ADVERTISEMENT

ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 8:57 IST
Last Updated 17 ನವೆಂಬರ್ 2021, 8:57 IST
ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಚಾಲನೆ
ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಚಾಲನೆ    

ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಚಾಲನೆ ಸಿಕ್ಕಿದೆ. 30 ರಾಷ್ಟ್ರಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.

‘ಉತ್ತಮ ಪ್ರಗತಿ, ಸಮೃದ್ಧಿ ಕೊಡುವಂತಹ ನಮ್ಮ ನಾಡಿನ ಹೆಮ್ಮೆಯ 24ನೆಯ ಬೆಂಗಳೂರು ಟೆಕ್ ಸಮಿಟ್‌ಗೆ ಚಾಲನೆ ಸಿಕ್ಕಿದೆ. ದೇಶದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನೇತೃತ್ವದಲ್ಲಿ ಉದ್ಘಾಟನೆ ಆಗಿದೆ. ಇಸ್ರೇಲ್ ಮತ್ತು ಆಸ್ಟ್ರೇಲಿಯಾ ಪ್ರಧಾನಿಗಳು ಈ ಶೃಂಗಕ್ಕೆ ಸೇರಿಕೊಂಡಿದ್ದಾರೆ. ನಗರದ ಸ್ಟಾರ್ಟರ್ಪ್, ತಂತ್ರಜ್ಞಾನ ನಿಪುಣರು ಎಲ್ಲರೂ ಈ ತಂತ್ರಜ್ಞಾನ ಶೃಂಗದಲ್ಲಿ ಭಾಗವಹಿಸಿ ವಿಶ್ವದ ಗಮನ ಸೆಳೆಯಲಿದ್ದಾರೆ’ಎಂದು ಅವರು ಹೇಳಿದರು.

‘ಇಡೀ ವಿಶ್ವದಲ್ಲಿ ಹೊಸ ಆವಿಷ್ಕಾರಗಳನ್ನು ಇಲ್ಲೇ ನೋಡುವಂತಾಗಿದೆ. ವ್ಯವಸಾಯ, ಶಿಕ್ಷಣ, ಪ್ರಕೃತಿ ವಿಕೋಪ, ವೈದ್ಯಕೀಯ, ಆಡಳಿತ ಎಲ್ಲ ಕ್ಷೇತ್ರಕ್ಕೂ ಈ ಕಾರ್ಯಕ್ರಮ ಅನುಕೂಲವಾಗಲಿದೆ. ತಂತ್ರಜ್ಞಾನ ಬೆಳೆಸಿದವರಿಗೆ ಮಾತ್ರ ಭವಿಷ್ಯವಿದೆ’ಎಂದು ಅಶ್ವತ್ಥನಾರಾಯಣ ಹೇಳಿದರು. ಇದೇವೇಳೆ, ಆಸ್ಟ್ರೇಲಿಯಾ ಪ್ರಧಾನಿಗಳು ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಆರಂಭಿಸಿದ್ದಾರೆ ಎಂದು ಅವರು ಹೇಳಿದರು.

ADVERTISEMENT

‘ಸಂಶೋಧನೆ ಮತ್ತು ಅಭಿವೃದ್ಧಿಗೆ ಈ ಶೃಂಗ ನೆರವಾಗಲಿದೆ‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ಈ ಬಾರಿ ಆಯೋಜನೆಯಾಗಿರುವುದು 24ನೇ ಬೆಂಗಳೂರು ತಂತ್ರಜ್ಞಾನ ಶೃಂಗ. 'ಭವಿಷ್ಯಕ್ಕೆ ಚಾಲನೆ' ಎಂಬ ಪರಿಕಲ್ಪನೆ ಅಡಿಯಲ್ಲಿ ಸಮ್ಮೇಳನ ನಡೆಯಲಿದೆ.

ಮುನ್ನೂರಕ್ಕೂ ಹೆಚ್ಚು ಮಂದಿ ವಿಷಯ ತಜ್ಞರು ಸಮ್ಮೇಳನದಲ್ಲಿ ಮಾತನಾಡಲಿದ್ದಾರೆ. ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಸೇರಿದಂತೆ ವಿದೇಶಗಳ ಹಲವು ನಾಯಕರು ಭಾಗವಹಿಸಲಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸಭೆಯಲ್ಲಿ ಭಾಗವಹಿಸಲಿವೆ. ಮುನ್ನೂರಕ್ಕೂ ಹೆಚ್ಚು ಪ್ರದರ್ಶಕರು ಮತ್ತು ಇಪ್ಪತ್ತು ಸಾವಿರಕ್ಕೂ ಹೆಚ್ಚು ವ್ಯಾಪಾರ ವಹಿವಾಟುದಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಟ್ಟು ಐದು ಲಕ್ಷ ಮಂದಿ ಸಮ್ಮೇಳನವನ್ನು ಸಂದರ್ಶಿಸಬಹುದು ಎಂದು ಅಂದಾಜು ಮಾಡಲಾಗಿದೆ.

ಸಮ್ಮೇಳನದ ಭಾಗವಾಗಿ ಭಾರತ–ಅಮೆರಿಕ ನಡುವೆ ತಂತ್ರಜ್ಞಾನ ಸಮಾಲೋಚನೆ ನಡೆಯಲಿದೆ. ಇಸ್ರೇಲ್‌, ಜಪಾನ್‌, ಸ್ವೀಡನ್‌, ಜರ್ಮನಿ, ಕೆನಡಾ, ನೆದರ್ಲೆಂಡ್‌, ತೈವಾನ್‌ ಮತ್ತಿತರ ರಾಷ್ಟ್ರಗಳೊಂದಿಗೆ ಒಡಂಬಡಿಕೆ ಆಗಲಿದೆ.

ಕಿಂಡ್ರಿಲ್, ಇನ್ಫೋಸಿಸ್, ಬಯೋಕಾನ್, ರಝೋರ್ ಪೇ, ರಾಬರ್ಟ್‌ ಬಾಷ್, ಟೆಲ್ ಸ್ಟ್ರಾ, ಎನ್ಆರ್‌ಡಬ್ಲ್ಯು ಗ್ಲೋಬಲ್ ಬ್ಯುಸಿನೆಸ್, ಲಾರೀಸ್ ಬಯೋ, ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ, ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಆಸ್ಟ್ರೇಲಿಯಾ ಸರ್ಕಾರ ಈ ಸಮ್ಮೇಳನದಲ್ಲಿ ಭಾಗವಹಿಸಿವೆ.

‘ಬೆಂಗಳೂರಿನಿಂದಾಚೆ ಉದ್ಯಮ ಬೆಳೆಸುವ ನಮ್ಮ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ವಿಶೇಷವಾಗಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಬಿಗ್‌ ಡೇಟಾ, ಸೆಮಿಕಂಡಕ್ಟರ್‌, ಸೈಬರ್‌ ಸೆಕ್ಯುರಿಟಿ ಮುಂತಾದವು ಹಲವು ನಗರಗಳಲ್ಲಿ ನೆಲೆ ನಿಲ್ಲುತ್ತಿವೆ. ಸೆಮಿಕಂಡಕ್ಟರ್‌ ವಿನ್ಯಾಸ ಮತ್ತು ತಯಾರಿಕೆ ಕ್ಷೇತ್ರದ ಮೇಲೆ ಹೂಡಿಕೆ ಮಾಡುವವರಿಗೆ ಭೂಮಿ, ಹೂಡಿಕೆ ಪ್ರಮಾಣದ ಮೇಲಿರುವ ಮಿತಿಯನ್ನು ಸಡಿಲಗೊಳಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗುವುದು. ದೇವನಹಳ್ಳಿ ಸಮೀಪದಲ್ಲಿ ಸೆಮಿಕಂಡಕ್ಟರ್‌ ಪಾರ್ಕ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ಮುಂದಿನ ಯೋಜನೆಗಳ ಕುರಿತು ವಿವರಿಸಿದ್ದಾರೆ.

ರಾಜ್ಯದಲ್ಲಿ ಸ್ಥಾಪನೆಯಾಗುವ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಮತ್ತು ಉದ್ಯಮಗಳಿಗೆ ಪೂರಕವಾಗಿ ಸರ್ಕಾರಿ ತಂತ್ರಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಹಲವು ಉದ್ಯಮಗಳ ಜತೆಯಲ್ಲಿ ಒಪ್ಪಂದವನ್ನೂ ಮಾಡಿ ಕೊಳ್ಳಲಾಗಿದೆ. ವಿದ್ಯಾರ್ಥಿಗಳ ಇಂಟರ್ನ್‌ಶಿಪ್‌ ಅವಧಿಯನ್ನು 30 ವಾರಗಳಿಗೆ ಹೆಚ್ಚಿಸಲಾಗಿದೆ. ಒಟ್ಟಾರೆ ತಂತ್ರಜ್ಞಾನ ಕ್ಷೇತ್ರದಿಂದ ಮುಂಬರುವ ವರ್ಷಗಳಲ್ಲಿ 2 ಲಕ್ಷದಿಂದ 3 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಶ್ವತ್ಥನಾರಾಯಣ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.