ADVERTISEMENT

ಖಾಸಗಿಯಾಗಿ ಉಳಿದಿಲ್ಲ ವಾಟ್ಸ್‌ಆ್ಯಪ್ ಗ್ರೂಪ್ ಚಾಟ್; ಮೌನವಹಿಸಿದೆ ಫೇಸ್‌ಬುಕ್

ಏಜೆನ್ಸೀಸ್
Published 22 ಫೆಬ್ರುವರಿ 2020, 13:23 IST
Last Updated 22 ಫೆಬ್ರುವರಿ 2020, 13:23 IST
ವಾಟ್ಸ್‌ಆ್ಯಪ್‌– ಸಾಂದರ್ಭಿಕ ಚಿತ್ರ
ವಾಟ್ಸ್‌ಆ್ಯಪ್‌– ಸಾಂದರ್ಭಿಕ ಚಿತ್ರ    

ಖಾಸಗಿ ವಾಟ್ಸ್‌ಆ್ಯಪ್‌ ಗುಂಪುಗಳಿಗೆ ಆಹ್ವಾನಿಸಲು ಬಳಸುವ ಲಿಂಕ್‌ ಈಗ ಖಾಸಗಿಯಾಗಿ ಉಳಿದಿಲ್ಲ. ಗೂಗಲ್‌ನಲ್ಲಿ ಒಂದಷ್ಟು ಹುಡುಕಾಡಿದರೆ ಸಾಕು, ಖಾಸಗಿ ಚಾಟ್‌ ಗ್ರೂಪ್‌ಗಳ ಲಿಂಕ್‌ಗಳ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ. ಅಂದರೆ, ಖಾಸಗೀತನ ತಂತ್ರಜ್ಞಾನ ಜಗತ್ತಿನಲ್ಲಿ ಬಯಲಾಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲವೇ?

ಗೂಗಲ್‌ನಲ್ಲಿ ಸುಮಾರು 4,70,000 ಗ್ರೂಪ್‌ ಇನ್ವೈಟ್‌ ಲಿಂಕ್‌ಗಳ ಸಂಗ್ರಹವಿದೆ ಎಂದು ರಿವರ್ಸ್‌ ಆ್ಯಪ್‌ ಎಂಜಿನಿಯರ್‌ ಜೇನ್‌ ಮ್ಯಾನ್‌ಚನ್‌ ವಾಂಗ್‌ ಟ್ವೀಟ್ ಮಾಡಿದ್ದಾರೆ.

ವಾಟ್ಸ್‌ಆ್ಯಪ್‌ ನಿರ್ವಹಿಸುತ್ತಿರುವ ಫೇಸ್‌ಬುಕ್‌ಗೂ ಈ ವಿಚಾರ ತಿಳಿದಿದೆ! ತಿಳಿದರೂ ಸುಮ್ಮನಿದೆ!

ADVERTISEMENT

ಚರ್ಚೆಗಳು, ವಿಷಯ ಹಂಚಿಕೆಗಾಗಿ ರೂಪಿಸಿಕೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಆಹ್ವಾನಿಸಲು ಲಿಂಕ್ ಬಳಸಲಾಗುತ್ತದೆ. ಗ್ರೂಪ್‌ ನಿರ್ವಹಣೆ ಮಾಡುವವರು ಹಂಚಿಕೊಳ್ಳುವ ಇನ್ವೈಟ್‌ ಲಿಂಕ್‌ ಇದ್ದರೆ ಮಾತ್ರವೇ ನಿರ್ದಿಷ್ಟ ಗುಂಪಿನೊಳಗೆ ಸೇರಿಕೊಳ್ಳಲು ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಸಾಧ್ಯವಾಗುತ್ತದೆ. ಖಾಸಗಿಯಾಗಿ ಹಂಚಿಕೆಯಾಗುವ ಇಂಥ ಇನ್ವೈಟ್‌ ಲಿಂಕ್‌ಗಳು ಗೂಗಲ್‌ ಸಂಗ್ರಹ ಸೇರಿಕೊಂಡಿವೆ.

ಖಾಸಗಿತನದ ಲೋಪ, ಸುರಕ್ಷತಾ ಕ್ರಮಗಳಲ್ಲಿ ಆಗುವ ಲೋಪಗಳಿಗೆ ಸಮಸ್ಯೆ ಕಾಣಿಸಿಕೊಂಡ ಆ್ಯಪ್‌ಗಳೇ ಹೊಣೆ ವಹಿಸಬೇಕಾಗುತ್ತದೆ. @hackrzvijay ಹೆಸರಿನ ಟ್ವಿಟರ್‌ ಖಾತೆ ಹೊಂದಿರುವ ವ್ಯಕ್ತಿ ಕಳೆದ ವರ್ಷ ನವೆಂಬರ್‌ನಲ್ಲೇ ಗ್ರೂಪ್‌ ಚಾಟ್‌ ಲಿಂಕ್‌ ಬಹಿರಂಗವಾಗುತ್ತಿರುವ ಕುರಿತು ಫೇಸ್‌ಬುಕ್‌ ಗಮನ ಸೆಳೆದಿದ್ದರು. ಸುರಕ್ಷತೆಗೆ ಎದುರಾಗಿರುವ ತೊಡಕನ್ನು ತೋರಿಸಿ, ಸಮಸ್ಯೆ ಗುರುತಿಸಿದ್ದಕ್ಕೆ 'ಬಹುಮಾನ' ಪಡೆಯುವ ಅಪೇಕ್ಷೆಯಲ್ಲಿದ್ದರು. ಆದರೆ, ಫೇಸ್‌ಬುಕ್‌ ಕ್ಯಾಷ್‌ ಬೌಂಟಿ ಕೊಡುವುದನ್ನು ನಿರಾಕರಿಸಿ 'ಅದನ್ನು ತಿಳಿದು ಸಹ ಸುಮ್ಮನಿರುವ ಪರಿಸ್ಥಿತಿ. ಗೂಗಲ್‌ ಇಂಡೆಕ್ಸ್‌ ಮತ್ತು ಇತರೆ ಸರ್ಚ್‌ ಎಂಜಿನ್‌ಗಳ ಸಂಗ್ರಹವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ...' ಎಂದು ಅಸಹಾಯಕತೆ ವ್ಯಕ್ತಪಡಿಸಿತ್ತು.

ಗೂಗಲ್‌ ಸೇರಿದಂತೆ ಇತರೆ ಸರ್ಚ್‌ ಎಂಜಿನ್‌ಗಳು 'ಕ್ರಾಲರ್‌' ಪ್ರೋಗ್ರಾಮ್‌ ಮೂಲಕ ಭೇಟಿ ನೀಡುವ ವೆಬ್‌ಸೈಟ್‌ ಯುಆರ್‌ಎಲ್‌, ಹುಡುಕಾಡುವ ಮಾಹಿತಿ, ಹಂಚಿಕೆಯಾಗುವ ಲಿಂಕ್‌ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಡುತ್ತದೆ. ಸರ್ಚ್ ಎಂಜಿನ್‌ಗಳಲ್ಲಿ ವಿಷಯಕ್ಕೆ ಸಂಬಂಧಿಸಿದ ಹುಡುಕಾಟ ನಡೆದಾಗ ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ತೋರುತ್ತದೆ. ಖಾಸಗಿ ವಾಟ್ಸ್‌ಆ್ಯಪ್‌ ಚಾಟ್‌ ಗ್ರೂಪ್‌ಗಳ ಮಾಹಿತಿ ಬಹಿರಂಗವಾಗಿರುವುದರ ಬಗ್ಗೆ ಫೇಸ್‌ಬುಕ್‌ ಮತ್ತು ಗೂಗಲ್‌ ಎರಡೂ ಕಂಪನಿಗಳು ಸೂಕ್ತ ಕ್ರಮಕೈಗೊಂಡಿರುವುದು ಈವರೆಗೂ ಕಂಡು ಬಂದಿಲ್ಲ.

ಗೂಗಲ್‌ನಲ್ಲಿ 'chat.whatsapp.com' ಎಂದು ಟೈಪ್‌ ಮಾಡಿ ನಿಮ್ಮ ಗುಂಪಿನ ಚರ್ಚೆಗೆ ಸಂಬಂಧಿಸಿದ ಕೆಲವು ಪದಗಳನ್ನು ಟೈಪಿಸಿದರೆ; ನಿಮ್ಮ ಖಾಸಗಿ ವಾಟ್ಸ್‌ಆ್ಯಪ್‌ ಗುಂಪಿನ ಮಾಹಿತಿಯೂ ಗೂಗಲ್‌ ಸಂಗ್ರಹದಲ್ಲಿ ಅಡಗಿದ್ದರೆ ಗುರುತಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.