ADVERTISEMENT

TikTok: ಚೀನಾದ ಟಿಕ್‌ಟಾಕ್ ಮಾರಾಟ ವಿಚಾರವನ್ನು ಪರಿಶೀಲಿಸಲಿದೆ ಜೋ ಬೈಡನ್ ತಂಡ

ಏಜೆನ್ಸೀಸ್
Published 11 ಫೆಬ್ರುವರಿ 2021, 8:10 IST
Last Updated 11 ಫೆಬ್ರುವರಿ 2021, 8:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಟಿಕ್‌ಟಾಕ್ ಅನ್ನು ಅಮೆರಿಕದ ಹೂಡಿಕೆದಾರರಿಗೆ ಮಾರಾಟ ಮಾಡುವ ಪ್ರಸ್ತಾವನೆಯನ್ನು ತಡೆಹಿಡಿದಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನೇತೃತ್ವದ ಸಮಿತಿ ಪರಿಶೀಲಿಸಲಿದೆ. ಚೀನಾ ಮೂಲದ ಪ್ರಸಿದ್ಧ ವಿಡಿಯೋ ರಚಿಸುವ ಆ್ಯಪ್‌ನಿಂದ ಎದುರಾಗಲಿರುವ ಭದ್ರತಾ ಸಮಸ್ಯೆ ಕುರಿತು ಬೈಡೆನ್ ತಂಡ ಗಮನಿಸಲಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಚೀನಾ ಮೂಲದ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್ ಅನ್ನು ಮಾರಾಟ ಮಾಡುವ ಅಗತ್ಯತೆ, ಅಮೆರಿಕ ಮೂಲದ ಟೆಕ್ ಕಂಪನಿಗಳಾದ ಒರಾಕಲ್ ಮತ್ತು ವಾಲ್‌ಮಾರ್ಟ್ ಖರೀದಿಗೆ ಆಸಕ್ತಿ ಮೊದಲಾದ ಅಂಶಗಳನ್ನು ಬೈಡನ್ ಸಮಿತಿ ಪರಿಶೀಲಿಸಲಿದೆ ಎಂದು ಮೂಲಗಳನ್ನು ಹೆಸರಿಸದೆಯೇ ಜರ್ನಲ್ ತಿಳಿಸಿದೆ.

ಬೀಜಿಂಗ್ ಸರ್ಕಾರದೊಂದಿಗೆ ಟಿಕ್‌ಟಾಕ್ ಮತ್ತು ಚೀನಾ ಮೂಲದ ಕೆಲವೊಂದು ಆನ್‌ಲೈನ್ ಆ್ಯಪ್, ಸೇವೆಗಳು ಸಂಪರ್ಕ ಹೊಂದಿದ್ದು, ಅದರಿಂದ ಭದ್ರತಾ ಸಮಸ್ಯೆ ಎದುರಾಗಬಹುದು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದರು.

ADVERTISEMENT

ಪ್ರಸ್ತುತ ಹೊಸ ಸರ್ಕಾರ, ಟಿಕ್‌ಟಾಕ್ ಅಮೆರಿಕ ಬಳಕೆದಾರರ ದತ್ತಾಂಶ ಸಂಗ್ರಹಿಸುತ್ತಿದೆಯೇ ಮತ್ತು ಅವುಗಳಗೆ ಚೀನಾ ಸರ್ಕಾರದ ಹಸ್ತಕ್ಷೇಪ ಇರುವುದೇ ಎನ್ನುವ ಕುರಿತು ಪರಿಶೀಲಿಸಲಿದೆ. ಆದರೆ ಮಾರಾಟ ಮಾಡುವ ಕುರಿತಂತೆ ಒತ್ತಡ ಹೇರುವ ಸಾಧ್ಯತೆಯಿಲ್ಲ ಎಂದು ಜರ್ನಲ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.