ಹರ್ಕ್ಯುಲಸ್ ಪಿಲ್ಲರ್‌ಗಳನ್ನು ಹಿಡಿದಿರುವ ವಿಸ್ಪಿ ಖರಾಡಿ
ಚಿತ್ರ: X / @GWR
ಹರ್ಕ್ಯುಲಸ್ ಪಿಲ್ಲರ್‌ಗಳನ್ನು ದೀರ್ಘ ಸಮಯದ ವರೆಗೆ ಬೀಳದಂತೆ ಹಿಡಿದು ನಿಲ್ಲಿಸುವ ಮೂಲಕ ಭಾರತದ ಕ್ರೀಡಾಪಟು ವಿಸ್ಪಿ ಖರಾಡಿ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಯನ್ನು 'ಗಿನ್ನೆಸ್' ದಾಖಲಿಸಿದ್ದು, ತನ್ನ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿಸಿದೆ.
ಖರಾಡಿ ಅವರ ಸಾಧನೆಯ ವಿಡಿಯೊವನ್ನು ಗಿನ್ನೆಸ್ ತನ್ನ ಅಧಿಕೃತ 'ಎಕ್ಸ್' ಪುಟದಲ್ಲಿ ಹಂಚಿಕೊಂಡಿದ್ದು, ಈವರೆಗೆ 1.6 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಉದ್ಯಮಿ ಎಲಾನ್ ಮಸ್ಕ್ ಸಹ ಶೇರ್ ಮಾಡಿಕೊಂಡಿದ್ದಾರೆ.
ಗ್ರೀಕ್ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿಸಲಾದ, ಹರ್ಕ್ಯುಲಸ್ ಪಿಲ್ಲರ್‌ಗಳು (ಕಂಬಗಳು) ಎಂದೇ ಕರೆಯಲಾಗುವ ಎರಡು ಕಂಬಗಳನ್ನು, ಅವುಗಳಿಗೆ ಸಿಕ್ಕಿಸಿದ್ದ ರೋಪ್ ಮೂಲಕ 2 ನಿಮಿಷ 10.75 ಸೆಕೆಂಡ್‌ಗಳ ವರೆಗೆ ಖರಾಡಿ ಅವರು ಹಿಡಿದಿರುವುದು ವಿಡಿಯೊದಲ್ಲಿದೆ.
'ಸ್ಟೀಲ್ ಮ್ಯಾನ್ ಆಫ್ ಇಂಡಿಯಾ' ಖ್ಯಾತಿಯ ಖರಾಡಿ ತಮ್ಮ ಹೆಸರಲ್ಲಿ ಒಟ್ಟು 15 ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಹಲವು ಬ್ಲಾಕ್ ಬೆಲ್ಟ್‌ಗಳನ್ನು ಹೊಂದಿರುವ ಅವರು, ಮಾರ್ಷಲ್ ಆರ್ಟ್ಸ್ 'ಕ್ರಾವ್ ಮಗಾ' ಪರಿಣತ. ಐಐಎಂ–ಬಿ ಇಂದ ಎಂಬಿಎ ಪದವಿ ಪಡೆದಿದ್ದು, ಅಮೆರಿಕದ ಅಂತರರಾಷ್ಟ್ರೀಯ ಕ್ರೀಡಾ ವಿಜ್ಞಾನ ಅಕಾಡೆಮಿಯ ಪ್ರಮಾಣಪತ್ರ ಹೊಂದಿರುವ ಪೌಷ್ಠಿಕಾಂಶ ತಜ್ಞರೂ ಹೌದು.
ಸೆಲೆಬ್ರಿಟಿಗಳಿಗೆ ಪೌಷ್ಠಿಕಾಂಶ–ಫಿಟ್‌ನೆಸ್ ತರಬೇತುದಾರರೂ ಆಗಿರುವ ಖರಾಡಿ, ಸ್ಟಂಟ್ ಕೊರಿಯಾಗ್ರಾಫರ್, ನಟ, ಮಾಡೆಲ್ ಕೂಡ.
ಎಲಾನ್ ಮಸ್ಕ್ ಅವರು ತಮ್ಮ ವಿಡಿಯೊ ಹಂಚಿಕೊಂಡಿದ್ದಾರೆ ಎಂಬುದನ್ನು ತಿಳಿದು 'ಅಚ್ಚರಿವಾಯಿತು ಹಾಗೂ ತುಂಬಾ ಖುಷಿಯಾಯಿತು' ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಎಸ್‌ಎಫ್ ಹಾಗೂ ಇತರ ಭದ್ರತಾ ಪಡೆಗಳಿಗೆ 'ಕ್ರಾವ್ ಮಗಾ' ಸೇರಿದಂತೆ ಇತರ ಸಮರ ಕಲೆಗಳ ತರಬೇತಿ ನೀಡಿದ್ದಾರೆ. ಮಹಿಳೆಯರಿಗಾಗಿ ದೇಶದಾದ್ಯಂತ ಸ್ವಯಂರಕ್ಷಣಾ ತರಬೇತಿಯನ್ನೂ ನೀಡುತ್ತಿದ್ದಾರೆ.
ಸೂರತ್‌ನಲ್ಲಿರುವ ಕ್ರೀಡಾ ಮತ್ತು ಫಿಟ್‌ನೆಸ್ ಕೇಂದ್ರ 'ಅಥ್ಲೆಟಿಕಾ ಫಿಟ್‌ನೆಸ್'ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಅವರು, 'ದೇವರ ದಯೆ ನನ್ನ ಮೇಲಿದೆ. ನಾನು ಸಾಧಿಸಿಬೇಕಿರುವ ಸಾಕಷ್ಟು ಗುರಿಗಳು ವಿಶ್ವದಲ್ಲಿವೆ ಎಂದು ನಂಬಿದ್ದೇನೆ. ಸಕಾರಾತ್ಮಕ ಕೆಲಸಗಳನ್ನು ಮುಂದುವರಿಸುತ್ತೇನೆ. ಮತ್ತಷ್ಟು ಮೈಲುಗಲ್ಲುಗಳನ್ನು ಮುಟ್ಟುವ ನಿಟ್ಟಿನಲ್ಲಿ ಹೆಚ್ಚೆ ಇಡುತ್ತೇನೆ' ಎಂದು 2023ರಲ್ಲಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.