ADVERTISEMENT

Twitter logo | ಟ್ವಿಟರ್ ಲಾಂಛನ: ಹಕ್ಕಿಯ ಬದಲು ನಾಯಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಏಪ್ರಿಲ್ 2023, 12:23 IST
Last Updated 4 ಏಪ್ರಿಲ್ 2023, 12:23 IST
   

ಜನಪ್ರಿಯ ಸಾಮಾಜಿಕ ಕಿರು ಮಾಧ್ಯಮ ಟ್ವಿಟರ್ ತನ್ನ ಲಾಂಛನವನ್ನು ಬದಲಿಸಿಕೊಂಡಿದೆ. ಮಂಗಳವಾರ ಟ್ವಿಟರ್ ಖಾತೆ ತೆರೆದಾಗ ಬಳಕೆದಾರರು ನೀಲಿ ಹಕ್ಕಿಯ ಲಾಂಛನದ ಜಾಗದಲ್ಲಿ ನಾಯಿಯ ಮುಖ ಇರುವುದನ್ನು ನೋಡಿ ಗೊಂದಲದಲ್ಲಿ ಸಿಲುಕಿದ್ದರು.

ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್ ಮೂಲಕ ಹರಿದಾಡುತ್ತಿದ್ದ ಶಿಬಾ ಇನು ಎಂಬ ನಾಯಿಯ ಮುಖವೇ ಈಗ ಟ್ವಿಟರ್ ಲೋಗೊ ಆಗಿಬಿಟ್ಟಿದೆ.

ಟ್ವಿಟರ್ ತಾಣವನ್ನು ಇತ್ತೀಚೆಗೆ ಖರೀದಿಸಿದ್ದ ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮದೇ ಆದ ಶೈಲಿಯಲ್ಲಿ ಈ ಬದಲಾವಣೆಯನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ಲಾಂಛನವು ಜನಪ್ರಿಯ ಕ್ರಿಪ್ಟೋಕರೆನ್ಸಿ ಡೋಜ್‌ಕಾಯಿನ್ (Dogecoin) ಎಂಬ ಡಿಜಿಟಲ್ ಕರೆನ್ಸಿಯದು.

ADVERTISEMENT

ಈ ಹಿಂದೆ ಡೋಜ್‌ಕಾಯಿನ್ ಬೆಂಬಲಿಸಲು ಪಿರಮಿಡ್ ಸ್ಕೀಮ್ ಒಂದನ್ನು ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಮಸ್ಕ್ ವಿರುದ್ಧ ಅಮೆರಿಕದಲ್ಲಿ 258 ಶತಕೋಟಿ ಡಾಲರ್ ಮೊತ್ತದ ಮೊಕದ್ದಮೆ ದಾಖಲಾಗಿತ್ತು. ಅಮೆರಿಕದಲ್ಲಿ ಈಗ ಟ್ವಿಟರ್ ಲೋಗೊವನ್ನು ಡೋಜ್ (doge) ಗೆ ಬದಲಾಯಿಸಿದ ತಕ್ಷಣ ಎರಡು ದಿನಗಳಲ್ಲಿ ಡೋಜ್‌ಕಾಯಿನ್‌ನ ಮಾರುಕಟ್ಟೆ ಮೌಲ್ಯವು ದಿಢೀರ್ ಏರಿಕೆ ಕಂಡಿದ್ದು, ಶೇ.30ರಷ್ಟು ಹೆಚ್ಚಾಗಿದೆ.

ಗಮನಿಸಬೇಕಾದ ವಿಚಾರವೆಂದರೆ, ಸದ್ಯ ವೆಬ್ ಬ್ರೌಸರ್‌ನಲ್ಲಿ ಮಾತ್ರ ಟ್ವಿಟರ್ ಲೋಗೊ ಬದಲಾಗಿದ್ದು, ಆ್ಯಪ್‌ನಲ್ಲಿ ಹಿಂದಿನಂತೆಯೇ ನೀಲಿ ಹಕ್ಕಿಯ ಲಾಂಛನ ಇದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ನೀಲಿ ಟಿಕ್ ಮಾರ್ಕ್ ಇರುವ ದೃಢೀಕರಣಕ್ಕಾಗಿ ಬಳಕೆದಾರರು ಹಣ ಪಾವತಿಸಬೇಕಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.