ADVERTISEMENT

ಗಾಯಗಳಿಗೆ ಎಲೆಕ್ಟ್ರಾನಿಕ್‌ ಬ್ಯಾಂಡೇಜ್

ನೇಸರ ಕಾಡನಕುಪ್ಪೆ
Published 18 ಏಪ್ರಿಲ್ 2023, 19:30 IST
Last Updated 18 ಏಪ್ರಿಲ್ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಾಯಕ್ಕೆ ಬಟ್ಟೆಯ ಕಟ್ಟು ಕಟ್ಟುವುದು ಅತಿ ಪುರಾತನ ಚಿಕಿತ್ಸಾ ಪದ್ಧತಿ. ಗಾಯಕ್ಕೂ ಬಟ್ಟೆಗೂ ನಡುವೆ ಔಷಧವನ್ನು ಲೇಪಿಸುವುದು ಅಥವಾ ಹೊಲಿಗೆಗಳನ್ನು ಹಾಕುವುದು ಇತ್ಯಾದಿ ಸರಳ ವೈದ್ಯಕೀಯ ಪದ್ಧತಿಗಳು ಬಹುಕಾಲದಿಂದ ಚಾಲ್ತಿಯಲ್ಲಿದೆ. ಇದೀಗ ಹೊಸತೊಂದು ವಿಧಾನದ ಅನ್ವೇಷಣೆಯಾಗಿದೆ. ಇದು ಎಲೆಕ್ಟ್ರಾನಿಕ್‌ ಬ್ಯಾಂಡೇಜ್. ತನ್ನೊಳಗಿರುವ ಎಲೆಕ್ಟ್ರಾನಿಕ್ ಸಾಧನಗಳ ಸಹಾಯದಿಂದ ಗಾಯವನ್ನು ಬಹುಬೇಗನೇ ವಾಸಿಮಾಡುವ ಶಕ್ತಿ ಇದಕ್ಕಿದೆ.

ಅಮೆರಿಕದ ಇಲಿನಾಯ್ಸ್‌ ನಾರ್ತ್‌ ವೆಸ್ಟರ್ನ್‌ ವಿಶ್ವವಿದ್ಯಾನಿಲಯದ ಜೀವವೈದ್ಯಕೀಯ ಎಂಜಿನಿಯರುಗಳಾದ ಗಿಲೆರ್ಮೋ ಎ. ಅಮೀರ್ ಹಾಗೂ ಜಾನ್‌ ಎ. ರಾಜರ್ಸ್‌ ಅವರ ತಂಡವು ಈ ಸಂಶೋಧನೆಯನ್ನು ಮಾಡಿದೆ. ಈ ಸಂಶೋಧನೆಯ ಫಲವಾಗಿ, ರೋಗಿಯ ಗಾಯ ಬೇಗ ವಾಸಿಯಾಗುವುದಲ್ಲದೇ, ಗಾಯದ ಕಲೆ ಕಡಿಮೆಯಾಗುವಂತೆ ಮಾಡುವುದು ಹಾಗೂ ಚಿಕಿತ್ಸೆಯ ವೆಚ್ಚವನ್ನು ಕಡಿತಗೊಳಿಸುವುದು ಸಾಧ್ಯವಾದಂತೆ ಆಗುತ್ತದೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಡೇಜ್‌ ಬಳಕೆಯನ್ನೇ ವೈದ್ಯರು ಕಡಿಮೆ ಮಾಡುತ್ತಿದ್ದಾರೆ. ತೆರೆದ ಗಾಯ ಬೇಗನೇ ವಾಸಿಯುವುದು ಎಂಬ ವಾದವೂ ಇದೆ. ಹಿಂದೆಯಲ್ಲಾ ಅಪಘಾತಗಳಲ್ಲಿ ಮೂಳೆ ಮುರಿದಾಗ ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್’ ಮಾದರಿಯಲ್ಲಿ ಊನಗೊಂಡ ಭಾಗ ಅಲುಗಾಡದಂತೆ ಕಟ್ಟುವ ಪದ್ಧತಿಯಿತ್ತು. ಈಗ ಆ ಪದ್ಧತಿಯನ್ನು ನಿಧಾನವಾಗಿ ಕೈಬಿಡಲಾಗುತ್ತಿದೆ. ಹೊಲಿಗೆಯ ಬದಲಾಗಿ ಸ್ಟೇಪ್ಲರ್‌ಗಳನ್ನು ಬಳಸುವುದು, ಸಿಮೆಂಟ್‌ ಕಟ್ಟದೇ ಕೇವಲ ತೆಳುವಾದ ಬಟ್ಟೆಯಿಂದ ಬ್ಯಾಂಡೇಜ್‌ ಮಾಡುವುದನ್ನು ಅನುಸರಿಸಲಾಗುತ್ತಿದೆ. ಏಕೆಂದರೆ ಬದಲಾದ ಚಿಕಿತ್ಸೆಯ ವಿಧಾನ ಮತ್ತು ವ್ಯಾಖ್ಯಾನ ಇದಕ್ಕೆ ಕಾರಣವಾಗಿದೆ.

ADVERTISEMENT

ಈಗ ಅನ್ವೇಷಣೆಗೊಂಡಿರುವ ಸಂಶೋಧನೆಯು ಇದೇ ಮಾದರಿಯ ಹೆಜ್ಜೆಯನ್ನು ಅನುಸರಿಸಿದ್ದಾಗಿದೆ. ಅಂದರೆ, ತ್ವರಿತ ಚಿಕಿತ್ಸೆ ಮತ್ತು ಹೊಸ ವ್ಯಾಖ್ಯಾನದ ಗುಣಪಡಿಸುವ ವಿಧಾನದ್ದು. ‘ಮಧುಮೇಹ ಮುಂತಾದ ಸಮಸ್ಯೆಗಳಿರುವ ರೋಗಿಗಳ ಗಾಯ ಬೇಗನೇ ವಾಸಿಯಾಗುವುದಿಲ್ಲ. ಅದಕ್ಕೆ ಹೆಚ್ಚಿನ ಜಾಗ್ರತೆಯ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಶೋಧನೆಯಾಗಿದೆ. ನಮ್ಮ ಬ್ಯಾಂಡೇಜ್‌ನಲ್ಲಿ ಸಾಂಪ್ರದಾಯಿಕವಾದ ಔಷಧದ ಲೇಪನವೂ ಇರುತ್ತದೆ. ಜೊತೆಗೆ, ಕೆಲವು ಎಲೆಕ್ಟ್ಟಾನಿಕ್ ಸಾಧನಗಳಿದ್ದು, ಅವು ಗಾಯವನ್ನು ಬೇಗ ಮಾಗುವಂತೆ ಉತ್ತೇಜಿಸುತ್ತವೆ’ ಎನ್ನುತ್ತಾರೆ, ಗಿಲೆರ್ಮೋ ಅಮೀರ್.

ನಮ್ಮ ದೇಹ ಕಾರ್ಯನಿರ್ವಹಿಸಬೇಕಾದರೆ ವಿದ್ಯುತ್‌ ಸಂಜ್ಞೆಗಳ ಅಗತ್ಯ ಅತಿ ಮುಖ್ಯ. ಮಾನವ ದೇಹದಲ್ಲಿ ಅತಿ ದೊಡ್ಡ ಪ್ರಮಾಣದಲ್ಲೇ ವಿದ್ಯುತ್‌ ಸಂಚಾರವೂ ಇರುತ್ತದೆ. ಇದು ದೇಹವನ್ನು ಜೀವಂತವಾಗಿಯೂ, ಆರೋಗ್ಯವಂತವಾಗಿಯೂ ಕಾಪಾಡಿಕೊಳ್ಳುತ್ತದೆ. ಈ ಸರಳ ಕಾರ್ಯವೈಖರಿಯನ್ನು ಇಲ್ಲಿನ ವಿಜ್ಞಾನಿಗಳ ತಂಡ ಅಳವಡಿಸಿಕೊಂಡಿದೆ. ವಿಜ್ಞಾನಿಗಳು ಸಂಶೋಧಿಸಿರುವ ಈ ಬ್ಯಾಂಡೇಜಿನಲ್ಲಿ ದೇಹದಲ್ಲಿರುವ ವಿದ್ಯುತ್‌ ಅನ್ನು ಗುರುತಿಸಿ, ಬಳಸಿಕೊಳ್ಳುವ ಸೆನ್ಸರ್‌ಗಳನ್ನು ಅಳವಡಿಸಲಾಗಿರುತ್ತದೆ. ಈ ಸೆನ್ಸರ್‌ಗಳು ದೇಹದ ವಿದ್ಯುತ್‌ ಅನ್ನು ಗ್ರಹಿಸಿ ಗಾಯವಾಗಿರುವ ಭಾಗದ ಸುತ್ತಲೂ ವಿದ್ಯುತ್‌ ಪ್ರವಾಹಗಳನ್ನು ಸೃಷ್ಟಿಸುತ್ತವೆ. ಇದರಿಂದ ಗಾಯ ವಾಸಿಯುವ ವೇಗವು ಹೆಚ್ಚಾಗುತ್ತದೆ.

‘ಕೆಲವು ಸಂದರ್ಭಗಳಲ್ಲಿ ಗಾಯದ ವಿಧಕ್ಕೆ ಅನುಸಾರವಾಗಿ ಬ್ಯಾಂಡೇಜ್‌ನ ವಿದ್ಯುತ್‌ ಗ್ರಹಿಕೆಯ ಪ್ರಮಾಣ ಸಾಲದೇ ಇರಬಹುದು. ಅಂತಹ ವಿಶೇಷ ಸಂದರ್ಭಗಳಿಗಾಗಿ ಬ್ಯಾಂಡೇಜಿನಲ್ಲೇ ನ್ಯಾನೋ ಬ್ಯಾಟರಿಗಳನ್ನು ಅಳವಡಿಸಲಾಗಿರುತ್ತದೆ. ಇವು ಅತಿ ಸೂಕ್ಷ್ಮವಾದ ಬ್ಯಾಟರಿಗಳು. ಗಾಯ ವಾಸಿಯಾಗಲು ಬೇಕಾದ ವಿದ್ಯುತ್‌ ಅನ್ನು ಈ ಬ್ಯಾಂಡೇಜ್‌ ಗಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವರ್ಗಾಗಿಯಿಸುತ್ತವೆ’ ಎನ್ನುತ್ತಾರೆ, ಸಹ ಸಂಶೋಧಕ ಜಾನ್‌ ರಾಜರ್ಸ್‌.

ಅಲ್ಲದೇ, ಈ ಬ್ಯಾಂಡೇಜ್‌ಗಳನ್ನು ಒಮ್ಮೆ ಗಾಯಕ್ಕೆ ಹಚ್ಚಿದರೆ ಅವನ್ನು ತೆಗೆಯಬೇಕಾಗಿಲ್ಲ. ಅವು ಗಾಯ ವಾಸಿಯಾದಂತೆ ಕರಗಿಹೋಗುತ್ತವೆ. ಅಲ್ಲದೇ, ಇವು ಸಾಂಪ್ರದಾಯಿಕ ಬ್ಯಾಂಡೇಜ್‌ನಂತೆ ಬಟ್ಟೆ ಅಥವಾ ಸಿಂಥೆಟಿಕ್‌ ಸಾಮಗ್ರಿಯಿಂದ ಮಾಡಿರದೇ ಲೇಪನದ ಸ್ವರೂಪದಲ್ಲೂ ಇರುತ್ತವೆ. ಈ ಬ್ಯಾಂಡೇಜ್‌ ಹಾಕಲು ಒಂದು ಸಾಧನವನ್ನೂ ಬಳಸಲಾಗುತ್ತದೆ. ಈ ಸಾಧನವು ಗಾಯವನ್ನು ಗುರುತಿಸಿ, ಅದರ ತೀವ್ರತೆ, ಗಾತ್ರಕ್ಕೆ ಅನುಸಾರವಾಗಿ ಬ್ಯಾಂಡೇಜ್‌ ಅನ್ನು ಲೇಪಿಸುತ್ತದೆ. ಗಾಯದ ಸ್ವರೂಪಕ್ಕೆ ಅನುಗುಣವಾಗಿ ಬಟ್ಟೆ ಅಥವಾ ಸಿಂಥೆಟಿಕ್‌ ಸಾಮಗ್ರಿಯ ಎಲೆಕ್ಟ್ರಾನಿಕ್‌ ಬ್ಯಾಂಡೇಜ್‌ ಅನ್ನೂ ಬಳಸಲಾಗುವುದು ಎನ್ನುತ್ತಾರೆ, ವಿಜ್ಞಾನಿಗಳು.

‘ಮಾಲಿಬ್ಡೆನಮ್‌’ ಎಂಬ ಅಪರೂಪದ ಲೋಹವನ್ನು ಈ ಬ್ಯಾಂಡೇಜ್ ತಯಾರಿಯಲ್ಲಿ ಬಳಸಿದ್ದಾರೆ. ಇದನ್ನು ಎಲೆಕ್ಟ್ರಾನಿಕ್‌ ಚಿಪ್‌ ಹಾಗೂ ಸೆಮಿಕಂಟಕ್ಟರ್‌ಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಈ ಲೋಹವನ್ನು ಅತಿ ತೆಳುವಾಗಿ ಬಳಸಿದಾಗ ಅದು ದೇಹದೊಳಗೆ ಕರಗುವ ಗುಣವನ್ನು ಹೊಂದಿರುವುದನ್ನು ಈ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮ ಇಲ್ಲದೇ ಇರುವುದೂ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.