ನವದೆಹಲಿ: ಕಿರು ವಿಡಿಯೊ ಮಾಡಲು ಮತ್ತು ಶೇರ್ ಮಾಡಲು ಅನುವು ಮಾಡಿಕೊಡುವ ಹೊಸ ಮಾದರಿ ‘ರೀಲ್ಸ್’ ಟೆಸ್ಟಿಂಗ್ ಅನ್ನು ಭಾರತದಲ್ಲಿ ಆರಂಭಿಸುವುದಾಗಿ ಇನ್‌ಸ್ಟಾಗ್ರಾಂ ಬುಧವಾರ ತಿಳಿಸಿದೆ.
ಚೀನಾದ 59 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಫೇಸ್‌ಬುಕ್ ಒಡೆತನದ ಕಂಪನಿಯು ಟಿಕ್‌ಟಾಕ್ ಬಳಕೆದಾರರನ್ನು ಸೆಳೆಯಲು ಈ ಕ್ರಮಕ್ಕೆ ಮುಂದಾಗಿದೆ. ಚೀನಾ ಆ್ಯಪ್‌ಗಳ ನಿಷೇಧದ ಬಳಿಕ ದೇಶೀಯ ಕಿರು ವಿಡಿಯೊ ಆ್ಯಪ್‌ಗಳ ಡೌನ್‌ಲೋಡ್ ಪ್ರಮಾಣ ಹೆಚ್ಚಾಗಿದೆ.
ಕಳೆದ ನಾಲ್ಕೈದು ವರ್ಷಗಳಲ್ಲಿ ಲಕ್ಷಾಂತರ ಜನರಿಗೆ ಭರಿಸಬಹುದಾದ ವೆಚ್ಚದಲ್ಲಿ ಮೊಬೈಲ್ ಸಂಪರ್ಕ ದೊರೆಯುತ್ತಿದ್ದು, ವಿಡಿಯೊ ಬಳಕೆ ಹೆಚ್ಚಾಗಿದೆ ಎಂದು ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಹೇಳಿದ್ದಾರೆ.
‘ಮಾದರಿ ಯಾವುದೇ ಇರಲಿ, ಭಾರತದಲ್ಲಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಮಾಡುವವರ ಸಂಖ್ಯೆಯೇ ಹೆಚ್ಚಿದೆ. ಭವಿಷ್ಯದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಮನರಂಜನೆ ಒದಗಿಸುವ ವಿಚಾರದಲ್ಲಿ ನಮಗೆ ಉತ್ತಮ ಅವಕಾಶವಿದೆ. ಇದರಲ್ಲಿ ವಿಡಿಯೊಗಳು ಮುಖ್ಯ ಪಾತ್ರವಹಿಸಲಿವೆ’ ಎಂದು ಅವರು ಹೇಳಿದ್ದಾರೆ.
‘ರೀಲ್ಸ್’ ಮಾದರಿಯ ಟೆಸ್ಟಿಂಗ್ ನಡೆಯಲಿರುವ ನಾಲ್ಕನೇ ದೇಶವಾಗಿದೆ ಭಾರತ. ಬ್ರೆಜಿಲ್, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿಯೂ ಟೆಸ್ಟಿಂಗ್ ನಡೆಯಲಿದೆ.
ಚೀನಾ ಆ್ಯಪ್‌ಗಳ ನಿಷೇಧದ ಬಳಿಕ ದೇಶೀಯ ಆ್ಯಪ್‌ಗಳಾದ ರೋಪಾಸೊ, ಚಿಂಗಾರಿ, ಮತ್ತು ಗೋಸೋಶಿಯಲ್ ಡೌನ್‌ಲೋಡ್ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಶೇರ್‌ಚಾಟ್, ಗಾನಾದಂತಹ ಆ್ಯಪ್‌ಗಳೂ ವಿಡಿಯೊ ಪ್ಲಾಟ್‌ಫಾರ್ಮ್‌ಗಳನ್ನು ಬಿಡುಗಡೆ ಮಾಡಿವೆ. ಗಾನಾವು ‘ಹಾಟ್‌ಶಾಟ್ಸ್’ ಬಿಡುಗಡೆ ಮಾಡಿದ್ದರೆ, ಶೇರ್‌ಚಾಟ್ ‘ಮೊಜ್’ ಬಿಡುಗಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.