ADVERTISEMENT

ಜಗತ್ತಿನ ಟಿಕ್‌ ಟಾಕ್‌ ಶೂರ ಖಾಬಿ ಲಾಮೆ 1 ಫೋಸ್ಟ್‌ಗೆ ಗಳಿಸುವ ಹಣ 6 ಕೋಟಿ ರುಪಾಯಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2022, 13:18 IST
Last Updated 18 ಸೆಪ್ಟೆಂಬರ್ 2022, 13:18 IST
 ಖಾಬಿ ಲಾಮೆ
ಖಾಬಿ ಲಾಮೆ   

ಬೆಂಗಳೂರು: ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಹಾಗೂ ವಿಶ್ವದ ಅನೇಕ ದೇಶಗಳಲ್ಲಿ ಭಾರಿ ಜನಪ್ರಿಯವಾಗಿರುವ ಚೀನಾ ಮೂಲದ ಟಿಕ್‌ಟಾಕ್‌ ಆ್ಯಪ್‌ ಹೇಗೆ ಹಣ ಗಳಿಸುವ ಒಂದು ದೊಡ್ಡ ಮೂಲವಾಗಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಅದರಲ್ಲೂ ಮಿಲಿಯನ್‌ಗಟ್ಟಲೇ ಫಾಲೋವರ್‌ಗಳನ್ನು ಹೊಂದಿರುವ ಟಿಕ್‌ಟಾಕ್ ಸ್ಟಾರ್‌ಗಳಿಗೆ ಟಿಕ್‌ಟಾಕ್ ಒಂದು ಜೇಬು ತುಂಬುವ ಯಂತ್ರವಾಗಿದೆ.

ಇನ್ನು ಟಿಕ್‌ಟಾಕ್‌ನಲ್ಲಿ ನಂಬರ್ 1 ಕಂಟೆಂಟ್ ಕ್ರಿಯೇಟರ್ (ಇನ್‌ಪ್ಲುಯೆನ್ಸರ್)ಹಾಗೂ ಟಿಕ್‌ಟಾಕ್‌ನಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ 21 ವರ್ಷದ ಖಾಬಿಲಾಮೆ ಅವರು ಟಿಕ್‌ಟಾಕ್‌ನಲ್ಲಿನ ತಮ್ಮ ಒಂದು ಪೋಸ್ಟ್‌ಗೆ ಎಷ್ಟು ಹಣ ಪಡೆಯುತ್ತಾರೆ? ಎಂಬ ವಿಚಾರ ಬಹಿರಂಗಗೊಂಡಿದೆ.

ADVERTISEMENT

ಟಿಕ್‌ಟಾಕ್‌ನಲ್ಲಿ ಒಟ್ಟು 149 ಮಿಲಿಯನ್ (14.8 ಕೋಟಿ) ಫಾಲೋವರ್‌ಗಳನ್ನು ಹೊಂದಿರುವ ಆಫ್ರಿಕಾ ಖಂಡದ ಸೆನೆಗಲ್ ಮೂಲದ ಖಾಬಿ ಲಾಮೆ ಅವರು ಟಿಕ್‌ಟಾಕ್‌ನಲ್ಲಿ ಒಂದು ಫೋಸ್ಟ್‌ಗೆ ಬರೋಬ್ಬರಿ ₹6 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ಅವರ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ.

ಅವರು ಇತ್ತೀಚೆಗೆ ಫ್ಯಾಶನ್ ಶೋ ಒಂದರ ರಾಂಪ್ ವಾಕ್‌ನ ವಿಡಿಯೊವನ್ನು ತನ್ನ ಟಿಕ್‌ಟಾಕ್‌ನಲ್ಲಿ ಫೋಸ್ಟ್‌ ಮಾಡಲು ₹3.5 ಕೋಟಿ ಪಡೆದಿದ್ದರು. ಆ ನಂತರ ಹಾಲಿವುಡ್‌ನ ಪ್ರಮುಖ ಪ್ರೊಡಕ್ಷನ್ ಹೌಸ್‌ ಒಂದರಿಂದ ವಿಡಿಯೊ ಪೋಸ್ಟ್‌ ಮಾಡಲು ₹6 ಕೋಟಿ ಪಡೆದಿದ್ದಾರೆ ಎಂದು ದಿ ಮನಿ ಕಂಟ್ರೋಲ್ ಡಾ.ಕಾಮ್ ವರದಿ ಮಾಡಿದೆ.

ತನ್ನ ಕಾಮಿಡಿ ವಿಡಿಯೊಗಳಿಂದ ಹಾಗೂ ಮುಖದ ವಿಚಿತ್ರ ಹಾವಭಾವಗಳಿಂದ ಖಾಬಿ ಲಾಮೆ ಅವರು ಟಿಕ್‌ಟಾಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯಗೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಖಾಬಿ ಅವರಿಗೆ 8 ಕೋಟಿ ಫಾಲೋವರ್‌ಗಳು ಇದ್ದಾರೆ.

ಸೆನೆಗಲ್‌ನಿಂದ 2001 ರಲ್ಲಿ ಇಟಲಿಗೆ ಹೋಗಿ ಅಲ್ಲೇ ನೆಲೆ ನಿಂತಿರುವ ಖಾಬಿ ಲಾಮೆ ಅವರಿಗೆ ಇಂಗ್ಲಿಷ್ ಭಾಷೆ ಸರಿಯಾಗಿ ಬರುವುದಿಲ್ಲವಂತೆ. ಆರಂಭದಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲಾಮೆ ಕೊರೊನಾ ನಂತರ ಕೆಲಸ ಕಳೆದುಕೊಂಡಿದ್ದರು. 2020 ರಲ್ಲಿ ಅವರು ಟಿಕ್‌ಟಾಕ್ ಖಾತೆ ತೆರೆದಿದ್ದರು.

ಸದ್ಯ ಇಂಗ್ಲಿಷ್ ಭಾಷೆ ಕಲಿಯುತ್ತಿರುವ ಖಾಬಿ ಲಾಮೆ ಅವರು ಹಾಲಿವುಡ್‌ನ ಖ್ಯಾತ ನಟ ವಿಲ್ ಸ್ಮಿತ್ ಜೊತೆ ನಟಿಸುವ ಕನಸು ಹೊಂದಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ ನುರಿತ ನಂತರ ಅಮೆರಿಕದ ಟೆಲಿವಿಷನ್ ಶೋ ಹಾಗೂ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ಲಾಮೆ ಮ್ಯಾನೇಜರ್ ತಿಳಿಸಿದ್ದಾರೆ.

ಲಾಮೆ ಅವರಿಗೆ ತಮ್ಮ ಅಕೌಂಟ್‌ನಲ್ಲಿ ಎಷ್ಟು ಹಣವಿದೆ ಎಂಬುದು ಕೂಡ ತಿಳಿದಿಲ್ಲ. ಅವರು ಬಡತನದಿಂದ ಬಂದಿದ್ದಾರೆ. ಆದರೆ, ಅವರಿಗೆ ಹಣ ಮುಖ್ಯ ಅಲ್ಲ, ಜನರನ್ನು ನಗಿಸುವುದು ಮುಖ್ಯ, ಜನರನ್ನು, ನನ್ನ ಕುಟುಂಬವನ್ನು ಪ್ರೀತಿಸುವುದು ನನ್ನ ಕೆಲಸ ಎಂದು ಲಾಮೆ ಹೇಳುತ್ತಾರೆ ಎಂದು ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.