ದ್ವಾರಕ: ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ ಅಂಬಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಜಾಮ್‌ನಗರದಿಂದ ದ್ವಾರಕಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.
ಪಾದಾಯಾತ್ರೆ ಹೋಗುತ್ತಿರುವ ವೇಳೆ ದ್ವಾರಕ ಜಿಲ್ಲೆಯ ಖಂಬಲಿಯಾ ಪಟ್ಟಣ ಬಳಿ ಟ್ರಕ್‌ವೊಂದರಲ್ಲಿ ಕೋಳಿಗಳನ್ನು ತುಂಬಿಕೊಂಡು ಸಾಗಿಸುತ್ತಿರುವುದನ್ನು ಕಂಡ ಅವರು, ಟ್ರಕ್ ಅನ್ನು ನಿಲ್ಲಿಸುವಂತೆ ಹೇಳಿದ್ದಾರೆ. ವಧೆ ಮಾಡುವುದಕ್ಕಾಗಿ ಕೋಳಿಗಳನ್ನು ಸಾಗಿಸುತ್ತಿರುವುದಾಗಿ ತಿಳಿದ ಅವರು ಕೋಳಿಗಳನ್ನು ಕೊಲ್ಲದಂತೆ ಹೇಳಿದ್ದಾರೆ.
ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೋಳಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಅನಂತ್ ಅವರು, ಎಲ್ಲಾ ಕೋಳಿಗಳನ್ನು ರಕ್ಷಿಸುವಂತೆ ತಮ್ಮ ತಂಡದ ಸದಸ್ಯರಲ್ಲಿ ಒಬ್ಬರಿಗೆ ಸೂಚಿಸುತ್ತಿರುವುದನ್ನು ಕಾಣಬಹುದು. ಅದರ ಹಣವನ್ನು ಮಾಲೀಕರಿಗೆ ಪಾವತಿಸುವಂತೆಯೂ ಹೇಳಿದ್ದಾರೆ.
ಈ ಕೋಳಿಗಳನ್ನು ವಂತರಾ ವನ್ಯಜೀವಿ ಕೇಂದ್ರಕ್ಕೆ ಸಾಗಿಸುವುದಾಗಿ ಅವರ ತಂಡ ತಿಳಿಸಿದೆ.
ಅನಂತ್ ಅಂಬಾನಿ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ರೀತಿ ವಧೆಗಾಗಿ ಕೊಂಡೊಯ್ಯತ್ತಿರುವ ಕೋಳಿಗಳನ್ನು ರಕ್ಷಿಸುವಂತೆ ಕೆಲ ನೆಟ್ಟಿಗರು ಮನವಿ ಮಾಡಿದ್ದಾರೆ.
ಅಂತಯೇ, ‘ವಂತರಾ’ ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿರುವ ಹುಲಿ, ಸಿಂಹಗಳಿಗೆ ಮಾಂಸದ ಬದಲು ಆಹಾರವಾಗಿ ಹುಲ್ಲು ನೀಡುತ್ತಿರಾ? ಎಂದೂ ಹಲವರು ಪ್ರಶ್ನಿಸಿದ್ದಾರೆ.
ಏಪ್ರಿಲ್ 10ಕ್ಕೆ ಅನಂತ್ ಅಂಬಾನಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಜಾಮ್‌ನಗರದಿಂದ ದ್ವಾರಕಕ್ಕೆ ಸುಮಾರು 140 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ಏಪ್ರಿಲ್ 8ರಂದು ಅವರು ದ್ವಾರಕ ತಲುಪುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.