ADVERTISEMENT

ಟ್ವಿಟರ್‌ನಲ್ಲೂ ಸ್ಟೇಟಸ್‌! ಹೊಸ ಆಯ್ಕೆ ಫ್ಲೀಟ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜೂನ್ 2020, 7:36 IST
Last Updated 11 ಜೂನ್ 2020, 7:36 IST
ಟ್ವಿಟರ್‌ ಫ್ಲೀಟ್ಸ್‌ ಪೋಸ್ಟ್‌ ಮಾಡುವುದು
ಟ್ವಿಟರ್‌ ಫ್ಲೀಟ್ಸ್‌ ಪೋಸ್ಟ್‌ ಮಾಡುವುದು   
""

ಬೆಂಗಳೂರು: ವಾಟ್ಸ್‌ಆ್ಯಪ್‌ ಸಂದೇಶಗಳ ಜೊತೆಗೆ ವಾಟ್ಸ್ಆ್ಯಪ್‌ ಸ್ಟೇಟಸ್‌ ಬಳಕೆ ಹೆಚ್ಚು ಜನಪ್ರಿಯತೆ ಪಡೆದಿದೆ. ಇದೀಗ ಟ್ವಿಟರ್‌ ಸಹ ಅಂಥದ್ದೇ ಒಂದು ಆಯ್ಕೆಯನ್ನು ಅಭಿವೃದ್ಧಿ ಪಡಿಸಿದೆ. 'ಫ್ಲೀಟ್ಸ್' (Fleets) ಹೆಸರಿನ ಆಯ್ಕೆಯನ್ನು ಪರಿಚಯಿಸಿದ್ದು, ಇಲ್ಲೂ ಸಹ ನಾವು ಪ್ರಕಟಿಸಿಕೊಂಡ ಬರಹಗಳು 24 ಗಂಟೆಗಳಲ್ಲಿ ಕಣ್ಮರೆಯಾಗುತ್ತವೆ.

ಬ್ರೆಜಿಲ್‌, ಇಟಲಿ ನಂತರ ಭಾರತದಲ್ಲಿ ಈ ಹೊಸ ಸೌಲಭ್ಯವನ್ನು ಟ್ವಿಟರ್‌ ಪರಿಚಯಿಸಿದೆ. ಟ್ವೀಟ್‌ ಮಾಡಿದ ಸಾಲು ಶಾಶ್ವತವಾಗಿ ಉಳಿದು ಹೋಗುತ್ತದೆ, ಅದಕ್ಕೆ ಕಮೆಂಟ್‌ಗಳು ಬರುತ್ತವೆ, ರಿಟ್ವೀಟ್‌ ಆಗುತ್ತವೆ ಎಂಬ ಕಾರಣಕ್ಕೆ ಕೆಲವು ಟ್ವೀಟಿಗರು ತಮ್ಮ ಎಲ್ಲ ಅನಿಸಿಕೆಗಳನ್ನೂ ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಮುಕ್ತ ಅಭಿವ್ಯಕ್ತಿಗೆ ಫ್ಲೀಟ್ಸ್‌ ಸಹಕಾರಿಯಾಗಲಿದೆ ಎಂದು ಟ್ವಿಟರ್‌ ಹೇಳಿದೆ.

ಪ್ರಕಟಿಸಿಕೊಳ್ಳುವ ಫ್ಲೀಟ್ಸ್‌ಗೆ ಕಮೆಂಟ್‌, ಲೈಕ್‌ಗಳು, ರಿಟ್ವೀಟ್‌ ಮಾಡುವ ಅವಕಾಶ ಇರುವುದಿಲ್ಲ. ಪೋಸ್ಟ್‌ ಮಾಡಿದ 24 ಗಂಟೆಗಳು ಮಾತ್ರ ಫ್ಲೀಟ್ಸ್‌ ಕಾಣಸಿಗುತ್ತದೆ. ಪದಗಳ ಜೊತೆಗೆ ಫೋಟೊ ಸಹ ಸೇರಿಸಿ ಪ್ರಕಟಿಸಬಹುದು. ಟ್ವಿಟರ್‌ ಆ್ಯಪ್‌ ಅಪ್‌ಡೇಟ್‌ನೊಂದಿಗೆ ಆ್ಯಂಡ್ರಾಯ್ಡ್ ಮತ್ತು ಐಒಎಸ್‌ ಆಧಾರಿತ ಮೊಬೈಲ್‌ಗಳಲ್ಲಿ ಫ್ಲೀಟ್ಸ್‌ ಆಯ್ಕೆ ಸಿಗಲಿದೆ.

ADVERTISEMENT

ಅನುಸರಿಸುತ್ತಿರುವ ಟ್ವಿಟರ್‌ ಖಾತೆಗಳಿಂದ ಬರುವ ಫ್ಲೀಟ್ಸ್‌ ಬಳಕೆದಾರರ ಟೈಮ್‌ಲೈನ್‌ನಲ್ಲಿ ಸದಾ ಮೇಲಿನ ಭಾಗದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಪ್ರಕಟಿಸಿರುವ ಫ್ಲೀಟ್ಸ್ ಯಾರೆಲ್ಲ ನೋಡಿದ್ದಾರೆ ಎಂದು ತಿಳಿಯಲು ಪೋಸ್ಟ್‌ನ ಕೆಳಭಾಗದಲ್ಲಿ ಗಮನಿಸಬೇಕು. ಪ್ರೊಫೈಲ್‌ ಪುಟದಲ್ಲಿ ನೋಡುವ ಮೂಲಕ ಫ್ಲೀಟ್‌ ಪ್ರಕಟಿಸಿರುವುದನ್ನು ಗೊತ್ತು ಪಡಿಸಿಕೊಳ್ಳಬಹುದು, ಹಾಗೆಯೇ ಮತ್ತೊಬ್ಬರ ಅವತಾರ್‌ ಮೇಲೆ ಒತ್ತುವ ಮೂಲಕ ಈವರೆಗೂ ಅವರು ಏನೆಲ್ಲ ಹಂಚಿಕೊಂಡಿದ್ದಾರೆ ಎಂಬುದನ್ನು ತಿಳಿಯಬಹುದು.

ಫ್ಲೀಟ್ಸ್‌ ಸೃಷ್ಟಿಸುವುದು:

* ಎಡಗಡೆ ಮೇಲ್ಭಾಗದಲ್ಲಿ you ಎಂದು ನಿಮ್ಮ ಪ್ರೊಫೈಲ್‌ ಚಿತ್ರದೊಂದಿಗೆ ಕಾಣುವ ಆಯ್ಕೆಯನ್ನು (ಅವತಾರ್‌) ಒತ್ತುವ ಮೂಲಕ ಫ್ಲೀಟ್ಸ್‌ ಆರಂಭಿಸಬಹುದು.
* ತೆರೆದುಕೊಳ್ಳುವ ಪರದೆಯಲ್ಲಿ ಟೈಪ್‌ ಮಾಡಿ, ಫೋಟೊ ಅಥವಾ ವಿಡಿಯೊ ಲಗತ್ತಿಸಬಹುದು.
* ಫ್ಲೀಟ್‌ ಒತ್ತಿದರೆ ಪೋಸ್ಟ್‌ ಆಗುತ್ತದೆ.
* ಸ್ವೈಪ್‌ ಅಪ್‌ ಮಾಡುವ ಮೂಲಕ ಮತ್ತೊಂದು ಹೊಸ ಪೋಸ್ಟ್‌ ಪ್ರಕಟಿಸಿಕೊಳ್ಳಬಹುದು.
* ‘...’ ಬಳಸಿ ಸಹ ಫ್ಲೀಟ್ಸ್‌ ವರದಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.