ADVERTISEMENT

ಸ್ಪೇಸ್‌ಎಕ್ಸ್: ಬಾಹ್ಯಾಕಾಶ ನಿಲ್ದಾಣದ ಸನಿಹ ನಾಸಾ ಗಗನಯಾತ್ರಿಗಳ ತಂಡ

ಏಜೆನ್ಸೀಸ್
Published 17 ನವೆಂಬರ್ 2020, 7:41 IST
Last Updated 17 ನವೆಂಬರ್ 2020, 7:41 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಕೇಪ್‌ ಕ್ಯಾನವೆರಾಲ್‌ (ಅಮೆರಿಕ): ವಾಣಿಜ್ಯ ಬಾಹ್ಯಾಕಾಶ ಸಂಚಾರ ಕ್ಷೇತ್ರದಲ್ಲಿ ಮಹತ್ವದ ಯಶಸ್ಸು ಸಾಧಿಸಿರುವ ‘ಸ್ಪೇಸ್‌ ಎಕ್ಸ್‌’ ಕಂಪನಿಯು ನಾಸಾದ ನಾಲ್ವರು ಗಗನಯಾತ್ರಿಗಳನ್ನು ನಿಗದಿತ ಕಕ್ಷೆಗೆ ಸೇರಿಸುವ ಹಾದಿಯಲ್ಲಿದ್ದು, ಈ ಮೂಲಕ ಮತ್ತೊಂದು ಮೈಲುಗಲ್ಲು ಸ್ಥಾಪಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ರಾತ್ರಿ ಉಡಾವಣೆಗೊಂಡಿರುವ ‘ಸ್ಪೇಸ್‌ ಎಕ್ಸ್‌’ ನಿರ್ಮಿತ ನೌಕೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸುವ ಸನಿಹದಲ್ಲಿದೆ.

ಕಮಾಂಡರ್‌ ಮೈಕ್ ಹಾಪ್‌ಕಿನ್ಸ್‌ ನೇತೃತ್ವದ ತಂಡದಲ್ಲಿ ಅಮೆರಿಕದ ವಿಕ್ಟರ್‌ ಗ್ಲೋವರ್‌, ಶಾನನ್‌ ವಾಕರ್‌ ಮತ್ತು ಜಪಾನ್‌ನ ಸೊಯಿಚಿ ನೊಗುಚಿ ಅವರೂ ಇದ್ದಾರೆ.

ADVERTISEMENT

ರಷ್ಯಾದ ಇಬ್ಬರು ಹಾಗೂ ಅಮರಿಕದ ಓರ್ವ ಗಗನಯಾತ್ರಿ ಇದ್ದ ತಂಡವು ಕಳೆದ ತಿಂಗಳು ಕಜಕಸ್ತಾನದಿಂದ ಗಗನಯಾನ ಕೈಗೊಂಡಿತ್ತು. ಬಾಹ್ಯಾಕಾಶ ನಿಲ್ದಾಣದಲ್ಲಿ ಈ ತಂಡವನ್ನು ಹಾಪ್‌ಕಿನ್ಸ್‌ ನೇತೃತ್ವದ ತಂಡ ಶೀಘ್ರವೇ ಸೇರಿಕೊಳ್ಳಲಿದೆ.

ಹಾಪ್‌ಕಿನ್ಸ್‌ ಮುಂದಾಳತ್ವದ ತಂಡವು ಆರು ತಿಂಗಳ ಕಾಲ ಬಾಹ್ಯಾಕಾಶದಲ್ಲಿರಲಿದೆ. ಏಪ್ರಿಲ್‌ನಲ್ಲಿ ಮತ್ತೊಂದು ತಂಡವು ಬಾಹ್ಯಾಕಾಶ ಪಯಣ ಕೈಗೊಳ್ಳಲಿದ್ದು, ಅವರು ಕಕ್ಷೆ ಸೇರಿದ ನಂತರ ಹಾಪ್‌ಕಿನ್ಸ್‌ ಅವರ ತಂಡ ವಾಪಾಸಾಗಲಿದೆ.

ಗ್ಲೋವರ್‌ ಅವರು ಸುದೀರ್ಘ ಕಾಲ ಬಾಹ್ಯಾಕಾಶ ಪಯಣ ಕೈಗೊಂಡಿರುವ ಅಮೆರಿಕ–ಆಫ್ರಿಕಾ ಮೂಲದ ಮೊದಲ ಗಗನಯಾತ್ರಿ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಭಾನುವಾರ ನಡೆದ ಉಡ್ಡಯನ ಕಾರ್ಯಕ್ರಮಕ್ಕೆ ನಿಗದಿತ ಸಂಖ್ಯೆಯ ಅತಿಥಿಗಳಿಗಷ್ಟೇ ಆಹ್ವಾನ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.