ADVERTISEMENT

ವಾಟ್ಸ್‌ಆ್ಯಪ್‌ ಗ್ರೂಪ್‌: ‘ಸದಸ್ಯನ ಪೋಸ್ಟ್‌ಗೆ ಅಡ್ಮಿನ್‌ ಹೊಣೆಯಲ್ಲ‘

ಪಿಟಿಐ
Published 26 ಏಪ್ರಿಲ್ 2021, 15:26 IST
Last Updated 26 ಏಪ್ರಿಲ್ 2021, 15:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸದಸ್ಯ ಆಕ್ಷೇಪಾರ್ಹ ಅಂಶಗಳನ್ನು ಪೋಸ್ಟ್‌ ಮಾಡಿದ್ದಲ್ಲಿ, ಅದಕ್ಕೆ ಆಯಾ ಗುಂಪು ಸೃಷ್ಟಿಸಿದವರು (ಅಡ್ಮಿನ್) ಹೊಣೆಯಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, 33 ವರ್ಷದ ವ್ಯಕ್ತಿ ಮೇಲೆ ಹೂಡಿದ್ದ ಲೈಂಗಿಕ ದೌರ್ಜನ್ಯ ಆರೋಪದ ಅರ್ಜಿಯನ್ನು ವಜಾ ಮಾಡಿದೆ.

ಈ ಕುರಿತ ಆದೇಶ ಕಳೆದ ತಿಂಗಳೇ ಹೊರಬಿದ್ದಿದ್ದು, ಆದೇಶ ಪ್ರತಿ ಈಗ ಏ. 22ರಂದು ಲಭ್ಯವಾಗಿದೆ. ನ್ಯಾಯಮೂರ್ತಿ ಝ.ಎ.ಹಕ್‌ ಮತ್ತು ಎ.ಬಿ.ಬೋರ್ಕರ್‌ ಅವರಿದ್ದ ವಿಭಾಗೀಯ ಪೀಠವು ಈ ಅದೇಶ ನೀಡಿದೆ. ‘ಅಡ್ಮಿನ್‌ಗೆ ಹೊಸ ಸದಸ್ಯರನ್ನು ಸೇರಿಸುವ ಅಧಿಕಾರವಷ್ಟೇ ಇರುತ್ತದೆ. ಪೋಸ್ಟ್‌ಗಳನ್ನು ನಿಯಂತ್ರಿಸುವ ಅಧಿಕಾರವಲ್ಲ’ ಎಂದಿದೆ.

ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದರ ಅಡ್ಮಿನ್‌ ಆಗಿದ್ದ ಕಿಶೋರ್ ತರೋನೆ (33) ಅವರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತಮ್ಮ ವಿರುದ್ಧ ಗೊಂಡಾ ಜಿಲ್ಲೆಯಲ್ಲಿ ಮಹಿಳೆಗೆ ಅಗೌರವ ಸೇರಿದಂತೆ ವಿವಿಧ ಸೆಕ್ಷನ್‌ ಅನ್ವಯ ಹೂಡಿದ್ದ ಮೊಕದ್ದಮೆ ವಜಾ ಕೋರಿ ಅವರು ಅರ್ಜಿ ಸಲ್ಲಿಸಿದ್ದರು.

ADVERTISEMENT

ಗ್ರೂಪ್‌ ಸದಸ್ಯೆಯೊಬ್ಬರನ್ನು ಉಲ್ಲೇಖಿಸಿ ಸದಸ್ಯರೊಬ್ಬರು ಆಕ್ಷೇಪಾರ್ಹ ಪದ ಬಳಕೆ ವಿರುದ್ಧ ಕ್ರಮವಹಿಸಲು ಅಡ್ಮಿನ್‌ ವಿಫಲರಾಗಿದ್ದಾರೆ. ಹೀಗೆ ಆಕ್ಷೇಪಾರ್ಹ ಅಂಶ ದಾಖಲಿಸಿದ್ದ ಸದಸ್ಯನನ್ನು ಗ್ರೂಪ್‌ನಿಂದ ಕೈಬಿಡಲು ಅವರು ವಿಫಲರಾಗಿದ್ದರು. ಇದಕ್ಕಾಗಿ ಕ್ಷಮೆಯನ್ನು ಕೇಳಿರಲಿಲ್ಲ ಎಂದು ದೂರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.