ADVERTISEMENT

ಟ್ವಿಟರ್‌ ನಂತರ ಈಗ ಫೇಸ್‌ಬುಕ್‌ನಲ್ಲೂ ಉದ್ಯೋಗ ಕಡಿತದ ಭೀತಿ

ಐಎಎನ್ಎಸ್
Published 7 ನವೆಂಬರ್ 2022, 5:16 IST
Last Updated 7 ನವೆಂಬರ್ 2022, 5:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಟ್ವಿಟರ್‌ನಲ್ಲಿ ಸಾವಿರಾರು ಮಂದಿ ಕೆಲಸ ಕಳೆದುಕೊಳ್ಳುತ್ತಿರುವ ನಡುವೆಯೇ, ಮಾರ್ಕ್ ಜುಕರ್‌ಬರ್ಗ್ ಮಾಲೀಕತ್ವದ ‘ಮೆಟಾ’ ಕೂಡ ಈ ವಾರ 'ಸಾವಿರಾರು' ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

ಬುಧವಾರದಿಂದ ಪ್ರಾರಂಭವಾಗುವ ದೊಡ್ಡ ಪ್ರಮಾಣದ ಉದ್ಯೋಗ ಕಡಿತವು ಸಾವಿರಾರು ಸಿಬ್ಬಂದಿಯ ಮೇಲೆ ಪರಿಣಾಮ ಬೀರಬಹುದು ಎಂದು ಸುದ್ದಿ ಮಾಧ್ಯಮ ‘ದಿ ವಾಲ್ ಸ್ಟ್ರೀಟ್ ಜರ್ನಲ್‌’ ವರದಿ ಹೇಳಿದೆ.

‘ಉದ್ಯೋಗ ಕಡಿತ ಮಾಡುವ ಸಾಮಾಜಿಕ-ಮಾಧ್ಯಮ ಕಂಪನಿಯ ಈ ನಿರ್ಧಾರವು ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಕಂಪನಿಯ 18 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಎನಿಸಿಕೊಳ್ಳಲಿದೆ’ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ADVERTISEMENT

ಸೆಪ್ಟೆಂಬರ್‌ನಲ್ಲಿ ನೀಡಿದ ಮಾಹಿತಿ ಪ್ರಕಾರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನ ಮಾಲೀಕ ಸಂಸ್ಥೆಯಾದ ಮೆಟಾದಲ್ಲಿ 87,000 ಉದ್ಯೋಗಿಗಳಿದ್ದಾರೆ.

ಕಡಿಮೆ ಸಂಖ್ಯೆಯ, ಹೆಚ್ಚಿನ ಆದ್ಯತೆಯ ಕ್ಷೇತ್ರಗಳ ಮೇಲೆ ಕಂಪನಿಯು ಗಮನಹರಿಸಲಿದೆ ಎಂದು ಮಾರ್ಕ್‌ ಜುಕರ್‌ಬರ್ಗ್ ಅವರು ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪನಿ ನಿರಾಕರಿಸಿದೆ.

ಮುಂದೆ ಕ್ಲಿಷ್ಟಕರ ಸನ್ನಿವೇಶ ಸೃಷ್ಟಿಯಾಗುವ ಬಗ್ಗೆ ಮೆಟಾದ ಉತ್ಪನ್ನ ಅಧಿಕಾರಿ ಕ್ರಿಸ್ ಕಾಕ್ಸ್ ಈ ಹಿಂದೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ನಿಧಾನಗತಿಯ ಬೆಳವಣಿಗೆ ಇರುವ ಈ ಪರಿಸ್ಥಿತಿಯಲ್ಲಿ ಕೆಲಸಗಾರರು ದೋಷರಹಿತವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದರು.

ಮೆಟಾದ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 4 ರಷ್ಟು ಕುಸಿಯುತ್ತಿದೆ ಎಂದು ಹೇಳಲಾಗಿದೆ. ಸದ್ಯ ಅದರ ವಹಿವಾಟು 27.7 ಬಿಲಿಯನ್‌ ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.