ADVERTISEMENT

WhatsApp Privacy: ಹೊಸ ಅಪ್‌ಡೇಟ್ ಕುರಿತು ಸರ್ಕಾರ ಸ್ಪಷ್ಟನೆ ಬಯಸುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 8:46 IST
Last Updated 14 ಜನವರಿ 2021, 8:46 IST
ವಾಟ್ಸ್ ಆ್ಯಪ್ ಬಗ್ಗೆ ಜನರಿಂದ ಟೀಕೆ
ವಾಟ್ಸ್ ಆ್ಯಪ್ ಬಗ್ಗೆ ಜನರಿಂದ ಟೀಕೆ   

ಬೆಂಗಳೂರು: ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೆಂಜರ್ ವಾಟ್ಸ್ ಆ್ಯಪ್ ನೂತನ ಪ್ರೈವೆಸಿ ಅಪ್‌ಡೇಟ್ ಕುರಿತು ಜನರಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗಿದೆ. ಅಲ್ಲದೆ, ವಾಟ್ಸ್ ಆ್ಯಪ್ ಈ ಕುರಿತು ವಿವಿಧ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ್ದರೂ, ಬಳಕೆದಾರರಿಗೆ ಭದ್ರತೆ ಮತ್ತು ಖಾಸಗಿತನ ಸೋರಿಕೆಯಾಗುವ ಅಪಾಯವಿದೆ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ವಾಟ್ಸ್ ಆ್ಯಪ್‌ನಿಂದ ಸ್ಪಷ್ಟನೆ ಬಯಸುವ ಸಾಧ್ಯತೆಯಿದೆ.

ನೂತನ ಅಪ್‌ಡೇಟ್

ಹೊಸ ಅಪ್‌ಡೇಟ್ ಮೂಲಕ ವಾಟ್ಸ್ ಆ್ಯಪ್ ಯಾವ ರೀತಿಯಲ್ಲಿ ಬದಲಾವಣೆ ತರಲು ಹೊರಟಿದೆ ಮತ್ತು ಇದರಿಂದ ಗ್ರಾಹಕರಿಗೆ ಏನು ಸಮಸ್ಯೆಯಾಗಲಿದೆ ಎನ್ನುವ ಗೊಂದಲ ಕುರಿತಂತೆ, ಸ್ವತಃ ವಾಟ್ಸ್ ಆ್ಯಪ್ ಮೂಲಕ ವಿವರಣೆ ಪಡೆಯಬೇಕಿದೆ. ವಾಟ್ಸ್ ಆ್ಯಪ್ ಹೊಸ ಅಪ್‌ಡೇಟ್ ಬಳಿಕ ಜನರು ಅಸಮಾಧಾನಗೊಂಡಿದ್ದು, ಬದಲಿ ಮೆಸೆಂಜರ್ ಆ್ಯಪ್‌ಗಳತ್ತ ಮುಖಮಾಡಿದ್ದಾರೆ. ಇದರಿಂದ ಟೆಲಿಗ್ರಾಂ ಮತ್ತು ಸಿಗ್ನಲ್ ಆ್ಯಪ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ADVERTISEMENT

ವಾಟ್ಸ್ ಆ್ಯಪ್ ಬಗ್ಗೆ ಜನರಿಂದ ಟೀಕೆ

ಹೊಸ ಅಪ್‌ಡೇಟ್ ಬಳಿಕ ಜನರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಸ್ಪಷ್ಟನೆ ನೀಡಿದ್ದ ವಾಟ್ಸ್ ಆ್ಯಪ್, ಬ್ಯುಸಿನೆಸ್ ಚಾಟ್‌ಗಳನ್ನು ಮಾತ್ರ ಫೇಸ್‌ಬುಕ್ ಬಳಸಿಕೊಳ್ಳಲಿದ್ದು, ಜಾಹೀರಾತು ಮತ್ತು ಪೂರಕ ಮಾರುಕಟ್ಟೆ ಕಲ್ಪಿಸಲು ನೆರವಾಗುತ್ತದೆ. ಆದರೆ ಬಳಕೆದಾರರ ವೈಯಕ್ತಿಕ ವಾಟ್ಸ್ ಆ್ಯಪ್ ಚಾಟ್, ಗ್ರೂಪ್ ಚಾಟ್‌ಗಳಲ್ಲಿನ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಮುಂದುವರಿಯಲಿದೆ ಎಂದು ಹೇಳಿತ್ತು.

ಪೇಟಿಎಂ ಸಿಇಒ ಅಸಮಾಧಾನ

ಹೊಸ ಪ್ರೈವೆಸಿ ಅಪ್‌ಡೇಟ್ ಕುರಿತು ವಾಟ್ಸ್ ಆ್ಯಪ್ ಸೂಕ್ತ ಮಾಹಿತಿ ನೀಡುತ್ತಿಲ್ಲ. ಮುಖ್ಯವಾದ ಸಂಗತಿಯನ್ನು ಜನರಿಂದ ಅದು ಮುಚ್ಚಿಡುತ್ತಿದೆ ಎಂದು ಪೇಟಿಎಂ ಸಿಇಒ ವಿಜಯ್ ಶಂಕರ್ ಶರ್ಮಾ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಒಂದು ನೀತಿ, ಯುರೋಪ್‌ನಲ್ಲಿ ಮತ್ತೊಂದು ನೀತಿ ಎನ್ನುವ ಮೂಲಕ ವಾಟ್ಸ್ ಆ್ಯಪ್ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ವಿಜಯ್ ಶಂಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.