ADVERTISEMENT

ಎ.ಐ ಕುರಿತು ಸಭೆ: ಒಂದೇ ವೇದಿಕೆಯಲ್ಲಿ ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್!

ರಾಯಿಟರ್ಸ್
Published 29 ಆಗಸ್ಟ್ 2023, 10:12 IST
Last Updated 29 ಆಗಸ್ಟ್ 2023, 10:12 IST
ಮಾರ್ಕ್ ಜುಕರ್‌ಬರ್ಗ್ ಹಾಗೂ ಎಲಾನ್ ಮಸ್ಕ್
ಮಾರ್ಕ್ ಜುಕರ್‌ಬರ್ಗ್ ಹಾಗೂ ಎಲಾನ್ ಮಸ್ಕ್   ರಾಯಿಟರ್ಸ್‌ ಚಿತ್ರಗಳು

ವಾಷಿಂಗ್ಟನ್‌: ಯುಎಸ್‌ ಸೆನೆಟ್‌ ಸದಸ್ಯ ಚಕ್‌ ಸ್ಕಮ್ಮರ್‌ ಅವರು ಕೃತಕ ಬುದ್ದಿಮತ್ತೆಗೆ (ಎ.ಐ/AI) ಸಂಬಂಧಿಸಿದಂತೆ ಆಯೋಜಿಸುತ್ತಿರುವ ಸಭೆಯಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್‌ ಹಾಗೂ ಮೆಟಾ ಕಂಪನಿ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಸಭೆಯು ಸೆಪ್ಟೆಂಬರ್‌ 13ರಂದು 2 ಅಥವಾ 3 ಗಂಟೆ ನಡೆಯಲಿದೆ. ಅಲ್ಫಾಬೆಟ್‌ (ಗೂಗಲ್) ಸಿಇಒ ಸುಂದರ್‌ ಪಿಚೈ, ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ ಹಾಗೂ ಓಪನ್‌ ಎಐ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ಅವರೂ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಕಂಪನಿಗಳ ಸಿಇಒಗಳನ್ನು ಒಂದೆಡೆ ಸೇರಿಸುವ ಕುರಿತು ಸ್ಕಮ್ಮರ್‌ ಅವರು ಜೂನ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಸುಳಿವು ನೀಡಿದ್ದರು. ಆ ಸಮಾವೇಶವು ಎ.ಐ ನೀತಿ ನಿಯಮಗಳನ್ನು ರೂಪಿಸಲು ಅಡಿಪಾಯ ಹಾಕಿಕೊಟ್ಟಿದೆ ಎಂದು ಅವರು ಹೇಳಿದ್ದರು.

ADVERTISEMENT

ಸೆನೆಟ್‌ ಡೆಮಾಕ್ರಾಟ್ಸ್‌ ವೆಬ್‌ಸೈಟ್‌ ಪ್ರಕಾರ, ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವವರು, ಅದಕ್ಕೆ ಸಂಬಂಧಿಸಿದ ಅಧಿಕಾರಿವರ್ಗ, ವಿಜ್ಞಾನಿಗಳು, ವಕೀಲರು, ಕಾನೂನು ಪರಿಣಿತರು, ಸಮುದಾಯ ನಾಯಕರು, ಕೆಲಸಗಾರರು,  ರಾಷ್ಟ್ರೀಯ ಸುರಕ್ಷತಾ ತಜ್ಞರು ಸೇರಿದಂತೆ ಎಲ್ಲರೂ ಒಂದೆಡೆ ಸೇರಿ ಮಾತುಕತೆ ನಡೆಸುವ ಅಗತ್ಯವಿದೆ ಎಂದು ಸ್ಕಮ್ಮರ್‌ ಅಭಿಪ್ರಾಯಪಟ್ಟಿದ್ದರು.

ಮೈಕ್ರೊಬ್ಲಾಗಿಂಗ್ ವೇದಿಕೆ ಟ್ವಿಟರ್‌ ಅನ್ನು ಕಳೆದ ವರ್ಷ ಖರೀದಿಸಿದ್ದ ಎಲಾನ್‌ ಮಸ್ಕ್‌, ಅದರ ಹೆಸರನ್ನು ಎಕ್ಸ್‌ ಎಂದು ಬದಲಿಸಿದ್ದಾರೆ. ಇತ್ತ 'ಎಕ್ಸ್‌'ಗೆ ಪರ್ಯಾಯ ಎಂಬಂತೆ, ಮೆಟಾ ಕಂಪನಿ 'ಥ್ರೆಡ್ಸ್‌' ಆ್ಯಪ್‌ ಆರಂಭಿಸಿದೆ. ಇದರ ಬೆನ್ನಲ್ಲೇ ಮಸ್ಕ್‌ ಹಾಗೂ ಜುಕರ್‌ಬರ್ಗ್‌ ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ವಾಕ್ಸಮರ ನಡೆಸಿದ್ದರು.

ಹೀಗಾಗಿ ಈ ಇಬ್ಬರು ನಾಯಕರು ಒಂದೆಡೆ ಸೇರಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.