ADVERTISEMENT

ಟ್ವೀಟ್‌ನಿಂದಲೇ ನೇರ ಸಂದೇಶ ಕಳುಹಿಸುವ ಆಯ್ಕೆಯ ಪರೀಕ್ಷೆ ನಡೆಸುತ್ತಿದೆ ಟ್ವಿಟರ್

ಐಎಎನ್ಎಸ್
Published 9 ಫೆಬ್ರುವರಿ 2022, 11:01 IST
Last Updated 9 ಫೆಬ್ರುವರಿ 2022, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಟ್ವಿಟರ್‌ನಲ್ಲಿ‌ ಕಾಣುವ ಯಾವುದೇ ಟ್ವೀಟ್‌ಗೆ ನೀಡುವ ಪ್ರತಿಕ್ರಿಯೆ, ಟ್ವೀಟಿಸಿದ ವ್ಯಕ್ತಿಯ ಜೊತೆಗೆ ಸಾರ್ವಜನಿಕವಾಗಿ ಎಲ್ಲರಿಗೂ ಕಾಣುತ್ತೆ. ಅದೇ ಟ್ವೀಟ್‌ಗೆ ಓದುಗನಿಂದ ನೇರವಾಗಿ ಟ್ವೀಟಿಗನಿಗೇ ಸಂದೇಶ ತಲುಪುವಂತಾದರೆ?

- ಹೀಗೆ ಡೈರೆಕ್ಟ್ ಮೆಸೇಜ್ (ಡಿಎಂ) ಮಾಡುವ ಹೊಸ ಆಯ್ಕೆಯ ಪರೀಕ್ಷೆಯನ್ನು ಟ್ವಿಟರ್ ನಡೆಸುತ್ತಿದೆ. ಇದಕ್ಕೆ ಟ್ವೀಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೊಸ ಫೀಚರ್ ಅಳವಡಿಕೆಯಿಂದಾಗಿ ನಿಮ್ಮ ಟೈಮ್ ಲೈನ್‌ನಿಂದ ನೇರವಾಗಿ ಮಾತುಕತೆ ಆರಂಭಿಸುವುದು ಸುಲಭವಾಗಲಿದೆ ಎಂದು ಮೈಕ್ರೊ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಟ್ವಿಟರ್ ಹೇಳಿದೆ.

ADVERTISEMENT

ಆದರೆ, ಈ ಹೊಸ ಫೀಚರ್‌ನಿಂದಾಗಿ ಆನ್‌ಲೈನ್‌ನಲ್ಲಿ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಲಿದೆ ಎಂದು ಹಲವು ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ಆ್ಯಪಲ್‌ನ ಐಒಎಸ್ ಬಳಸುತ್ತಿರುವ ಟ್ವಿಟರ್ ಬಳಕೆದಾರರಲ್ಲಿ ಕೆಲವರಿಗೆ ಟ್ವೀಟ್‌ಗಳಲ್ಲಿ ಡೈರೆಕ್ಟ್ ಮೆಸೇಜ್ ಆಯ್ಕೆ ಕಾಣಿಸಿಕೊಳ್ಳುತ್ತಿದೆ.

ಟ್ವಿಟರ್‌ನ ಈ ಪರೀಕ್ಷೆಯು ಸಾರ್ವಜನಿಕ ಸೇವೆಗಳಲ್ಲಿ ತೊಡಗಿರುವವರು ಹಾಗೂ ಸಾರ್ವಜನಿಕ ಸುರಕ್ಷತೆ ತಜ್ಞರ ಗಮನ ಸೆಳೆದಿದೆ.

ಟ್ವಿಟರ್ ಹೊಸ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ನ ಎಲಿಜಾ ಆರ್ಲಿಂನ್ಸ್, 'ನೇರ ಸಂದೇಶ ಕಳುಹಿಸಲು ಸುಲಭ ಅವಕಾಶ ಒದಗಿಸುವ ಮೂಲಕ ಬಳಕೆದಾರರು ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿಸುತ್ತದೆ. ಈ ಆಯ್ಕೆಯನ್ನು ತರಬೇಡಿ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಪೇಕ್ಷಿಸದ, ಅನಗತ್ಯವಾದ ಸಂದೇಶಗಳು ನೇರವಾಗಿ ಜನರಿಂದ ತಲುಪುವುದು 'ಮಾತುಕತೆಯ ಆರಂಭ' ಮಾತ್ರವೇ ಆಗಿರುವುದಿಲ್ಲ. ಈ ಆಯ್ಕೆಯನ್ನು ನಮ್ಮ ಟ್ವೀಟ್‌ಗಳಲ್ಲಿ ಸಿಗದಂತೆ ಮಾಡುವ ಸುರಕ್ಷತೆ ಫೀಚರ್ ಆದರೂ ತರಬೇಕು' ಎಂದಿದ್ದಾರೆ.

ಈ ಹೊಸ ಆಯ್ಕೆಯ ಪರೀಕ್ಷೆಯಿಂದಾಗಿ ಈಗಾಗಲೇ ಬಳಕೆಯಲ್ಲಿರುವ ಡೈರೆಕ್ಟ್ ಮೆಸೇಜ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಾವುದೇ ಟ್ವಟರ್ ಬಳಕೆದಾರ ಅವರ ಖಾತೆಯ ಸೆಟ್ಟಿಂಗ್‌ನಲ್ಲಿ ಡೈರೆಕ್ಟ್ ಮೆಸೇಜ್‌ಗಳನ್ನು ತಡೆಯಲು ಅವಕಾಶವಿದೆ ಎಂದು ಟ್ವಿಟರ್ ವಕ್ತಾರರು ಹೇಳಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.