ಭೋಪಾಲ್: ವಿವಾಹ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯೊಬ್ಬರು ಹಠಾತ್ತನೆ ಕುಸಿದುಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವರದಿಯಾಗಿದೆ.
ಮೃತ ಯುವತಿಯನ್ನು 23 ವರ್ಷದ ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಅವರು ಸಂಬಂಧಿಯ ಮದುವೆ ಸಲುವಾಗಿ ಇಂದೋರ್‌ನಿಂದ ಭೋಪಾಲ್‌ಗೆ ಬಂದಿದ್ದರು.
ವೇದಿಕೆ ಮೇಲೆ ಸಂಭ್ರಮದಿಂದ ನರ್ತಿಸುತ್ತಿದ್ದ ಯುವತಿ ಇದ್ದಕ್ಕಿದ್ದಂತೆ ಕುಸಿದಿದ್ದಾರೆ. ಆಕೆ, ಹೃದಯ ಸ್ತಂಭನದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಹಳದಿ ಶಾಸ್ತ್ರದ ವೇಳೆ ಈ ಘಟನೆ ನಡೆದಿದ್ದು, ಇನ್ನೂರಕ್ಕೂ ಹೆಚ್ಚು ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಯುವತಿ ಬೀಳುತ್ತಿದ್ದಂತೆ, ಸ್ಥಳದಲ್ಲೇ ಇದ್ದ ಕೆಲವು ವೈದ್ಯರು ತಕ್ಷಣವೇ ಸಿಪಿಆರ್ (ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್) ನೀಡಿದರು. ಆದರೆ, ಪರಿಣಿತಾ ಸ್ಪಂದಿಸಲಿಲ್ಲ. ಬಳಿಕ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯುವತಿ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದಾರೆ ಎನ್ನಲಾಗಿದೆ.
ದುರಂತದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಯುವತಿಯ ಸಹೋದರನೂ 12ನೇ ವಯಸ್ಸಿನಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂಬುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.