ADVERTISEMENT

ನಾಸಾ ಸಾಧನೆಯ ಶ್ರೇಯ ಪಡೆದುಕೊಳ್ಳಲು ಮುಂದಾದ ಟ್ರಂಪ್‌ಗೆ ಟ್ವೀಟಿಗರಿಂದ ತರಾಟೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2020, 8:56 IST
Last Updated 17 ನವೆಂಬರ್ 2020, 8:56 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾದ ಸಾಧನೆಯ ಶ್ರೇಯ ಪಡೆದುಕೊಳ್ಳಲು ಮುಂದಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಟ್ವೀಟಿಗರು ತರಾಟೆಗೆ ತೆಗದುಕೊಂಡಿದ್ದಾರೆ.

ನಾಲ್ವರು ಗಗನಯಾತ್ರಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ಯೋಜನೆಯಡಿ ‘ಸ್ಪೇಸ್‌ ಎಕ್ಸ್‌’ ನಿರ್ಮಿತ ನೌಕೆಯನ್ನು ಭಾನುವಾರ ರಾತ್ರಿ ನಾಸಾ ಉಡಾವಣೆ ಮಾಡಿತ್ತು. ಅದಕ್ಕೂ ಮುನ್ನ, ಬಾಹ್ಯಾಕಾಶ ನೌಕೆಯು ಉಡಾವಣೆಗೆ ಸಿದ್ಧವಾಗಿದೆ ಎಂದು ನಾಸಾ ಟ್ವೀಟ್ ಮಾಡಿತ್ತು.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ಟ್ರಂಪ್, ‘ನಾವು ಅಧಿಕಾರ ಸ್ವೀಕರಿಸುವ ಸಮಯದಲ್ಲಿ ನಾಸಾ ಮುಚ್ಚಿತ್ತು. ಈಗ ಮತ್ತೆ ವಿಶ್ವದ ಅತ್ಯಂತ ಉತ್ತಮ, ಅತ್ಯಾಧುನಿಕ, ಬಾಹ್ಯಾಕಾಶ ಕೇಂದ್ರವಾಗಿ ರೂಪುಗೊಂಡಿದೆ’ ಎಂದು ಉಲ್ಲೇಖಿಸಿದ್ದರು.

ADVERTISEMENT

ಇದಕ್ಕೆ ಟ್ವಿಟರ್‌ನಲ್ಲಿ ಅನೇಕ ಮಂದಿ ಟ್ರಂಪ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ವಿಜ್ಞಾನವನ್ನೇ ನಿರಾಕರಿಸಿದ ವ್ಯಕ್ತಿ ವಿಜ್ಞಾನದ ಸಾಧನೆಯ ಶ್ರೇಯ ಪಡೆದುಕೊಳ್ಳುವುದನ್ನು ನೋಡಿ. ಆ ಯೋಜನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ, ಅದನ್ನು ಕಲ್ಪಿಸುವುದಕ್ಕೂ ಆಗದು. ಟ್ರಂಪ್ ನಾಸಾವನ್ನು ರಕ್ಷಿಸಿದ್ದಾರಂತೆ. ಇದೆಂತಹಾ ಹಾಸ್ಯ’ ಎಂದು ಆಂಡ್ರಿಯಾ ಕುಸ್ಜೆವ್‌ಸ್ಕಿ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಇದಕ್ಕೆ ಎಲೋನ್ ಮಸ್ಕ್‌ ಮತ್ತು ನಾಸಾ ಕಾರಣವೇ ಹೊರತು ನೀವಲ್ಲ’ ಎಂದು ಎಮಿಲಿ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಕೋವಿಡ್‌ನಿಂದ 2.4 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿರುವುದನ್ನು ಬಾಹ್ಯಾಕಾಶ ಯಾನ ಮುಚ್ಚಿಹಾಕಲಿದೆ ಎಂದು ನೀವು ಭಾವಿಸಿದ್ದೀರಾ? ಇಂಥ ಯೋಜನೆಗಳನ್ನು ನಿಲ್ಲಿಸಬೇಕು, ಕೋವಿಡ್ ಪರಿಹಾರಕ್ಕೆ ಹಣಕಾಸು ನೆರವು ನೀಡಬೇಕು’ ಎಂದು ಜೆ. ಜ್ಯಾಕ್‌ಸನ್‌ ಎಂಬುವವರು ಟ್ವೀಟ್ ಮಾಡಿದ್ದಾರೆ.

ಯಾರಿಗೆ ಬೇಕು, ಕೋವಿಡ್‌ ನಿಯಂತ್ರಿಸಲು ಏನಾದರೂ ಮಾಡಿ ಎಂದು ರಾಬರ್ಟ್‌ ಸ್ಟುಡಾನ್ಸ್‌ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.