ADVERTISEMENT

No sir, Yes sir: ಟ್ರೆಂಡ್ ಆಯ್ತು ಪ್ರಧಾನಿ ಮೋದಿ ಟ್ವೀಟ್ ಪರ-ವಿರೋಧ ಚರ್ಚೆ

ಸಾಮಾಜಿಕ ಜಾಲತಾಣ ತ್ಯಜಿಸುವ ಸುಳಿವು ನೀಡಿದ್ದ ಪ್ರಧಾನಿ

ಏಜೆನ್ಸೀಸ್
Published 3 ಮಾರ್ಚ್ 2020, 7:51 IST
Last Updated 3 ಮಾರ್ಚ್ 2020, 7:51 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಸಾಮಾಜಿಕ ಮಾಧ್ಯಮ ಖಾತೆಗಳಿಂದ ದೂರ ಉಳಿಯುವ ಚಿಂತನೆಯಲ್ಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು ಮಂಗಳವಾರ ಟ್ವಿಟರ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ಮೋದಿ ಟ್ವೀಟ್‌ಗೆ ಪ್ರತಿಪಕ್ಷಗಳ ನಾಯಕರು ಬೆಳಿಗ್ಗೆ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ ಪರ–ವಿರೋಧ, ವ್ಯಂಗ್ಯ, ತಮಾಷೆಗಳಿಂದ ಕೂಡಿದ ಚರ್ಚೆ ಆರಂಭವಾಗಿದೆ. #NoSir, #YesSir, #NoModiNoTwitter ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.

ಅನೇಕರು ಮೋದಿ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇನ್ನೂ ಅನೇಕರು, ಅವರು ಸಾಮಾಜಿಕ ಜಾಲತಾಣ ತ್ಯಜಿಸಿದರೆ ನಾವೂ ಅದೇ ಹಾದಿ ಹಿಡಿಯಲಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗಳಿಂದ ದೂರ ಉಳಿಯುವ ಚಿಂತನೆಯಲ್ಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದರು.

‘ಅದು ಸಾಮಾಜಿಕ ಮಾಧ್ಯಮವೇ ಆಗಿರಲಿ ಚುನಾವಣಾ ಪ್ರಚಾರ ರ್‍ಯಾಲಿಯೇ ಆಗಿರಲಿ. ಇದು ಮೋದಿಯವರ ಜನಪ್ರಿಯತೆ, ಇದನ್ನು ಯಾರೂ ಮೀರಿಸಲು ಸಾಧ್ಯವಿಲ್ಲ’ ಎಂದು ಮೋದಿ ರ್‍ಯಾಲಿ ಸಂದರ್ಭದಲ್ಲಿ ಅಪಾರ ಜನಸ್ತೋಮ ಸೇರಿರುವ ವಿಡಿಯೊವೊಂದನ್ನು #NoSir ಹ್ಯಾಷ್‌ಟ್ಯಾಗ್ ಅಡಿ ಗೀತಿಕಾ ಸ್ವಾಮಿ ಎಂಬುವವರು ಟ್ವೀಟ್ ಮಾಡಿದ್ದಾರೆ.

‘#YESSIR ... ಆದರೆ ಜತೆಗೆ ನಿಮ್ಮ ಸಂಘಿಗಳನ್ನೂ ಕರೆದುಕೊಂಡು ಹೋಗಿ. ಸಾಮಾಜಿಕ ಮಾಧ್ಯಮಗಳು ಶುದ್ಧವಾಗಲಿವೆ’ ಎಂದು ಶ್ರೀನಿವಾಸ್ ಎಂಬುವವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

‘ಗೌರವಾನ್ವಿತ ನರೇಂದ್ರ ಮೋದಿಯವರೇ, ನೀವು ಎಲ್ಲ ಭಾರತೀಯರಿಗೆ ಸ್ಫೂರ್ತಿ. ಸಾಮಾಜಿಕ ಮಾಧ್ಯಮ ಖಾತೆಗಳನ್ನು ತ್ಯಜಿಸಬೇಡಿ. #NoModiNoTwitter’ ಎಂದು ಅಮೃತಾ ಪಾಂಡೆ ಎಂಬುವವರು ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ, ಮೋದಿ ಅವರ ಟ್ವೀಟ್‌ ದೇಶದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವ ಸುಳಿವೇ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಸಹ ಟ್ವೀಟ್‌ನಲ್ಲಿ ಈ ಅನುಮಾನ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರು ಅತಿ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ಅವರು ಟ್ವಿಟರ್‌ನಲ್ಲಿ 5.3 ಕೋಟಿ, ಫೇಸ್‌ಬುಕ್‌ನಲ್ಲಿ 4.4 ಕೋಟಿ, ಇನ್‌ಸ್ಟಾಗ್ರಾಮ್‌ನಲ್ಲಿ 3.5 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ. ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಜಗತ್ತಿನ ನಾಯಕರಲ್ಲಿ ಮೋದಿ ಮುಂಚೂಣಿಯಲ್ಲಿದ್ದಾರೆ. ಭಾರತದ ರಾಜಕಾರಣಿಗಳ ಪೈಕಿ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ಜನರನ್ನು ನೇರವಾಗಿ ತಲುಪಲು ಸಾಮಾಜಿಕ ಜಾಲತಾಣಗಳನ್ನು ಆರಂಭದಿಂದಲೇ ಬಳಸಿ ಜನಪ್ರಿಯತೆ ಗಳಿಸಿದ್ದಾರೆ. ಆದರೆ ಈಗ ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಸುಳಿವು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಪರ, ವಿರೋಧ, ಸ್ವಾರಸ್ಯಕರ ಕೆಲವು ಟ್ವೀಟ್‌ಗಳು ಇಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.