ADVERTISEMENT

ಸಾಮಾಜಿಕ ಜಾಲತಾಣಗಳ ವಿರುದ್ಧದ ದೂರು ಪರಿಹಾರಕ್ಕೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 16:32 IST
Last Updated 28 ಜನವರಿ 2023, 16:32 IST
   

ನವದೆಹಲಿ: ಸಾಮಾಜಿಕ ಜಾಲತಾಣಗಳ ಕುಂದುಕೊರತೆ ನಿವಾರಣಾ ಅಧಿಕಾರಿಯ ನಿರ್ಧಾರದ ವಿರುದ್ಧ ಬಳಕೆದಾರರು ಸಲ್ಲಿಸುವ ದೂರುಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶುಕ್ರವಾರ ದೂರು ಪರಿಹಾರ ಸಮಿತಿಗಳನ್ನು ರಚಿಸಿದೆ.

ಕೇಂದ್ರ ಗೃಹ ಸಚಿವಾಲಯದ ಇಂಡಿಯನ್‌ ಸೈಬರ್‌ ಕೊ–ಆರ್ಡಿನೇಷನ್‌ ಸೆಂಟರ್‌ನ (ಐಸಿಸಿಸಿ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರ (ಸಿಇಒ) ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದೆ. ನಿವೃತ್ತ ಐಪಿಎಸ್‌ ಅಧಿಕಾರಿ ಆಶುತೋಷ್‌ ಶುಕ್ಲಾ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಮಾಜಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಸೋನಿ ಅವರು ಈ ಸಮಿತಿಯ ಸದಸ್ಯರಾಗಿರಲಿದ್ದಾರೆ. ಇವರ ಅಧಿಕಾರಾವಧಿ ಮೂರು ವರ್ಷ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಲಾಗಿದೆ. ನಿವೃತ್ತ ಕಮಾಂಡರ್‌ ಸುನೀಲ್‌ ಕುಮಾರ್‌ ಗುಪ್ತಾ ಮತ್ತು ಎಲ್‌ ಆ್ಯಂಡ್‌ ಟಿ ಇನ್ಫೋಟೆಕ್‌ನ ಮಾಜಿ ಉಪಾಧ್ಯಕ್ಷ ಕವಿಂದರ್‌ ಶರ್ಮಾ ಅವರು ಇದರ ಸದಸ್ಯರಾಗಿದ್ದಾರೆ.

ADVERTISEMENT

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಜ್ಞಾನಿ ಕವಿತಾ ಭಾಟಿಯಾ ನೇತೃತ್ವದ ಮೂರನೇ ಸಮಿತಿಯಲ್ಲಿ ಭಾರತೀಯ ರೈಲ್ವೆ ಟ್ರಾಫಿಕ್‌ ಸರ್ವಿಸ್‌ನ ನಿವೃತ್ತ ಅಧಿಕಾರಿ ಸಂಜಯ್‌ ಗೋಯಲ್‌ ಹಾಗೂ ಐಡಿಬಿಐ ಇನ್‌ಟೆಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಗಿರಿ ರಘೋತ್ತಮರಾವ್‌ ಮುರಳಿ ಮೋಹನ್‌ ಅವರು ಇರಲಿದ್ದಾರೆ. ಈ ಮೂರೂ ಸಮಿತಿಗಳು ಮಾರ್ಚ್‌ 1ರಿಂದ ಕಾರ್ಯಾರಂಭ ಮಾಡಲಿವೆ. https://www.gac.gov.in ಮೂಲಕ ಮೇಲ್ಮನವಿ ಸಲ್ಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.