ADVERTISEMENT

ಕೋಟ್ಯಂತರ ಜನರ ಪ್ರಾರ್ಥನೆ, ಹಾರೈಕೆ ನಿಮ್ಮೊಂದಿಗಿವೆ: ಬಿಗ್‌ಬಿಗೆ ಗಣ್ಯರ ಟ್ವೀಟ್‌

ಬಚ್ಚನ್‌ ಕುಟುಂಬಕ್ಕೆ ಧೈರ್ಯ ತುಂಬಿದ ಗಣ್ಯರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 7:43 IST
Last Updated 12 ಜುಲೈ 2020, 7:43 IST
ಅಮಿತಾಭ್‌ ಬಚ್ಚನ್‌
ಅಮಿತಾಭ್‌ ಬಚ್ಚನ್‌    

ಬಾಲಿವುಡ್‌ನ ‘ಬಿಗ್ ಬಿ’ ಅಮಿತಾಭ್‌ ಬಚ್ಚನ್‌ ಮತ್ತು ಅವರ ಮಗ ಅಭಿಷೇಕ್‌ ಬಚ್ಚನ್ ಅವರಿಗೆ ಕೋವಿಡ್‌–19 ದೃಢಪಟ್ಟ ವಿಷಯ ಕೇಳಿ ಬಾಲಿವುಡ್ ಮಂದಿ ಮಾತ್ರವಲ್ಲ, ಇಡೀ ದೇಶದ ಜನರು ಆಘಾತಕ್ಕೆ ಒಳಗಾಗಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರೆ, ವಿವಿಧ ಕ್ಷೇತ್ರಗಳ ಗಣ್ಯರು, ರಾಜಕೀಯ ಮುಖಂಡರು ಪಕ್ಷಭೇದ ಮರೆತು77 ವರ್ಷದ ಹಿರಿಯ ನಟನಿಗೆ‌ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

‘ಸರ್‌, ಆದಷ್ಟೂ ಬೇಗ ಗುಣಮುಖರಾಗಿ ಬನ್ನಿ. ದೇಶದ ಕೋಟ್ಯಂತರ ಜನರ ಪ್ರಾರ್ಥನೆಗಳು ನಿಮ್ಮೊಂದಿಗಿವೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. ತಮಗೆ ಕೋವಿಡ್‌–19 ದೃಢಪಟ್ಟಿರುವ ಬಗ್ಗೆ ಬಚ್ಚನ್ ಮಾಡಿದ‌ ಟ್ವೀಟ್ ಟ್ಯಾಗ್‌ ಮಾಡಿದ್ದಾರೆ.

ಅಮಿತಾಭ್ ಬಚ್ಚನ್‌ ಮತ್ತು ಅಭಿಷೇಕ್ ಬಚ್ಚನ್‌ ಇಬ್ಬರೂ ಶನಿವಾರ ಮುಂಬೈನ ಪ್ರತಿಷ್ಠಿತ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಚ್ಚನ್‌ ಕುಟುಂಬದ ಇತರ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿ ಕೂಡ ಪರೀಕ್ಷೆಗೆ ಒಳಗಾಗಿದ್ದು, ಭಾನುವಾರ ವರದಿ ಬರುವ ನಿರೀಕ್ಷೆ ಇದೆ.

ADVERTISEMENT

‘ಡಿಯರ್‌ ಅಮಿತಾಭ್‌ ಜೀ, ನೀವು ಈ ದೇಶದ ಕೋಟ್ಯಂತರ ಜನರ ನೆಚ್ಚಿನ ಸೂಪರ್‌ಸ್ಟಾರ್‌. ನಿಮ್ಮ ಚೇತರಿಕೆಗಾಗಿ ನಾನು ಸೇರಿದಂತೆ ಇಡೀ ದೇಶದ ಜನತೆ ಪ್ರಾರ್ಥಿಸುತ್ತಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ. ಸೀನಿಯರ್‌ ಬಚ್ಚನ್‌ ಮತ್ತು ಜ್ಯೂನಿಯರ್‌ ಬಚ್ಚನ್‌ ಇಬ್ಬರೂ ಬೇಗ ಗುಣಮುಖರಾಗಿ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಟ್ವೀಟ್‌ ಮಾಡಿದ್ದಾರೆ.

‘ನೀವು ಬೇಗ ಚೇತರಿಸಿಕೊಳ್ಳುವಂತೆ ನಾವೆಲ್ಲರೂ ಪ್ರಾರ್ಥಿಸುತ್ತೇವೆ. ಬೇಗ ಗುಣಮುಖರಾಗಿ ಬಚ್ಚನ್‌ ಜೀ’ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾರೈಸಿದ್ದಾರೆ.

‘ಅಮಿತಾಭ್ ಬಚ್ಚನ್‌ ಅವರಿಗೆ ಕೋವಿಡ್‌–19 ದೃಢಪಟ್ಟಿರುವ ಸುದ್ದಿ ಕೇಳಿ ದುಃಖವಾಗಿದೆ. ಅವರು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸುತ್ತೇನೆ. ಸೀನಿಯರ್‌ ಬಚ್ಚನ್‌ ಬೇಗ ಗುಣಮುಖರಾಗಿ’ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ.

ಸೂಜಿತ್‌ ಸರ್ಕಾರ್‌ ನಿರ್ದೇಶನದ ಕಾಮಿಡಿ ಡ್ರಾಮಾ ‘ಗುಲಾಬೊ ಸಿತಾಬೊ’ ಚಿತ್ರದಲ್ಲಿ ಆಯುಷ್ಮಾನ್‌ ಖುರಾನಾ ಚಿತ್ರದಲ್ಲಿ ಅಮಿತಾಭ್ ನಟಿಸಿದ್ದಾರೆ.ಅಭಿಷೇಕ್‌ ಬಚ್ಚನ್ ನಟನೆಯ ‘ಬ್ರೀದ್‌ ಇನ್‌ ಟೂ ದ ಶಾಡೋಸ್‌’ ವೆಬ್‌ ಸೀರೀಸ್ ಶುಕ್ರವಾರ ಬಿಡುಗಡೆಯಾಗಿದೆ.

@SrBachchan @juniorbachchan #AmitabhBachchan #COVID ಹ್ಯಾಶ್‌ಟ್ಯಾಗ್‌ ಅಡಿ ಇನ್ನೂ ಅನೇಕ ಗಣ್ಯರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.