ADVERTISEMENT

ದೇಶೀ ಸಾಮಾಜಿಕ ಮಾಧ್ಯಮ ಜಾಲ 'ಇನ್ ಕೊಲಾಬ್'

ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ಆ್ಯಪ್ ವೈಶಿಷ್ಟ್ಯ ಇರುವ ದೇಸೀ ಆ್ಯಪ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 12:11 IST
Last Updated 28 ಆಗಸ್ಟ್ 2020, 12:11 IST
ದೇಸೀ ಸೋಷಿಯಲ್ ಮೀಡಿಯಾ ಇನ್ ಕೊಲಾಬ್
ದೇಸೀ ಸೋಷಿಯಲ್ ಮೀಡಿಯಾ ಇನ್ ಕೊಲಾಬ್   

ಬೆಂಗಳೂರು: ಭಾರತೀಯ ಮೂಲದ 'ಇನ್ ಕೊಲಾಬ್' ಎಂಬ ಸಾಮಾಜಿಕ ಮಾಧ್ಯಮ ಜಾಲವನ್ನು ನೆಕ್ಸ್ಟ್-ಜೆನ್ ಡೇಟಾ ಸೆಂಟರ್ ಗುರುವಾರ ಪರಿಚಯಿಸಿದೆ.

ಭಾರತ ಸರ್ಕಾರವು ನೂರಕ್ಕೂ ಹೆಚ್ಚು ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿದ ಬಳಿಕ ಸಾಕಷ್ಟು 'ಮೇಡ್ ಇನ್ ಇಂಡಿಯಾ' ಆ್ಯಪ್‌ಗಳು ಕೂಡ ಬೆಳಕು ಕಂಡಿದ್ದು, ಇನ್ ಕೊಲಾಬ್ (In:Collab) ಆ್ಯಪ್ ಈಗ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದೆ.

ಕೊರೊನಾ ಪಿಡುಗಿನಿಂದ ಮನೆಯೊಳಗೇ ಇರಬೇಕಾದ ಅನಿವಾರ್ಯತೆಯ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ನೆಕ್ಸ್ಟ್-ಜೆನ್ ಹೇಳಿದೆ. ಆನ್‌ಲೈನ್ ಸುರಕ್ಷತೆ, ಕ್ಲೌಡ್ ಆಧಾರಿತ ಡೇಟಾ ಪರಿಹಾರೋಪಾಯಗಳು ಮತ್ತು ಡೇಟಾ ಸುರಕ್ಷತಾ ಸೇವೆಗಳಲ್ಲಿ ತೊಡಗಿಕೊಂಡಿರುವ ನೆಕ್ಸ್ಟ್‌ಜೆನ್ ಡೇಟಾ ಸೆಂಟರ್‌ನ ಮಲ್ಟಿ ವರ್ಸ್ ಟೆಕ್ನಾಲಜೀಸ್ ಘಟಕವು ಈ ಆ್ಯಪ್ ರೂಪಿಸಿದೆ.

ADVERTISEMENT

ಈ ಬಗ್ಗೆ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ನೆಕ್ಟ್‌ಜೆನ್ ಸಿಇಒ ಎ.ಎಸ್.ರಾಜಗೋಪಾಲ್ ಅವರು, ಈ ಆ್ಯಪ್ ಮೂಲಕ ಬಳಕೆದಾರರು ತಮ್ಮ ಸ್ನೇಹಿತರು, ಕುಟುಂಬಿಕರ ಜೊತೆಗಷ್ಟೇ ಅಲ್ಲದೆ, ಸಹೋದ್ಯೋಗಿಗಳೊಂದಿಗೂ ಸಂವಹನ ನಡೆಸಬಹುದು. ಈ ಜಾಲದ ಮೂಲಕ ಕಚೇರಿಯ ಗುಂಪು ಮಾಡಿಕೊಂಡು, ಮಾಹಿತಿಗಳ ವಿನಿಮಯ ಸುಲಭವಾಗಿ ಮಾಡಿಕೊಳ್ಳಬಹುದು ಎಂದಿದ್ದಾರೆ.

ಇನ್ ಕೊಲಾಬ್ ಎಂಬುದು ಫೇಸ್‌ಬುಕ್, ಟಿಕ್ ಟಾಕ್, ಇನ್‌ಸ್ಟಾಗ್ರಾಂ, ವಾಟ್ಸ್ಆ್ಯಪ್, ಟ್ವಿಟರ್, ಸ್ಲ್ಯಾಕ್ ಮತ್ತಿತರ ವೇದಿಕೆಗಳಲ್ಲಿರುವ ಪ್ರಮುಖ ವೈಶಿಷ್ಟ್ಯಗಳನ್ನೆಲ್ಲ ಹೊಂದಿದೆ. ಇದೇ ವೇಳೆ, ಭಾರತೀಯರ ಮಾಹಿತಿಯು ಭಾರತದೊಳಗಿರುವ ಸರ್ವರ್‌ನಲ್ಲೇ ಸುರಕ್ಷಿತವಾಗಿರುತ್ತದೆ ಎಂದೂ ರಾಜಗೋಪಾಲ್ ಹೇಳಿದ್ದಾರೆ.

ಇಷ್ಟಲ್ಲದೆ, ಈ ವೇದಿಕೆಯ ಮೂಲಕ ಹಂಚಿಕೊಳ್ಳಲಾಗುವ ನಕಲಿ ಸುದ್ದಿ/ಮಾಹಿತಿಯ ಹಾವಳಿ ತಡೆಯುವುದಕ್ಕಾಗಿ ಸಮರ್ಥವಾದ ಸತ್ಯಶೋಧನಾ ತಂಡವೊಂದು ಕಾರ್ಯನಿರತವಾಗಿರುತ್ತದೆ. ಸಮುದಾಯ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಬಳಕೆದಾರರಿಗೆ ಎಚ್ಚರಿಸಲಾಗುತ್ತದೆ ಎಂದವರು ಹೇಳಿದ್ದಾರೆ.

ಪ್ರಸ್ತುತ ಇಂಗ್ಲಿಷ್‌ನಲ್ಲಿ ಲಭ್ಯವಿರುವ ಈ ಆನ್‌ಲೈನ್ ಸಾಮಾಜಿಕ ವೇದಿಕೆಯು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೂ ದೊರೆಯಲಿದೆ. ಇಂಟರ್ಫೇಸ್ ಬಹುತೇಕ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಅನ್ನೇ ಹೋಲುತ್ತಿದ್ದು, ಸರಳವಾಗಿದೆ. ಇದರಲ್ಲಿ ವಿಡಿಯೊ, ಪಠ್ಯ, ಫೋಟೊಗಳನ್ನು ಹಂಚಿಕೊಳ್ಳಬಹುದು. ಇದಲ್ಲದೆ, ಆ್ಯಪ್ ಒಳಗಿಂದಲೇ ಟಿಕ್ ಟಕ್ ಟೋ, ಟ್ರಿವಿಯ ಮುಂತಾದ ಗೇಮ್‌ಗಳನ್ನೂ ಆಡಬಹುದು. ಒಂದೇ ಲಾಗಿನ್ ಮೂಲಕ ಹಲವು ಪ್ರೊಫೈಲ್‌ಗಳನ್ನು ರಚಿಸುವ ಅವಕಾಶವಿದೆ.

ಇದರಲ್ಲಿ ಸಾರ್ವಜನಿಕ, ವೈಯಕ್ತಿಕ, ಲೈವ್ ಲೋಕಲ್ (ಸ್ಥಳೀಯ ಇ-ವಾಣಿಜ್ಯ ಚಾನೆಲ್), ಸರ್ಕಲ್‌ಗಳು (ಗುಂಪುಗಳು) ಮತ್ತು ವರ್ಕ್ (ಕಚೇರಿ ಗುಂಪು) ಎಂಬ ಐದು ವಿಧಾನದಲ್ಲಿ ಮಾಹಿತಿ ಹಂಚಿಕೊಳ್ಳಬಹುದು. ಚಾಟಿಂಗ್ ಆಯ್ಕೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.