ADVERTISEMENT

Threads | ಟ್ವಿಟರ್‌ಗೆ ಸೆಡ್ಡು: ಹೊಸ ಆ್ಯಪ್ ಪರಿಚಯಿಸಲಿರುವ ಫೇಸ್‌ಬುಕ್‌ ಒಡೆತನದ ಮೆಟಾ

ರಾಯಿಟರ್ಸ್
Published 4 ಜುಲೈ 2023, 5:11 IST
Last Updated 4 ಜುಲೈ 2023, 5:11 IST
   

ಲಂಡನ್: ಮೆಟಾ ಪ್ಲಾಟ್‌ಫಾರ್ಮ್ಸ್‌ ಕಂಪನಿಯು ಟ್ವಿಟರ್‌ಗೆ ಸ್ಪರ್ಧೆ ಒಡ್ಡಬಲ್ಲ, ‘ಥ್ರೆಡ್ಸ್’ ಹೆಸರಿನ ಹೊಸ ಮೈಕ್ರೊಬ್ಲಾಗಿಂಗ್ ಆ್ಯಪ್‌ ಆರಂಭಿಸಲು ಮುಂದಾಗಿದೆ.

ಟ್ವಿಟರ್‌ ಬಳಕೆದಾರರು ದಿನಕ್ಕೆ ಇಂತಿಷ್ಟು ಟ್ವೀಟ್‌ಗಳನ್ನು ಮಾತ್ರ ನೋಡಬಹುದು ಎಂಬ ಮಿತಿ ಹೇರಿದ ನಂತರದಲ್ಲಿ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಅವರು ವ್ಯಾಪಕ ಟೀಕೆ ಎದುರಿಸುತ್ತಿದ್ದಾರೆ.

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯು ಥ್ರೆಡ್ಸ್‌ ಅ್ಯಪ್‌ಅನ್ನು ಗುರುವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಮೆಟಾ ಕಂಪನಿಗೇ ಸೇರಿರುವ ಇನ್ನೊಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿರುವ ಹಿಂಬಾಲಕರನ್ನು ಥ್ರೆಡ್ಸ್‌ ಆ್ಯಪ್‌ನಲ್ಲಿಯೂ ಉಳಿಸಿಕೊಳ್ಳಲು ಅವಕಾಶ ಇರಲಿದೆ.

ADVERTISEMENT

ಅಲ್ಲದೆ, ಬಳಕೆದಾರರು ಇನ್‌ಸ್ಟಾಗ್ರಾಂನಲ್ಲಿ ತಾವು ಹೊಂದಿರುವ ಬಳಕೆದಾರರ ಹೆಸರನ್ನೇ (ಯೂಸರ್‌ನೇಮ್‌) ಥ್ರೆಡ್ಸ್‌ನಲ್ಲಿಯೂ ಉಳಿಸಿಕೊಳ್ಳಬಹುದು.

ಮಸ್ಕ್ ಅವರು 2022ರಲ್ಲಿ ಟ್ವಿಟರ್ ಕಂಪನಿಯನ್ನು ಖರೀದಿಸಿದರು. ಇದಾದ ನಂತರದಲ್ಲಿ ಟ್ವಿಟರ್‌ ಕಂಪನಿಯು ಹಲವು ಬಗೆಯ ವಿವಾದಗಳಿಗೆ ಈಡಾಗಿದೆ. ಟ್ವಿಟರ್ ಕಂಪನಿಯನ್ನು ಮಸ್ಕ್ ಅವರು ಸ್ವಾಧೀನಕ್ಕೆ ತೆಗದುಕೊಂಡ ನಂತರದಲ್ಲಿ, ಅದರ ಪ್ರತಿಸ್ಪರ್ಧಿಗಳಾದ ಮಾಸ್ಟೊಡನ್ ಮತ್ತು ಬ್ಲೂಸ್ಕೈ ಬಳಕೆದಾರರ ಸಂಖ್ಯೆಯು ಹೆಚ್ಚಾಗಿದೆ. ಆದರೂ ಇವು ಟ್ವಿಟರ್‌ಗೆ ಸವಾಲು ಒಡ್ಡುವಂತೆ ಬೆಳೆದಿಲ್ಲ.

ಆದರೆ ಇನ್‌ಸ್ಟಾಗ್ರಾಂ ಈಗಾಗಲೇ ಕೋಟ್ಯಂತರ ಮಂದಿ ಬಳಕೆದಾರರನ್ನು ಹೊಂದಿದೆ. ಅಲ್ಲದೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದ ಸೌಲಭ್ಯಗಳನ್ನು ತನ್ನಲ್ಲಿಯೂ ನೀಡುವ ಪರಿಪಾಠವನ್ನು ಇನ್‌ಸ್ಟಾಗ್ರಾಂ ಬೆಳೆಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.