ADVERTISEMENT

ಬಂದಿದೆ ವೇಗದ ಬ್ರೌಸರ್‌ ಬ್ರೇವ್‌! ಏನಿದರ ವೈಶಿಷ್ಟ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 3:49 IST
Last Updated 7 ಜನವರಿ 2020, 3:49 IST
ಬ್ರೇವ್ ಬ್ರೌಸರ್
ಬ್ರೇವ್ ಬ್ರೌಸರ್   

ನವದೆಹಲಿ: ಬ್ರೌಸಿಂಗ್‌ನಲ್ಲಿ ಸದ್ಯ ಅಧಿಪತ್ಯ ಸಾಧಿಸಿರುವ ಕ್ರೋಮ್‌ಗೆ ಸೆಡ್ಡು ಹೊಡೆಯಲು ಇದೀಗ ಅತ್ಯಂತ ವೇಗದ ಬ್ರೌಸರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇಂಟರ್‌ನೆಟ್ ಬಳಕೆದಾರರಿಗೆ ಗೌಪ್ಯತೆ ಹಾಗೂ ಸುರಕ್ಷತೆಗೆ ಬ್ರೇವ್ ಸಾಫ್ಟ್‌ವೇರ್ ಕಂಪನಿಯುಬ್ರೇವ್ ಎಂಬ ಹೊಸ ವೆಬ್ ಬ್ರೌಸರ್‌ ಅನ್ನು ಬಿಡುಗಡೆ ಮಾಡಿದೆ.

ಕ್ರೋಮ್‌ನಲ್ಲಿ ಹೆಚ್ಚಿನ RAM ಬಳಕೆ ಮತ್ತು ಜಾಹೀರಾತು ಟ್ರ್ಯಾಕರ್‌ಗಳಂತಹ ಕೆಲವು ತೊಂದರೆಗಳಿವೆ. ಈ ಮಧ್ಯೆ ವೇಗದ ಹುಡುಕಾಟದಿಂದಾಗಿ ಜನರಿಗೆ ಇಷ್ಟವಾಗಿದೆ. ಹೀಗಾಗಿ ಜನರು ಗೂಗಲ್ ನಿರ್ಮಿತ ಬ್ರೌಸರ್‌ನಿಂದ ಸಫಾರಿ, ಫೈರ್‌ಫಾಕ್ಸ್, ವಿವಾಲ್ಡಿ ಮತ್ತು ಡಕ್‌ಡಕ್‌ಗೋ ಸೇರಿ ಇತರೆ ಬ್ರೌಸರ್‌ಗೆ ಹೋಗುವುದು ಸುಲಭವಲ್ಲ.ಈ ಎಲ್ಲ ಸಮಸ್ಯೆಗಳಿಗೆ ಪರ್ಯಾಯವಾಗಿ ಈಗ ಮಾರುಕಟ್ಟೆಯಲ್ಲಿ ಬ್ರೇವ್ ಎಂಬ ಹೊಸ ಬ್ರೌಸರ್ ಲಭ್ಯವಿದ್ದು, ತನ್ನ ವೈಷಿಷ್ಟ್ಯದಿಂದಾಗಿ ಎಲ್ಲ ರೀತಿಯಲ್ಲೂ ಕ್ರೋಮ್‌ಗೆ ಸವಾಲು ಹಾಕಬಲ್ಲದಾಗಿದೆ.

ಬ್ರೇವ್ ಬ್ರೌಸರ್ ಮೂಲ

ADVERTISEMENT

2016ರಲ್ಲಿ ಬ್ರೆಂಡನ್ ಇಚ್(ಸಿಇಒ) ಮತ್ತು ಬ್ರಿಯಾನ್ ಬಾಂಡಿ (ಸಿಟಿಒ) ಸಹ ಸಂಸ್ಥಾಪಕತ್ವದ ಬ್ರೇವ್ ಸಾಫ್ಟ್‌ವೇರ್ ಕಂಪನಿಯು ಬ್ರೇವ್ ಅನ್ನು ಸ್ಥಾಪಿಸಿದೆ. ಆಗ, ಬ್ರೌಸರ್ಕೇವಲ ಜಾಹೀರಾತು ನಿರ್ಬಂಧಿಸುವ ವೈಶಿಷ್ಟ್ಯವನ್ನು ಹೊಂದಿತ್ತು. ಆದರೆ ಬಳಕೆದಾರರ ಗೌಪ್ಯತೆ ಕಾಪಾಡುವ ಹೊಸ ವೈಶಿಷ್ಟ್ಯಗಳನ್ನು ತರುವ ಭರವಸೆಯನ್ನು ಕಂಪನಿ ನೀಡಿತ್ತು. ಅಲ್ಲದೆ ಬ್ರೌಸರ್ ಬಳಸುವುದಕ್ಕಾಗಿ ಜನರಿಗೆ ರಿವಾರ್ಡ್ ನೀಡಲು ಮುಂದಾಯಿತು. ಬ್ರೇವ್ ಬ್ರೌಸರ್ ಖಾಸಗಿ ಬ್ರೌಸಿಂಗ್ ಮತ್ತು ಹುಡುಕಾಟದ ಸುಧಾರಿತ ಫಲಿತಾಂಶಗಳಿಗಾಗಿ 'ಟಾರ್' ಅನ್ನು ಸಂಯೋಜಿಸಿದೆ. ಅದೀಗ ವೇಗವಾಗಿ ಕೆಲಸ ಮಾಡುತ್ತಿದೆ.

ಬ್ರೇವ್ ಬ್ರೌಸರ್‌ನ ವೈಷಿಷ್ಟ್ಯಗಳು

ಶೆಲ್ಡ್ಸ್: 2016ರಲ್ಲಿ ಕೇಂಬ್ರಿಜ್ಅನಾಲಿಟಿಕಾ ಹಗರಣವು ಬೆಳಕಿಗೆ ಬಂದ ನಂತರ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಫೇಸ್‌ಬುಕ್‌ ಬಳಕೆದಾರರ ನಡವಳಿಕೆಯನ್ನು ಟ್ರ್ಯಾಕ್ ಮಾಡುತ್ತಿರುವ ಅಂಶವನ್ನು ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದರು.ಶೆಲ್ಡ್ಸ್ ವೈಶಿಷ್ಟ್ಯವನ್ನು ಹೊಂದಿರುವ ಬ್ರೇವ್, ಕುಕ್ಕೀಸ್‌‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸುತ್ತದೆ. ಅಲ್ಲದೆ ಎಲ್ಲ ರೀತಿಯ ಟ್ರ್ಯಾಕರ್‌, ಜಾಹೀರಾತುಗಳನ್ನು ನಿರ್ಬಂಧಿಸುತ್ತದೆ. ಹೀಗಾಗಿ ಕಂಪನಿಗಳು ವೆಬ್‌ನಾದ್ಯಂತ ಬಳಕೆದಾರರನ್ನು ಟ್ರ್ಯಾಕ್ ಮಾಡುವುದನ್ನು ತಪ್ಪಿಸುತ್ತದೆ.

ಟಾರ್(ಸಾಫ್ಟ್‌ವೇರ್) ಸಂಯೋಜನೆ

ಬ್ರೌಸಿಂಗ್‌ನಲ್ಲಿನ ಬಳಕೆದಾರರು ಬ್ರೌಸ್ ಮಾಡಿದ ಮಾಹಿತಿಯನ್ನು ಟಾರ್ ಮರೆಮಾಡುವುದು ಮಾತ್ರವಲ್ಲದೆ ಬ್ರೌಸಿಂಗ್ ಮಾಡುವ ವೇಳೆ ಇತರೆ ಸೈಟ್‌ಗಳಿಗೆ ಭೇಟಿ ನೀಡಿದಾಗ ದಾಖಲಾಗುವ ಬಳಕೆದಾರರ ಲೊಕೇಷನ್‌ ಅನ್ನು ಕೂಡ ಗೌಪ್ಯವಾಗಿಡುತ್ತದೆ. ಗೌಪ್ಯತೆಯನ್ನು ಕಾಪಾಡಲು ಈ ಸಂಪರ್ಕಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಸದ್ಯ ಈ ಟಾರ್ ಸಂಯೋಜನೆಯು ಕೇವಲ ವೆಬ್ ಬ್ರೌಸರ್‌ಗೆ ಮಾತ್ರ ಲಭ್ಯವಿದ್ದು, ಆದಷ್ಟು ಶೀಘ್ರವೇ ಮೊಬೈಲ್ ಆವೃತ್ತಿಗಳಿಗೂ (ಆಂಡ್ರಾಯ್ಡ್ ಮತ್ತು ಐಒಎಸ್) ತರುವುದಾಗಿ ಕಂಪನಿ ಘೋಷಿಸಿದೆ.

ಏನಿದು ಟಾರ್ (Tor)?

ಟಾರ್ ಎನ್ನುವುದು ಉಚಿತ ಮತ್ತು ತೆರೆದ ಸಾಫ್ಟ್‌ವೇರ್ ಆಗಿದ್ದು, ಇದನ್ನು ಗೌಪ್ಯ ಸಂವಹನವನ್ನು ನಡೆಸಲು ವಿಶೇಷವಾಗಿ ರಚಿಸಲಾಗಿದೆ. ಈ ಸಾಫ್ಟ್‌ವೇರ್ ಅನ್ನು ಬ್ರೇವ್ ಬಳಸಿಕೊಂಡಿದೆ.

ವೇಗದ ಬ್ರೌಸಿಂಗ್

ಬ್ರೇವ್ ಕ್ರೋಮಿಯಂ ಕೋಡ್ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ ಮತ್ತು ವೇಗದ ಬ್ರೌಸಿಂಗ್ ಮತ್ತು ಹುಡುಕಾಟದ ಫಲಿತಾಂಶಗಳ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕ್ರೋಮ್, ಫೈರ್‌ಬಾಕ್ಸ್, ಮತ್ತು ಸಫಾರಿಗಿಂತ ಆರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಜಾಸ್ತಿ ಪ್ರಮಾಣದ RAM ಅನ್ನು ಬಳಸುವುದಿಲ್ಲ.ಬಳಕೆದಾರರ ಬ್ರೌಸಿಂಗ್ ಡೇಟಾ ಸಂಗ್ರಹಿಸುವುದಿಲ್ಲ ಮತ್ತು ಡೇಟಾವನ್ನು ಥರ್ಡ್‌ ಪಾರ್ಟಿಗಳಿಗೆ ಮಾರಾಟ ಮಾಡಲ್ಲ ಎಂದು ಬ್ರೇವ್ ಸಾಫ್ಟ್‌ವೇರ್ ಹೇಳಿದೆ.

ಮತ್ತೊಂದು ಪ್ರಮುಖ ಅಂಶವೆಂದರೆ, ಬ್ರೇವ್ ಸಾಫ್ಟ್‌ವೇರ್ ತಿರುಚಿದ ಕ್ರೋಮಿಯಂ (tweaked Chromium) ಅನ್ನು ಹೊಂದಿರುವುದರಿಂದಾಗಿ ಬಳಕೆದಾರರ ಡೇಟಾವನ್ನು ಅನಧಿಕೃತವಾಗಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಬ್ರೇವ್ ಬ್ರೌಸರ್ ಮೂಲಕ ಹ್ಯಾಕಿಂಗ್ ಸಾಧನವು ಸಿಸ್ಟಮ್‌ಗೆ ಪ್ರವೇಶಿಸುವುದಿಲ್ಲ.
ಕ್ರೋಮಿಯಂ ಗೂಗಲ್ ಅಭಿವೃದ್ಧಿಪಡಿಸಿದ ಉಚಿತ ಮತ್ತು ಮುಕ್ತ ಮೂಲ ವೆಬ್ ಬ್ರೌಸರ್ ಯೋಜನೆಯಾಗಿದ್ದು, ಇದು ಕ್ರೋಮ್ ಬ್ರೌಸರ್‌ಗೆ ಶಕ್ತಿ ನೀಡುತ್ತದೆ.

ಏನಿದು ಬ್ರೇವ್ ರಿವಾರ್ಡ್ಸ್

ಒಂದು ವೇಳೆ ಬಳಕೆದಾರರು ಬ್ರೇವ್ ರಿವಾರ್ಡ್‌ಗಳನ್ನು ಆನ್ ಮಾಡಿದರೆ, ಬಳಕೆದಾರರು ಗೌಪ್ಯತೆ- ಅಗತ್ಯದ ಜಾಹೀರಾತುಗಳನ್ನು ವೀಕ್ಷಿಸಲು ಬೇಸಿಕ್ ಅಟೆನ್ಷನ್ ಟೋಕನ್ (ಬಿಎಟಿ) ಎಂದು ಕರೆಯುವ ಫ್ಲೈಯರ್ ತರಹದ ಟೋಕನ್‌ಗಳನ್ನು ಆಗಾಗ್ಗೆ ಪಡೆಯಬಹುದು. ಅಲ್ಲದೆ ಬಳಕೆದಾರರು ಪ್ರತಿಗಂಟೆಗೆ ಎಷ್ಟು ಜಾಹೀರಾತುಗಳು ಬೇಕು ಎಂಬುದನ್ನು ಕೂಡ ತಾವೇ ಸೆಟ್ ಮಾಡಿಕೊಳ್ಳಬಹುದು.

ಸದ್ಯ ಬಳಕೆದಾರರು ಟೋಕನ್‌ಗಳೊಂದಿಗೆ ಅವರಿಷ್ಟದ ವೆಬ್ ಕ್ರಿಯೇಟರ್ಸ್‌ಗಳನ್ನು ಬೆಂಬಲಿಸಬಹುದು. ಆದರೆ ಶೀಘ್ರದಲ್ಲೇ ಟೋಕನ್‌ಗಳನ್ನು ಪ್ರೀಮಿಯಂ, ಉಡುಗೊರೆ ಕಾರ್ಡ್‌ಗಳು ಮತ್ತು ಇತರೆ ವಿಚಾರಗಳಿಗೆ ಬಳಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.

ಬ್ರೇವ್ ರಿವಾರ್ಡ್‌ಗಳೊಂದಿಗೆ ಸಂಯೋಜನೆಗೊಂಡಿರುವ ವೆಬ್‌ಸೈಟ್‌ಗಳಲ್ಲಿ ಕಳೆದ ಸಮಯವನ್ನು ಆಧರಿಸಿ, ಬಳಕೆದಾರರು ಮಾಸಿಕ BAT ಅಂಕಗಳನ್ನು ಪಡೆಯುತ್ತಾರೆ. ಟೋಕನ್‌ಗಳನ್ನು ತಮ್ಮ ಆಯ್ಕೆಯಂತೆ ಹಣವಾಗಿ ಪರಿವರ್ತಿಸಬಹುದು ಮತ್ತು ಅದನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬಹುದು ಅಥವಾ ಜಾಹೀರಾತು ಮುಕ್ತ ಸುದ್ದಿ ಅಥವಾ ಮಾಹಿತಿಯನ್ನು ತಲುಪಿಸಲು ವೆಬ್‌ಸೈಟ್‌ಗಳಿಗೆ ಕೊಡುಗೆಯನ್ನು ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.