ರೊಮಾ ಮಿಷೆಲ್
ಇನ್‌ಸ್ಟಾಗ್ರಾಂ ಚಿತ್ರ
ಲಾಹೋರ್: ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಹೊಂಬಣ್ಣದ ಬಿಕಿನಿಯಲ್ಲಿ ಮಿಂಚಿದ ರೂಪದರ್ಶಿ ರೊಮಾ ಮಿಷೆಲ್ ಅವರು ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ.
ಕಾರಣವಿಷ್ಟೇ, ಇವರು ಪಾಕಿಸ್ತಾನದ ರೂಪದರ್ಶಿ. ಬಿಕಿನಿಯಲ್ಲಿ ರ‍್ಯಾಂಪ್ ವಾಕ್ ಮಾಡುವ ಮೂಲಕ ತನ್ನ ದೇಶದ ಹೆಸರನ್ನು ಹೆಮ್ಮೆಯಿಂದ ಕೂಗಿ ಹೇಳಿದ ಇವರು, ಜಗತ್ತಿನ ಇತರ ರಾಷ್ಟ್ರಗಳ ಜನರ ಹುಬ್ಬೇರಿಸುವಂತೆ ಮಾಡಿದ್ದರೆ, ಇತ್ತ ಪಾಕಿಸ್ತಾನದಲ್ಲಿ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಪಾಕಿಸ್ತಾನದಿಂದ ಪಾಲ್ಗೊಂಡ ಚೊಚ್ಚಲ ಅಭ್ಯರ್ಥಿ ರೊಮಾ. 29 ವರ್ಷದ ಇವರು ಪಾಕಿಸ್ತಾನದ ಕ್ರೈಸ್ತ ಸಮುದಾಯಕ್ಕೆ ಸೇರಿದವರು.
ತನ್ನ ಈ ಸಾಧನೆಯನ್ನು ಹೆಮ್ಮೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಇವರು ಹಂಚಿಕೊಂಡಿದ್ದರು. ಸ್ವದೇಶದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ನಂತರ ಅಳಿಸಿಹಾಕಿದ್ದಾರೆ. ವಿರೋಧ ವ್ಯಕ್ತಪಡಿಸಿದವರಲ್ಲಿ ಹಲವರು ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ವರದಿಯಾಗಿದೆ.
ಬಿಕಿನಿ ಸುತ್ತಿನಲ್ಲಿ ಸಿಂಗಲ್ ಪೀಸ್ ಬಿಕಿನಿ ತೊಟ್ಟು ರ್‍ಯಾಂಪ್ ವಾಕ್ ಮಾಡಿದ ರೊಮಾ ಅವರ ನಡಿಗೆಯನ್ನು ಹಲವರು ದಿಟ್ಟತನಕ್ಕೆ ಹೋಲಿಸಿದರೆ, ಇನ್ನೂ ಕೆಲವರು ಈ ಸುತ್ತನ್ನೇ ಅವರು ಕೈಬಿಡಬೇಕಿತ್ತು ಎಂದಿದ್ದಾರೆ. ಇನ್ನೂ ಕೆಲವರು ದೇಶದ ಮಾನ ಹರಾಜು ಹಾಕಿದ್ದಾರೆ ಎಂದು ಸಿಡಿಮಿಡಿಗೊಂಡಿದ್ದಾರೆ. ಇಸ್ಲಾಂನಲ್ಲಿ ರೊಮಾ ಅವರದ್ದು ದೊಡ್ಡ ಪಾಪ ಕೃತ್ಯ ಎಂದಿದ್ದಾರೆ. ರೂಪದರ್ಶಿಯ ಇಂಥ ನಡೆಯನ್ನು ಪಾಕಿಸ್ತಾನ ಸರ್ಕಾರ ಹೇಗೆ ನಡೆಯಲು ಬಿಟ್ಟಿತು ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಆಕ್ರೋಶದ ನಡುವೆಯೂ ರೊಮಾ ಮಿಷೆಲ್ ಅವರ ರ‍್ಯಾಂಪ್ ವಾಕ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.