ADVERTISEMENT

ಕುಕೀ ಪ್ರೊಫೈಲ್: ನಮ್ಮ ಇಂಟರ್‌ನೆಟ್‌ ಬಯೋಡೇಟಾ!

ಕೃಷ್ಣ ಭಟ್ಟ
Published 21 ನವೆಂಬರ್ 2023, 23:33 IST
Last Updated 21 ನವೆಂಬರ್ 2023, 23:33 IST
<div class="paragraphs"><p>ಇಂಟರ್‌ನೆಟ್‌ ಬಯೋಡೇಟಾ!</p></div>

ಇಂಟರ್‌ನೆಟ್‌ ಬಯೋಡೇಟಾ!

   

ಹಾಲ್‌ನಲ್ಲಿ ಕುಳಿತ ಪತಿ ‘ರಾಜಾಜಿನಗರದಲ್ಲಿ ಆ ಹೋಟೆಲ್‌ ಎಷ್ಟು ಚೆನ್ನಾಗಿದೆ ಗೊತ್ತಾ? ಅಲ್ಲಿ ಪೆಪ್ಪರ್ ಡ್ರೈ ಮಂಚೂರಿ ಎಷ್ಟು ಚೆನ್ನಾಗಿರತ್ತೆ ಅಂತೀಯಾ…’ ಎಂದು ಅಡುಗೆಮನೆಗೆ ಕೇಳಿಸುವ ಹಾಗೆ ಹೇಳಿದ. ಅಡುಗೆಮನೆಯಲ್ಲಿ ಹಾಲನ್ನು ಒಲೆ ಮೇಲೆ ಕಾಯಿಸುವುದಕ್ಕೆ ಇಟ್ಟುಕೊಂಡು, ನಿಂತಿದ್ದ ಆತನ ಪತ್ನಿ ‘ಹೌದಾ?’ ಎಂದಳು. ಹಾಲು ಕಾಯುವುದಕ್ಕೆ ಇನ್ನೂ ಎರಡು ನಿಮಿಷ ಇದೆ ಎಂದುಅಂತ ಅಂದುಕೊಂಡು, ಸ್ಮಾರ್ಟ್‌ಫೋನ್ ಅನ್‌ಲಾಕ್ ಮಾಡಿ ಸೋಷಿಯಲ್ ಮೀಡಿಯಾ ಆ್ಯಪ್ ತೆರೆದರೆ ಮೂರನೇ ಪೋಸ್ಟ್‌ಗೆ ಸ್ಕ್ರೋಲ್ ಆಗ್ತಾ ಇದ್ದ ಹಾಗೆಯೇ ರಾಜಾಜಿನಗರದ ಹೋಟೆಲ್‌ನ ಅಡ್ವರ್ಟೈಸು!

ಅರೆ! ಇದು ಹೇಗೆ ಬಂತು? ನಮ್ಮ ಮನೆಯಲ್ಲೆಲ್ಲಾದರೂ ಕ್ಯಾಮೆರಾ ಏನಾದರೂ ಇಟ್ಟಿದಾರಾ? ಎಂತ ಕಥೆ ಇದು? ನಮ್ಮ ಮನೆಯವರು ರಾಜಾಜಿನಗರದ ಹೋಟೆಲ್ ಬಗ್ಗೆ ಹೇಳಿದ ಕೂಡಲೇ ನನ್ನ ಮೊಬೈಲ್‌ನಲ್ಲಿ ಅದೇ ಹೋಟೆಲ್‌ನ ಜಾಹೀರಾತು ಕಾಣಿಸಿದ್ದು ಹೇಗೆ?

ADVERTISEMENT

ಮೇಲ್ನೋಟಕ್ಕೆ ಇದೊಂದು ಪತ್ತೇದಾರಿ ಚಟುವಟಿಕೆ ಥರ ಕಾಣಿಸಬಹುದು. ಆದರೆ, ವಾಸ್ತವ ಬೇರೆಯೇ ಇದೆ… ರಾಜಾಜಿನಗರದ ಹೋಟೆಲ್ ಸುದ್ದಿಯನ್ನು ಹೇಳುವುದಕ್ಕೂ ಒಂದು ಕ್ಷಣ ಮೊದಲು, ಆ ಹೋಟೆಲ್‌ನ ಹೆಸರು ನೆನಪಾಗದ ಪತಿ ತನ್ನ ಮೊಬೈಲ್‌ನಲ್ಲಿ ಬ್ರೌಸರ್ ತೆಗೆದು ‘ರಾಜಾಜಿನಗರ ಹೋಟೆಲ್‌’ ಎಂದು ಹುಡುಕಿದ್ದ. ಅವನ ಬ್ರೌಸರಿನಲ್ಲಿ ‘ಕುಕೀ’ ಸೇವ್ ಆಗಿತ್ತು. ಅಷ್ಟೇ ಅಲ್ಲ, ಅವನ ಕುಕೀ ಪ್ರೊಫೈಲಿಂಗ್‌ನಲ್ಲಿ ಅವನ ಹೆಂಡತಿಯನ್ನೂ ‘ರಿಲೇಟಿವ್’ ಎಂದು ಲಿಂಕ್ ಮಾಡಲಾಗಿತ್ತು. ಹಾಗಾಗಿ, ಆತ ಏನೇ ಹುಡುಕಿದರೂ ಅದಕ್ಕೆ ಸಂಬಂಧಿಸಿದ ಜಾಹೀರಾತು ಅವಳ ಸ್ಮಾರ್ಟ್‌ಫೋನ್‌ನಲ್ಲೂ, ಅವಳು ಏನೇ ಹುಡುಕಿದರೂ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳು ಇವನ ಮೊಬೈಲ್‌ನಲ್ಲೂ ಕಾಣಿಸುತ್ತವೆ.

ಏನಿದು ಕುಕೀ ಪ್ರೊಫೈಲಿಂಗ್?:

‘ಕುಕೀ’ ಎನ್ನುವುದು ನಮ್ಮ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಒಂದು ಸಣ್ಣ ಫೈಲ್. ಅದರಲ್ಲಿ ನಮ್ಮ ಐಪಿ ವಿಳಾಸ, ನಮ್ಮ ವಯಸ್ಸು, ನಾವು ಯಾವ ಸ್ಥಳದಲ್ಲಿ ವಾಸವಿದ್ದೇವೆ, ಯಾವ ವೆಬ್‌ಸೈಟ್‌ನ ಯಾವ ಪೇಜ್‌ಗೆ ಭೇಟಿ ನೀಡಿದ್ದೇವೆ ಎಂಬುದನ್ನು ಸಂಗ್ರಹಿಸಲಾಗುತ್ತದೆ. ಇದರಲ್ಲಿ ಹಲವು ರೀತಿಯ ಕುಕೀಗಳಿವೆ. ತಾತ್ಕಾಲಿಕ ಕುಕೀಗಳು ಸಾಮಾನ್ಯವಾಗಿ ಬ್ರೌಸರ್ ಮುಚ್ಚಿದ ತಕ್ಷಣ ಅಳಿಸಿಹೋಗುತ್ತವೆ. ಆದರೆ, ಪರ್ಮನೆಂಟ್ ಕುಕೀಗಳು ಅಥವಾ ಶಾಶ್ವತ ಕುಕೀಗಳು 12 ತಿಂಗಳುಗಳವರೆಗೆ ಇರುತ್ತವೆ. ಅಲ್ಲಿಯವರೆಗೆ ನಮ್ಮ ಎಲ್ಲ ಮಾಹಿತಿಯೂ ಕುಕೀಗಳಲ್ಲಿ ಉಳಿದಿರುತ್ತವೆ.

ಈ ಕುಕೀಗಳನ್ನೆಲ್ಲ ಸೇರಿಸಿ ಒಬ್ಬ ವ್ಯಕ್ತಿಯ ಪ್ರೊಫೈಲ್ ಅನ್ನು ರಚಿಸಲಾಗುತ್ತದೆ. ಅಂದರೆ, ನಾವು ಬ್ರೌಸರ್‌ನಲ್ಲಿ ಒಂದು ರೆಸಿಪಿ ಹುಡುಕುತ್ತೇವೆ. ಅದಾದ ನಂತರ, ಒಂದು ಅಡುಗೆ ವೆಬ್‌ಸೈಟ್‌ಗೆ ಹೋಗುತ್ತೇವೆ. ಆಗ ನಿಮ್ಮನ್ನು ಈ ಕುಕೀ ಪ್ರೊಫೈಲಿಂಗ್‌ ‘ಅಡುಗೆ ಪ್ರಿಯರು’ ಎಂದು ಗುರುತಿಸುತ್ತದೆ. ಅಲ್ಲೊಂದು ಅಡುಗೆ ಪ್ರಿಯರ ಪ್ರೊಫೈಲ್‌ ಇರುತ್ತದೆ. ಆ ಪ್ರೊಫೈಲ್‌ಗೆ ನಿಮ್ಮನ್ನು ಸೇರಿಸಲಾಗುತ್ತದೆ! ಆಮೇಲೆ ನಿಮಗೆ ಅಡುಗೆ ಜಾಹೀರಾತುಗಳು ಕಾಣಿಸಲು ಶುರುವಾಗುತ್ತವೆ! ಹೀಗೆ ಥರಹೇವಾರಿ ಪ್ರೊಫೈಲ್‌ ಇರುತ್ತವೆ. ಈ ಪ್ರೊಫೈಲ್‌ಗಳು ನಿಮ್ಮ ಆಸಕ್ತಿ, ಇಷ್ಟ ಅನಿಷ್ಟಗಳನ್ನು ಗುರುತಿಸುತ್ತವೆ.

ಅಷ್ಟೇ ಅಲ್ಲ, ಇದರಲ್ಲಿ ರಿಲೇಟಿವ್ ಪ್ರೊಫೈಲ್‌ಗಳೂ ಇವೆ. ನೀವು ಯಾವುದೋ ವೆಬ್‌ಸೈಟ್‌ನಲ್ಲಿ ನಿಮ್ಮ ಪತ್ನಿಯ, ಮಕ್ಕಳ, ಸೋದರ ಸೋದರಿಯರ ಇಮೇಲ್ ವಿಳಾಸ, ಫೋನ್ ನಂಬರ್ ಅಥವಾ ಇತರ ಮಾಹಿತಿಯನ್ನು ಒಂದೆರಡು ಬಾರಿ ನಮೂದಿಸಿರುತ್ತೀರಿ. ಆಗ ಅವರನ್ನು ನಿಮ್ಮ ರಿಲೇಟಿವ್ ಪ್ರೊಫೈಲ್‌ಗೆ ಸೇರಿಸಲಾಗುತ್ತದೆ. ನಿಮಗೆ ಒಂದು ರೀತಿಯ ಜಾಹೀರಾತನ್ನು ನಿಮ್ಮ ಪ್ರೊಫೈಲ್ ಆಧಾರದಲ್ಲಿ ತೋರಿಸಲು ಶುರು ಮಾಡಿದರೆ, ಅವರಿಗೂ ಅಂಥದ್ದೇ ಜಾಹೀರಾತು ಕಾಣಿಸುತ್ತವೆ.

ಇವೆಲ್ಲವೂ ಯಾವುದೋ ಕ್ಯಾಮೆರಾ ಇಟ್ಟು ಮಾಡುವಂಥದ್ದಲ್ಲ. ಬದಲಿಗೆ ನಮ್ಮ ಸ್ಮಾರ್ಟ್‌ಫೋನೇ ನಮ್ಮ ಜಾಡುಗಳನ್ನು, ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಹೋಗುತ್ತಿರುತ್ತದೆ. ಅದೇ ನಮ್ಮ ಪತ್ತೆದಾರಿಕೆ ಸಾಧನ!

ಇವೆಲ್ಲವನ್ನೂ ಜಾಹೀರಾತು ನೀಡುವ ಸಂಸ್ಥೆಗಳು ಮಾಡುತ್ತವೆ. ‘ಕುಕೀ ಪ್ರೊಫೈಲಿಂಗ್’ ಎಂಬುದು ಈ ಕಾಲದ ಒಂದು ಹೊಸ ಅತ್ಯಾಧುನಿಕ, ಅತ್ಯಂತ ಜಾಣ ವ್ಯವಸ್ಥೆ. ಹಾಗೆಂದ ಮಾತ್ರಕ್ಕೆ ನಾವು ತೆರೆದ ಎಲ್ಲ ವೆಬ್‌ಸೈಟ್‌ಗಳು ಶಾಶ್ವತ ಕುಕೀಗಳನ್ನು ಸಂಗ್ರಹಿಸುತ್ತವೆಯೇ? ಖಂಡಿತ ಇಲ್ಲ. ಕುಕೀಗಳನ್ನು ಸಂಗ್ರಹಿಸುವುದಕ್ಕೂ ಮೊದಲು ನಮ್ಮ ಬಳಿ ಕೇಳುತ್ತವೆ. ಕುಕೀ ಸಂಗ್ರಹಿಸಲು ನಾವು ಅನುಮತಿ ನೀಡಿದರಷ್ಟೇ ಅವು ಮುಂದುವರಿಯುತ್ತವೆ. ಇಲ್ಲವಾದರೆ, ಸೆಷನ್ ಕುಕೀಗಳನ್ನಷ್ಟೇ ಸಂಗ್ರಹಿಸಿ ಅಳಿಸುತ್ತವೆ. ಬಹುತೇಕ ಬಾರಿ ನಾವು ಈ ಕುಕೀ ಸಂಗ್ರಹದ ಬಗ್ಗೆ ಇರುವ ವಿವರಗಳನ್ನು ಓದದೆ ‘ಓಕೆ’ ಒತ್ತಿರುತ್ತೇವೆ.

2018ರ ವರೆಗೂ ಈ ಕುಕೀ ಸಂಗ್ರಹದ ಮೇಲೆ ಬ್ರೌಸ್‌ ಮಾಡುವವರಿಗೆ ಯಾವ ನಿಯಂತ್ರಣವೂ ಇರಲಿಲ್ಲ. 2018ರಲ್ಲಿ ಯುರೋಪ್‌ನಲ್ಲಿ ಜಾರಿಗೆ ಬಂದ ಜಿಡಿಪಿಆರ್‌ ಕಾಯ್ದೆಯಿಂದಾಗಿ ಬ್ರೌಸ್ ಮಾಡುವವರನ್ನು ಕೇಳಿಯೇ ಕುಕೀಗಳನ್ನು ಸಂಗ್ರಹಿಸುವ ಅನಿವಾರ್ಯತೆ ವೆಬ್‌ಸೈಟ್‌ಗಳು, ಬ್ರೌಸರ್‌ಗಳಿಗೆ ಉಂಟಾಯಿತು. ಆದರೆ, ಅದಾದ ನಂತರ ಮಾರ್ಕೆಟಿಂಗ್ ಕಂಪನಿಗಳು ಇನ್ನಷ್ಟು ಚುರುಕಾದವು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚು ದಕ್ಷವಾಗಿ ಕುಕೀಗಳನ್ನು ದುಡಿಸಿಕೊಂಡವು. ಆದರೆ, ಈಗ ಇನ್ನೆರಡು ವರ್ಷಗಳಲ್ಲಿ ಈ ಪರ್ಮನೆಂಟ್ ಕುಕೀಗಳನ್ನು ತೆಗೆದುಹಾಕುವುದಕ್ಕೆ ಬ್ರೌಸರ್‌ಗಳು ನಿರ್ಧಾರ ಮಾಡಿವೆ. ಈಗಾಗಲೇ ಕೆಲವು ಬ್ರೌಸರ್‌ನಲ್ಲಿ ಈ ಪರ್ಮನೆಂಟ್ ಕುಕೀಗಳನ್ನು ಸಂಗ್ರಹಿಸುತ್ತಿಲ್ಲ.

ಹಾಗೆಂದ ಮಾತ್ರಕ್ಕೆ ನಮಗೆ ಜಾಹೀರಾತು ತೋರಿಸುವವರು ಕೈಕಟ್ಟಿ ಕುಳಿತುಕೊಳ್ಳುತ್ತಾರೆ ಎಂದೇನಲ್ಲ. ನಮಗೆ ಜಾಹೀರಾತು ತೋರಿಸುವುದಕ್ಕೆ ಹೊಸ ಹೊಸ ವಿಧಾನಗಳನ್ನು ಹುಡುಕುವುದಕ್ಕೆ ಅನುಕೂಲವಾಗಲಿ ಎಂದೇ ಬ್ರೌಸರ್‌ಗಳು ಈ ಪರ್ಮನೆಂಟ್ ಕುಕೀಗಳಿಗೆ ವಿದಾಯ ಹೇಳುವ ದಿನಾಂಕವನ್ನು ಕಳೆದೆರಡು ವರ್ಷಗಳಿಂದ ಮುಂದೂಡುತ್ತ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.