ADVERTISEMENT

ಮಂಗಳದತ್ತ ಅರಬ್‌ನ 'ಹೋಪ್‌' ಮಿಷನ್‌: ಜಪಾನ್‌ ರಾಕೆಟ್‌ ಮೂಲಕ ಉಡಾವಣೆ ಯಶಸ್ವಿ

ಏಜೆನ್ಸೀಸ್
Published 20 ಜುಲೈ 2020, 5:51 IST
Last Updated 20 ಜುಲೈ 2020, 5:51 IST
ಜಪಾನ್‌ ರಾಕೆಟ್‌ ಮೂಲಕ ಅರಬ್‌ನ ಮೊದಲ ಮಂಗಳ ಮಿಷನ್‌ ಹೋಪ್‌ ಸಾಗುತ್ತಿರುವುದು
ಜಪಾನ್‌ ರಾಕೆಟ್‌ ಮೂಲಕ ಅರಬ್‌ನ ಮೊದಲ ಮಂಗಳ ಮಿಷನ್‌ ಹೋಪ್‌ ಸಾಗುತ್ತಿರುವುದು   
""

ಟೋಕಿಯೊ: ಮಂಗಳಗ್ರಹದ ಶೋಧಕಾರ್ಯಕ್ಕೆ ಇದೇ ಮೊದಲ ಬಾರಿಗೆ ಅರಬ್‌ ಬಾಹ್ಯಾಕಾಶ ಮಿಷನ್‌ ಕೈಗೊಂಡಿದೆ. ಸೋಮವಾರ ಜಪಾನ್‌ನ ರಾಕೆಟ್‌ ಮೂಲಕ 'ಹೋಪ್‌' ಶೋಧಕ ಗಗನನೌಕೆ ಉಡಾವಣೆ ಯಶಸ್ವಿಯಾಗಿದೆ.

ಉಡಾವಣೆಯಾಗಿ ಗಂಟೆಯ ಅವಧಿಯಲ್ಲಿ ಉಪಗ್ರಹ ರಾಕೆಟ್‌ನಿಂದ ಬೇರ್ಪಟ್ಟಿದೆ. ಅರಾಬಿಕ್‌ನಲ್ಲಿ 'ಅಲ್–ಅಮಲ್‌' ಎಂದು ಕರೆಯಲಾಗಿರುವ ಮಾನವ ರಹಿತ ಗಗನ ಶೋಧಕವನ್ನು ಹೊತ್ತ ರಾಕೆಟ್‌ ದಕ್ಷಿಣ ಜಪಾನ್‌ನ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6:58ಕ್ಕೆ (ಅಲ್ಲಿನ ಕಾಲಮಾನ) ನಭದತ್ತ ಸಾಗಿದೆ.

ಶೋಧಕ ಗಗನನೌಕೆಯನ್ನು ರಾಕೆಟ್‌ ಹೊತ್ತು ಸಾಗುತ್ತಿರುವುದನ್ನು ಕಂಡ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಮಾರ್ಸ್‌ ಮಿಷನ್‌ನ ಉಪ ಯೋಜನಾ ವ್ಯವಸ್ಥಾಪಕ ಸರಾಹ್‌ ಅಲ್‌–ಅಮಿರಿ 'ಇದೊಂದು ಅವರ್ಣೀಯ ಭಾವನೆ' ಎಂದರು. ರಾಕೆಟ್‌ನಿಂದ ಶೋಧಕ ಯಶಸ್ವಿಯಾಗಿ ಬೇರ್ಪಡುತ್ತಿದ್ದಂತೆ ಜಪಾನ್‌ನ ನಿಯಂತ್ರಣ ಕೊಠಡಿಯಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತು.

ADVERTISEMENT

ಅಡ್ವಾನ್ಸಡ್‌ ಸೈನ್ಸಸ್‌ನ ರಾಜ್ಯ ಸಚಿವರೂ ಆಗಿರುವ ಅಮಿರಿ 'ಇದು ಯುಎಇಯ ಭವಿಷ್ಯ' ಎಂದು ದುಬೈ ಟಿವಿಗೆ ಪ್ರತಿಕ್ರಿಯಿಸಿದರು.

ಭೂಮಿ ಮತ್ತು ಮಂಗಳ ಗ್ರಹ ಸಮೀಪದಲ್ಲಿರುವ ಈ ಸಮಯದ ಉಪಯೋಗ ಪಡೆದುಕೊಳ್ಳಲು ಮೂರು ರಾಷ್ಟ್ರಗಳು ಮಂಗಳ ಯೋಜನೆ ನಡೆಸುತ್ತಿವೆ. ಯೋಜನೆಗಳು: ಎಮಿರೇಟ್ಸ್‌ನ 'ಹೋಪ್‌', ಚೀನಾದ 'ತೈಯನ್‌ವೆನ್‌–1' ಹಾಗೂ ಅಮೆರಿಕದ 'ಮಾರ್ಸ್‌ 2020'. ಅಮೆರಿಕ ಮತ್ತು ಚೀನಾದ ಮಿಷನ್‌ಗಳು ಇನ್ನಷ್ಟೇ ಉಡಾವಣೆಯಾಗಬೇಕಿದೆ.

ನಾಸಾ ಪ್ರಕಾರ 2020ರ ಅಕ್ಟೋಬರ್‌ನಲ್ಲಿ ಮಂಗಳ ಗ್ರಹ ಭೂಮಿಗೆ ಕೊಂಚ ಸಮೀಪವಾದ 386 ಲಕ್ಷ ಮೈಲಿ (620 ಲಕ್ಷ ಕಿ.ಮೀ) ಅಂತರದಲ್ಲಿರಲಿದೆ. ನಭಕ್ಕೆ ಸೇರಿರುವ ಹೋಪ್‌ 2021ರ ಫೆಬ್ರುವರಿಯಲ್ಲಿ ಮಂಗಳ ಕಕ್ಷೆ ಸೇರುವುದಾಗಿ ನಿರೀಕ್ಷಿಸಲಾಗಿದೆ.

2021ಕ್ಕೆ ಯುಎಇ ಸ್ಥಾಪನೆಯಾಗಿ 50 ವರ್ಷಗಳೂ ತುಂಬಲಿವೆ. ನಿಗದಿತ ಕಾರ್ಯಕ್ರಮದಂತೆ ಜುಲೈ 15ರಂದೇ ಗಗನನೌಕೆಯನ್ನು ಉಡಾವಣೆ ಮಾಡಬೇಕಿತ್ತು. ಪ್ರತಿಕೂಲ ಹವಾಮಾನದ ಕಾರಣ ಮುಂದೂಡಲಾಗಿತ್ತು.

ಹೋಪ್‌ ಸೇರಿದಂತೆ ಈ ವರ್ಷದ ಮೂರೂ ಮಂಗಳ ಶೋಧಕ ಗಗನನೌಕೆಗಳು ಕೆಂಪು ಗ್ರಹದ ಮೇಲೆ ಇಳಿಯುವುದಿಲ್ಲ. ಮೂರು ಶೋಧಕಗಳು ಮಂಗಳ ಗ್ರಹವನ್ನು ಇಡೀ ಮಂಗಳ ವರ್ಷ (687 ದಿನಗಳು) ಸುತ್ತುತ್ತ ಶೋಧ ಕಾರ್ಯ ನಡೆಸಲಿವೆ.


ದುಬೈನ ನಿಯಂತ್ರಣ ಕೇಂದ್ರದಲ್ಲಿ ಮಾತನಾಡಿದ ಎಮಿರೇರ್ಟ್ಸ್ ಮಾರ್ಸ್ ಮಿಷನ್‍ನ ಯೋಜನಾ ನಿರ್ದೇಶಕ ಒಮರನ್‍ ಶರಾಫ್‍ ಅವರು, 'ಇದು, 200 ಮಿಲಿಯನ್ ಡಾಲರ್ ವೆಚ್ಚದ ಯೋಜನೆ. ಎಲ್ಲವೂ ಯೋಜನೆಯಂತೆ ನಡೆಯುತ್ತಿದೆ. ಪರಿಣತರ ತಂಡ ಉಪಗ್ರಹ ರವಾನಿಸುವ ಸಂಕೇತಗಳನ್ನು ಪರಿಶೀಲಿಸಲಿದೆ' ಎಂದು ತಿಳಿಸಿದರು.

ಪ್ರಸ್ತುತ ನಡೆಸಲಾಗುತ್ತಿರುವ ಮಂಗಳ ಯೋಜನೆಗಳ ಪ್ರಮುಖ ಉದ್ದೇಶ, ಮಂಗಳ ಗ್ರಹದ ಮೇಲಿನ ವಾತಾವರಣವನ್ನು ಅರಿಯವ ಮೂಲಕ ಮುಂದಿನ 100 ವರ್ಷಗಳಲ್ಲಿ ಮನುಷ್ಯರು ಅಲ್ಲಿ ಬದುಕಲು ಸಾಧ್ಯವಾಗಿಸುವುದನ್ನು ಖಚಿತ ಪಡಿಸಿಕೊಳ್ಳುವುದು.

ಹೋಪ್‌ ಮಿಷನ್‌ ಸಂಭ್ರಮ ಹಂಚಿಕೊಳ್ಳಲು ದುಬೈನಲ್ಲಿ ಜಗತ್ತಿನ ಅತಿ ಎತ್ತರದ ಗಗನ ಚುಂಬಿ ಕಟ್ಟಡ ಬುರ್ಜ್‌ ಖಲೀಫಾದ ಮೇಲೆ 10 ಸೆಕೆಂಡ್‌ಗಳ ಕೌಂಟ್‌ಡೌನ್‌ನ ಬೆಳಕಿನ ಚಿತ್ತಾರ ಮೂಡಿಸಲಾಗಿತ್ತು.

1960ರಿಂದಲೂ ಜಗತ್ತಿನ ಹಲವು ರಾಷ್ಟ್ರಗಳು ಮಂಗಳ ಗ್ರಹದ ಅಧ್ಯಯನಕ್ಕಾಗಿ ಶೋಧಕ ಗಗನನೌಕೆಗಳನ್ನು ಕಳುಹಿಸಿವೆ. ಅವುಗಳಲ್ಲಿ ಬಹುತೇಕ ವಿಫಲಗೊಂಡಿವೆ. ಇಸ್ರೊದ ಮಂಗಳಯಾನ (ಮಾಮ್‌) ಯಶಸ್ಸು ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಎತ್ತರಕ್ಕೆ ಕೊಂಡೊಯ್ದಿದೆ.

ಹೋಪ್‌ ಯೋಜನೆ: ಹಲವು ಕಾಲಗಳಲ್ಲಿ ಮಂಗಳದ ವಾತಾವರಣದ ಚಿತ್ರಗಳನ್ನು ಜಗತ್ತಿನಾದ್ಯಂತ ವಿಜ್ಞಾನಿಗಳು ಪಡೆಯಲಿದ್ದಾರೆ. ಪ್ರಸ್ತುತ ಯುಎಇಯ 9 ಉಪಗ್ರಹಗಳು ಭೂಕಕ್ಷೆಯಲ್ಲಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮೊದಲ ಗಗನನೌಕೆ ಕಳುಹಿಸಿತ್ತು. ಮುಂದಿನ ವರ್ಷಗಳಲ್ಲಿ 8 ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆದಿದೆ.

ಬಾಹ್ಯಾಕಾಶ ಸಂಶೋಧನೆಯಲ್ಲಿ ಇದೊಂದು ಅದ್ವಿತೀಯ ಪ್ರಗತಿ. ಯುಎಇ ಅಂಥ ದೇಶವು ಈಗ ಮಂಗಳನತ್ತ ಉಪಗ್ರಹ ಉಡಾವಣೆಗೆ ಮಾಡುವ ಮೂಲಕ ದೊಡ್ಡ ಹೆಜ್ಜೆ ಇಟ್ಟಿದೆ ಎಂದು ಗಗನಯಾತ್ರಿ ಫ್ರೆಡ್‍ ವ್ಯಾಟ್ಸನ್‍ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.