ADVERTISEMENT

ಫೇಸ್‌ಬುಕ್‌ ಖಾತೆ ಅಳಿಸಿ ಇಲ್ಲವೆ ಸೈನ್ಯ ತೊರೆಯಿರಿ: ದೆಹಲಿ ಹೈಕೋರ್ಟ್ ಎಚ್ಚರಿಕೆ

ಏಜೆನ್ಸೀಸ್
Published 15 ಜುಲೈ 2020, 8:56 IST
Last Updated 15 ಜುಲೈ 2020, 8:56 IST
ಫೇಸ್‌ಬುಕ್
ಫೇಸ್‌ಬುಕ್   

ನವದೆಹಲಿ:ತಾವು ಬಳಸುತ್ತಿರುವಫೇಸ್‌ಬುಕ್‌ ಖಾತೆ ಅಳಿಸಿ ಇಲ್ಲವೆ ಸೈನ್ಯ ತೊರೆಯಿರಿ ಎಂದು ಸೇನಾಧಿಕಾರಿಗೆ ದೆಹಲಿ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಭಾರತೀಯ ಸೇನಾ ಸಿಬ್ಬಂದಿಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸಿರುವಇತ್ತೀಚಿನ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವಸೇನಾಧಿಕಾರಿಗೆ ಮಧ್ಯಂತರ ಪರಿಹಾರ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ರಾಷ್ಟ್ರದ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಸೇನಾ ಸಿಬ್ಬಂದಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿಕೋರ್ಟ್ ಅಭಿಪ್ರಾಯಪಟ್ಟಿದೆ.

ADVERTISEMENT

ನ್ಯಾಯಮೂರ್ತಿಗಳಾದ ರಾಜೀವ್‌ ಸಹೈ ಎಂಡ್ಲಾ ಮತ್ತು ಆಶಾ ಮೆನನ್‌ ನೇತೃತ್ವದ ನ್ಯಾಯಪೀಠ, ‘ಅರ್ಜಿದಾರರ ಮನವಿಗೆ ಸಂಬಂಧಿಸಿ ಯಾವುದೇ ಮಧ್ಯಂತರ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ. ಇದು ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆ ವಿಷಯವಾಗಿದೆ’ ಹೇಳಿದೆ.

ಇದೇ ವೇಳೆ ಅರ್ಜಿದಾರರಾದ ಲೆಫ್ಟಿನೆಂಟ್‌ ಕರ್ನಲ್‌ ಪಿ.ಕೆ.ಚೌಧರಿ, ‘ತಮ್ಮ ಫೇಸ್‌ಬುಕ್‌ ಖಾತೆಯಲ್ಲಿನ ಡೇಟಾವನ್ನು ಅಳಿಸಿ ಹಾಕಿದರೆ ತಾವು ಈಗಾಗಲೇ ಹೊಂದಿರುವ ಸಂಪರ್ಕಗಳು ಮತ್ತು ಸ್ನೇಹಿತರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ವಾದಿಸಿದ್ದಾರೆ.

‘ನೀವು ಖಾತೆಯನ್ನು ಅಳಿಸಿ ಹಾಕಿ. ನೀವು ಯಾವಾಗ ಬೇಕಾದರೂ ಹೊಸ ಖಾತೆ ತೆರೆಯಬಹುದು. ನೀವು ಸಂಸ್ಥೆಯ ಭಾಗವಾಗಿದ್ದೀರಿ. ಆದರ ಆದೇಶಕ್ಕೆ ಬದ್ಧರಾಗಿರಬೇಕು. ಒಂದು ವೇಳೆ ನೀವು ಫೇಸ್‌ಬುಕ್‌ಗೆ ತುಂಬಾ ಪ್ರಿಯರಾಗಿದ್ದರೆ, ಸೇನೆ ತೊರೆಯಬಹುದು. ಯಾವುದು ಬೇಕು ಎನ್ನುವುದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಎಂದು ನ್ಯಾಯಪೀಠ ಹೇಳಿದೆ.

ಜೂನ್‌ 6ರ ಸೇನಾ ನಿಯಮದ ಪ್ರಕಾರ ‘ಎಲ್ಲಾ ಭಾರತೀಯ ಸೇನಾ ಸಿಬ್ಬಂದಿಗಳು ತಮ್ಮ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಇತರ 87 ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವಂತೆ ಆದೇಶಿಸಲಾಗಿದೆ.

ಫೇಸ್‌ಬುಕ್‌ ಖಾತೆಯನ್ನು ನಿಷ್ಕ್ರಿಯಗೊಳಿಸಿದ ರೂಪದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲರು ಪದೇ ಪದೇ ಒತ್ತಾಯಿಸಿದರು. ಬಳಿಕ ಖಾತೆ ಅಳಿಸದಿದ್ದಕ್ಕಾಗಿ ಇಲಾಖಾ ಕ್ರಮ ಎದುರಿಸಬೇಕೇ ಬೇಡವೇ ಎಂಬುದು ಏಕೈಕ ಆಯ್ಕೆಯಾಗಿದೆ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಚೇತನ್‌ ಶರ್ಮಾ ಮಾತನಾಡಿ, ‘ಫೇಸ್‌ಬುಕ್‌ ಒಂದು ದೋಷಯುಕ್ತ ಸಾಧನ ಎಂದು ನಾವು ಕಂಡುಕೊಂಡಿದ್ದೇವೆ. ಇದು ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿರುವ ಅನೇಕ ಉದಾಹರಣೆಗಳಿವೆ. ಆದ್ದರಿಂದ ಆ್ಯಪ್‌ಗಳನ್ನು ತೆಗೆಯುವಂತೆ ಆದೇಶಿಸಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸೇನಾಧಿಕಾರಿಯು ಯುಎಸ್‌ನಲ್ಲಿರುವ ತಮ್ಮ ಕುಟುಂಬಸ್ಥರೊಂದಿಗೆ ಸಂವಹನ ನಡೆಸಲು ಫೇಸ್‌ಬುಕ್‌ ಬಳಸುವ ಬದಲು ವಾಟ್ಸಾಪ್‌, ಟ್ವಿಟರ್‌, ಸ್ಕೈಪ್‌ ಆ್ಯಪ್‌ಗಳನ್ನು ಬಳಸುವಂತೆ ಚೇತನ್‌ ಶರ್ಮಾ ಸೂಚಿಸಿದರು.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಫ್ಟಿನೆಂಟ್‌ ಕರ್ನಲ್‌ ಪಿ.ಕೆ. ಚೌಧರಿ, ಅವರು ಫೇಸ್‌ಬುಕ್‌ನ ಸಕ್ರಿಯ ಬಳಕೆದಾರರಾಗಿದ್ದಾರೆ. ಅವರ ಹಿರಿಯ ಮಗಳು ಸೇರಿದಂತೆ ಹೆಚ್ಚಿನವರು ವಿದೇಶದಲ್ಲಿ ನೆಲೆಸಿದ್ದರಿಂದ ಅವರ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಆ್ಯಪ್‌ ಅನ್ನು ಬಳಸುತ್ತಿದ್ದಾರೆ ಎಂದು ವಕೀಲರು ಮನವಿ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಬಳಕೆ ನಿಷೇಧಿಸುವ ಆದೇಶವು ಕಾನೂನುಬಾಹಿರವಾಗಿದೆ. ಇದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಜೀವನ ಹಕ್ಕು ಮತ್ತು ಗೌಪ್ಯತೆಯ ಹಕ್ಕನ್ನು ಮೊಟಗುಗೊಳಿಸುವುದರ ಜೊತೆಗೆ ಸೈನಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆಯಾಗುತ್ತದೆ ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.