ADVERTISEMENT

ಟ್ರೆಂಡ್ ಆಯ್ತು ನಮಸ್ತೆ ಟ್ರಂಪ್‌: ವೀಸಾ ನಿಷೇಧಕ್ಕೆ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2020, 7:07 IST
Last Updated 23 ಜೂನ್ 2020, 7:07 IST
ಫೆಬ್ರುವರಿಯಲ್ಲಿ ನಡೆದ ನಮಸ್ತೆ ಟ್ರಂಪ್‌ ಕಾರ್ಯಕ್ರಮದ ಸಿದ್ಧತೆ ಚಿತ್ರ– ಪಿಟಿಐ ಸಂಗ್ರಹ ಚಿತ್ರ
ಫೆಬ್ರುವರಿಯಲ್ಲಿ ನಡೆದ ನಮಸ್ತೆ ಟ್ರಂಪ್‌ ಕಾರ್ಯಕ್ರಮದ ಸಿದ್ಧತೆ ಚಿತ್ರ– ಪಿಟಿಐ ಸಂಗ್ರಹ ಚಿತ್ರ   

ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವೃತ್ತಿ ಆಧಾರಿತ ಹೊಸ ವೀಸಾಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ ನಮಸ್ತೆ ಟ್ರಂಪ್‌ ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿದ್ದು, ಸಾವಿರಾರು ಜನರು ಟ್ರಂಪ್‌ ಆದೇಶದ ಕುರಿತು ಟ್ವೀಟಿಸುತ್ತಿದ್ದಾರೆ.

ವೃತ್ತಿ ಆಧಾರಿತ ವೀಸಾ ನಿರ್ಬಂಧಿಸುವ ಮೂಲಕ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಅಮೆರಿಕನ್ನರಿಗೆ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಅಮೆರಿಕದ ಐಟಿ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನವರು ಭಾರತ ಸೇರಿದಂತೆ ವಿದೇಶಿ ನೆಲೆಯವರೇ ಆಗಿದ್ದಾರೆ. ವರ್ಷಾಂತ್ಯದ ವರೆಗೂ ವೀಸಾ ನಿರ್ಬಂಧಿಸಿರುವುದು ಹಲವು ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ ಹಾಗೂ ಅಮೆರಿಕದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕನಸು ಹೊತ್ತಿದ್ದವರಿಗೆ ನಿರಾಶೆಯಾಗಿದೆ.

ಟ್ವಿಟರ್‌ನಲ್ಲಿ ಹಲವರು ಟ್ರಂಪ್‌ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು 'ಸಾಕಷ್ಟು ಖರ್ಚು ಮಾಡಿ ನಮಸ್ತೆ ಟ್ರಂಪ್‌ ಮಾಡಿ ಕಾರ್ಯಕ್ರಮ ಮಾಡಿದಿರಿ, ಟ್ರಂಪ್‌ ಡಿಸೆಂಬರ್‌ ವರೆಗೂ ಎಚ್‌1ಬಿ ವೀಸಾ ನಿಷೇಧಿಸಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಗೂಗಲ್‌ ಸಿಇಒ ಸುಂದರ್‌ ಪಿಚೈ ಸಹ ಟ್ರಂಪ್‌ ಆದೇಶಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಬೆಂಬಲಿಸಿ ಟ್ವೀಟಿಗರು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್‌ಗಿಂತಲೂ ಸುಂದರ್ ಪಿಚೈ ಸೂಕ್ತ ಅಭ್ಯರ್ಥಿ ಎಂದಿದ್ದಾರೆ.

'ನಮಸ್ತೆ ಟ್ರಂಪ್‌ ಕಾರ್ಯಕ್ರಮಕ್ಕೆ ಕೋಟಿಗಟ್ಟಲೆ ಹಣ ವ್ಯರ್ಥ ಮಾಡುವುದಕ್ಕಿಂತ ಜಾಗತಿಕ ಸಾಂಕ್ರಾಮಿಕವಾದ ಕೊರೊನಾ ನಿಯಂತ್ರಣಕ್ಕೆ ಅದನ್ನು ಬಳಿಸಿಕೊಳ್ಳಬಹುದಿತ್ತು', 'ಹೌಡಿ ಮೋದಿ–ನಮಸ್ತೆ ಟ್ರಂಪ್‌ ವ್ಯರ್ಥ ಕಾರ್ಯಕ್ರಮಗಳು. ಇದರ ಫಲವಾಗಿ 5.25 ಲಕ್ಷ ಭಾರತೀಯರು ಕೆಲಸ ಕಳೆದುಕೊಳ್ಳಲಿದ್ದಾರೆ', 'ನಮಸ್ತೆ ಟ್ರಂಪ್‌ ಯಶಸ್ಸಿನ ಬಳಿಕ, ಭಾರತದ ಗೆಳೆಯ ಡೊನಾಲ್ಡ್‌ ಟ್ರಂಪ್‌; ಒಂದು ವರ್ಷ ಎಚ್‌1ಬಿ ವೀಸಾ ನಿಷೇಧಿಸುವ ಮೂಲಕ ಧನ್ಯವಾದ ತಿಳಿಸಿದ್ದಾರೆ', 'ಭಾರತದ ಐಟಿ ವಲಯಕ್ಕೆ ಹೊಡೆತ ಬಿದ್ದಂತೆ,..', ಹೀಗೆ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.