರ್ ಮಾಹೆಯ ‘ಸೈಂಟಿಫಿಕ್ ರಿಪೋರ್ಟ್‍’ನಲ್ಲಿ ಪ್ರಕಟವಾಗಿರುವ ‘ಎಂಜಿನಿಯರಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಕನ್‍ಸರ್ನ್ ಆ್ಯಂಡ್ ಪ್ರಾಕ್ಟಿಕಲ್ ಲಿಮಿಟೇಶನ್ಸ್ ಟು ಸ್ಟ್ರಾಟೋಸ್ಪೆರಿಕ್ ಏರೋಸೋಲ್ ಇಂಜೆಕ್ಷನ್ ಸ್ಟ್ರಾಟೆಜೀಸ್’ ಎಂಬ ಸಂಶೋಧನಾ ಲೇಖನದಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಏರೋಸೋಲ್ ವಿಜ್ಞಾನಿ ಮಿರಾಂಡಾ ಹ್ಯಾಕ್ ಅವರ ನೇತೃತ್ವದ ವಿ ಫಾಯೆ ಮೆಕ್ನಿಲ್, ಡಾನ್ ಸ್ಟಿಂಗಾರ್ಟ್, ಗೆರ್ನೊಟ್ ವಾಗ್ನರ್ ಅವರ ತಂಡವು ಪ್ರತಿಪಾದಿಸಿದ್ದಾರೆ.

ಓಝೋನ್ ಪದರ ನೆಲೆಗೊಂಡಿರುವ ಈ ಹಂತದ ವಾತಾವರಣದಲ್ಲಿ ‘ಸ್ಟ್ರಾಟೋಸ್ಫೆರಿಕ್ ಏರೋಸೋಲ್ ಇಂಜೆಕ್ಷನ್’(ಎಸ್‍ಎಐ) ಪ್ರಯೋಗಗಳನ್ನು ಕೈಗೊಳ್ಳುವ ಮೂಲಕ ಸೂರ್ಯನ ಶಾಖವನ್ನು ತಿಳಿಗೊಳಿಸುವುದು ಮತ್ತು ಆ ಮೂಲಕ ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸಿ ಭೂಮಂಡಲದ ಸ್ಥಿರತೆ ಕಾಪಾಡಿಕೊಳ್ಳುವುದು ಇವರ ಪ್ರಮುಖ ಉದ್ದೇಶ.

‘ಎಸ್‍ಎಐ’ ಆಧಾರಿತ ಸೌರ ಜಿಯೋ ಎಂಜಿನಿಯರಿಂಗ್ ಎಂದರೆ ವಾತಾವರಣದ ಮಧ್ಯಭಾಗದಲ್ಲಿ ಏರೋಸೋಲ್ ಕಣಗಳನ್ನು ಹರಡುವುದು. ಈ ಕಣಗಳು ಸೂರ್ಯನ ಬೆಳಕಿನ ಒಂದು ಭಾಗವನ್ನು ಭೂಮಿಗೆ ಬೀಳದಂತೆ ತಡೆದು ಬಾಹ್ಯಾಕಾಶಕ್ಕೆ ಪ್ರತಿಫಲಿಸುತ್ತವೆ. ಇದರಿಂದ ಭೂಮಿಯು ಕಡಿಮೆ ಉಷ್ಣವನ್ನು ಪಡೆಯುತ್ತದೆ. ಇದರಿಂದ ಅಸಾಧಾರಣವಾದ ಹಲವಾರು ಫಲಿತಾಂಶಗಳು ಪಡೆಯಬಹುದು ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

ಇಲ್ಲಿ ಯೋಚಿಸಬೇಕಾದ ಸಂಗತಿ ಎಂದರೆ, ಭೂಮಿಯಲ್ಲಿ ಆಗಾಗ್ಗೆ ಸಂಭವಿಸುವ ಜ್ವಾಲಾಮುಖಿಯ ಸ್ಫೋಟಗಳಿಂದ ಗಾಳಿಯಲ್ಲಿ ಅತಿಯಾದ ಸಾಂದ್ರತೆಯಿಂದ ದೊಡ್ಡ ಪ್ರಮಾಣದ ಬೂದಿಯ ರೂಪದ ಕಣಗಳು ಸ್ಟ್ರಾಟೋಸ್ಫೇರಿಗೆ ತಳ್ಳಪಡುತ್ತವೆ. ಇದರಿಂದ ಭೂಮಿಯಲ್ಲಿ ತಾತ್ಕಾಲಿಕ ಶೀತ ವಾತಾವರಣ ಏರ್ಪಡುತ್ತದೆ. ಒಂದು ವೇಳೆ ಎಸ್‍ಐಎ ಕಣಗಳು ಇವುಗಳೊಂದಿಗೆ ಸೇರಿಕೊಂಡು ತಾಪಮಾನ ವ್ಯಾಪಕವಾಗಿ ಕುಸಿತಗೊಂಡರೆ? ಸೂರ್ಯನಿಂದ ದೊರಕುವ ವಿಟಮಿನ್ ಡಿ ದೊರೆಯದೆ ಹೋದರೆ?

ಈ ಮಾದರಿ ಸಂಶೋಧನಾ ಪ್ರಯೋಗಗಳು ಕಂಪ್ಯೂಟರ್ ಮಾದರಿಗಳಲ್ಲಿ ಪ್ರಗತಿ ಹಂತದಲ್ಲಿವೆ. ವಾಸ್ತವಿಕ ದೃಷ್ಟಿಯಿಂದ ನೈಜ ಪರಿಸ್ಥಿತಿ ಅನುಸಾರ ಯಾವೆಲ್ಲ ಪ್ರದೇಶಗಳಲ್ಲಿ ಇವುಗಳ ಉಪಯೋಗ ಮಾಡಬೇಕು, ಮತ್ತದರ ಅನಿಶ್ಚಿತತೆ ಕುರಿತು ಖಚಿತವಾಗಿ ಈಗಲೇ ಹೇಳಲಾಗದು ಎಂದು ಸಂಶೋಧಕರುಗಳು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಮಧ್ಯ ಅಕ್ಷಾಂಶ ಪ್ರದೇಶಗಳಲ್ಲಿ ಇವುಗಳನ್ನು ಬಳಸಿದರೆ ಉಷ್ಣ ಸಂಚಾರದ ಮಾರ್ಗ ಬದಲುಗೊಂಡು ಧ್ರುವ ಪ್ರದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಸಹ ಇಲ್ಲಿ ಗಮನಿಸಬೇಕಾದ ಅಂಶ.

ಇನ್ನೊಂದೆಡೆ, ಹೆಚ್ಚು ಎತ್ತರದಲ್ಲಿ ಎಸ್‍ಐಎ ಬಿಡುಗಡೆ ಮಾಡಿದರೆ ಕಣಗಳು ಹೆಚ್ಚು ಕಾಲ ವಾತಾವರಣದಲ್ಲಿ ಉಳಿಯುತ್ತವೆ. ಆದರೆ ಓಝೋನ್ ಪದರ ದುರ್ಬಲಗೊಳ್ಳುವ ಅಪಾಯವಿದೆ ಎಂದು ಕೆಲವು ವಿಜ್ಞಾನಿಗಳು ಹೇಳಿದ್ದಾರೆ. ಎತ್ತರ, ರೇಖಾಂಶ, ಋತು, ತೀವ್ರತೆ ಹಾಗೂ ತಾಂತ್ರಿಕ ನೈಪುಣ್ಯಗಳಿಂದ ಒಟ್ಟಾರೆ ಪ್ರಯೋಗದಿಂದ ಎದುರಾಗುವ ಅಪಾಯಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಸ್ಟ್ರಾಟೋಸ್ಫೆರಿಕ್ ಏರೋಸೋಲ್ ಇಂಜೆಕ್ಷನ್ ತಯಾರಿಸಲು ದುಬಾರಿಯಾದ ವಜ್ರ ಮತ್ತು ಆಭರಣ ತಯಾರಿಕೆ(ಜೆಮ್ ಸ್ಟೋನ್)ಯಲ್ಲಿ ಬಳಸುವ ‘ಜಿರ್ಕಾನ್’ ಧೂಳಿನ ಕಣಗಳು ಬೇಕಾಗಬಹುದು. ಇವುಗಳ ಉತ್ಪಾದನೆ, ವೆಚ್ಚ, ಲಭ್ಯತೆ, ಬಳಕೆಯ ಕುರಿತು ಆಳವಾದ ಅಧ್ಯಯನ ನಡೆಸುವುದು ಸೂಕ್ತ.

ಸಂಶೋಧನೆಗಳು, ಆಲೋಚನೆಗಳು ಸರಬರಾಜು ಸರಪಳಿಗಳ ಮೇಲೆ ನಿರ್ಭರವಾಗಿದ್ದರೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ನೆರವಾಗುತ್ತವೆ. ಹಾಗೆಯೇ ಆವಿಷ್ಕಾರಗಳ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಹಂತಹಂತವಾಗಿ ಕಾರ್ಯರೂಪಕ್ಕೆ ತರುವುದು ಆದ್ಯತೆಯಾಗಬೇಕು.

ಈಗ ನಡೆದಿರುವ ‘ಕೊಪ್30’ ಶೃಂಗಸಭೆಯಲ್ಲಿ ಈ ವಿಷಯದ ಮೇಲೆ ಇನ್ನಷ್ಟು ಚರ್ಚೆ ನಡೆದರೆ ನಿಖರ ಚಿತ್ರಣವನ್ನು ರೂಪಿಸಲು ಸಹಾಯವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.