ADVERTISEMENT

ಕನ್ನಡ ಮನೆಯೊಳಗೆ ಕಾಲುಚಾಚಿದೆ ಇಂಗ್ಲಿಷ್

ಪ್ರಜಾವಾಣಿ ವಿಶೇಷ
Published 31 ಅಕ್ಟೋಬರ್ 2019, 10:55 IST
Last Updated 31 ಅಕ್ಟೋಬರ್ 2019, 10:55 IST
ರಾಜ್ಯೋತ್ಸವ ಲಹರಿ
ರಾಜ್ಯೋತ್ಸವ ಲಹರಿ   

‘ಆಕಾಶವಾಣಿ... ಓದುತ್ತಿರುವವರು...’ ಹೀಗೆ ಕಿವಿಮೇಲೆ ಭಾಷೆ ಬೀಳುತ್ತಿದ್ದ ಕಾಲವೊಂದಿತ್ತು. ‘ಯೂ ಆರ್ ಲಿಸನಿಂಗ್ ಎಫ್ಎಂ... ನಾನು ನಿಮ್ಮ... ಬೆಂಗ್ಳೂರು ಇವತ್ತು ಫುಲ್ ಚಿಲ್ಲಾಗಿದೆ....ಎ ರೈನಿ ಡೇ...ಎಲ್ಲೆಲ್ಲೂ ಟ್ರಾಫಿಕ್ ಜಾಮ್’ ಇದು ಈ ಕಾಲದ ಉಲಿ.

ಒಳಗೆ ಎಫ್ಎಂ ಕನ್ನಡ ಹೀಗೆ ಕಿವಿ ತುಂಬುವ ಹೊತ್ತಿಗೇ ಹೊರಗೆ ತರಕಾರಿ ಮಾರುವಾತ ಜೋರುದನಿಯಲ್ಲಿ ‘ಟೊಮೆಟೊ, ಕ್ಯಾಪ್ಸಿಕಂ, ಬೀನ್ಸು, ಕಾಲಿಫ್ಲವರ್...ಮೆಣಸಿನಕಾಯಿ... ಸೊಪ್ಪು’ ಎಂದು ಸಮ್ಮಿಶ್ರ ಭಾಷೆಯ ಮಾರಾಟದ ತಂತ್ರವನ್ನು ಎಸೆಯುತ್ತಾನೆ.

ಮೆಟ್ರೊ ರೈಲು ಹತ್ತಿದರೆ ಕೇಳುವ ಕನ್ನಡದಲ್ಲೂ ಇಂಗ್ಲಿಷ್ ಶೈಲಿ. ಸುದ್ದಿವಾಹಿನಿಗಳ ನಿರೂಪಕಿಯ ನುಡಿಗನ್ನಡದಲ್ಲಂತೂ ಅಡಿಗಡಿಗೆ ಕೇಳುವ ಇಂಗ್ಲಿಷ್.

ADVERTISEMENT

‘ಮೊದಲು ಸ್ಮಾಲ್ ಬೌಲ್ ತಗೊಳ್ಳಿ. ಒಲೆ ಹಚ್ಚಿ. ಉರಿ ಲೋ ಫ್ಲೇಮ್ ಇರಲಿ. ಬೌಲ್ ಇಟ್ಟು, ಟೂ ಸ್ಪೂನ್ ರಿಫೈನ್ಡ್ ಎಣ್ಣೆ ಹಾಕಿ. ಸಾಸಿವೆ ಚಿಟಚಿಟ ಅನ್ನಬೇಕು...ಹೀಗೆ ಸ್ಮಾಲ್ ಸ್ಲೈಸಸ್ ಮಾಡ್ಕೋಬೇಕು. ಫೈವ್ ಮಿನಿಟ್ಸ್ ಬಾಯಿಲ್ ಆಗಬೇಕು... ಕೊನೆಗೆ ಎಲ್ಲಾ ಪ್ರೈ ಮಾಡಿ ಹಾಕಿದರೆ ನಮ್ ರೆಸಿಪಿ ತಯಾರ್’ ಟೀವಿ ವಾಹಿನಿಯ ಅಡುಗೆ ಕಾರ್ಯಕ್ರಮದ ಈ ಕನ್ನಡದಲ್ಲಂತೂ ಇಂಗ್ಲಿಷ್ ಒಗ್ಗರಣೆ ಬಲು ಜೋರು.

ಹೀಗೆ ಹಳೆ ಮೈಸೂರಿನ ಕನ್ನಡದೊಳಗೆ ಇಂಗ್ಲಿಷ್ ಕಾಲುಚಾಚಿಕೊಂಡು ಮಲಗಿ ವರ್ಷಗಳೇ ಆಗಿವೆ. ಹೊಸಕಾಲದ ಹುಡುಗ-ಹುಡುಗಿಯರ ಸಂವಹನವನ್ನು ಪಠ್ಯವಾಗಿ ಬರೆದರೆ ಕೈಲಾಸಂ ನಾಟಕದ ಸಂಭಾಷಣೆಗಳಂತೆ ಕಾಣಬಹುದು. ಕೈಲಾಸಂ ವ್ಯಂಗ್ಯದ ಮೊನೆ ತಾಗಿಸಿದ್ದರು. ಈಗ ಯಾವ ಮೊನೆಯೂ ತಾಗುವುದೇ ಇಲ್ಲ.

ಭಾಷೆ ಹೀಗೆ ಪಡೆಯುತ್ತಾ ಬೆಳೆಯುವುದನ್ನು ಕೆಲವರು ಒಪ್ಪುತ್ತಾರೆ. ಆದರೆ, ಅದರ ಜಾಯಮಾನಕ್ಕೆ ಚ್ಯುತಿ ಬರುವುದನ್ನು ಸುತರಾಂ ಒಪ್ಪುವುದಿಲ್ಲ. ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಒಮ್ಮೆ ಹೊಸಕಾಲದ ಕನ್ನಡದ ಕುರಿತು ಆರೋಗಕರ ಚರ್ಚೆ ನಡೆಸುತ್ತಾ ಹೇಳಿದ್ದರು: ‘ಸಖತ್ ಎನ್ನುವ ಪದವನ್ನು ನಾವೆಲ್ಲ ನಕಾರಾತ್ಮವಾದುದನ್ನು ಹೇಳಲು ಬಳಸುತ್ತಿದ್ದೆವು. ಅವನಿಗೆ ಸಖತ್ ಜ್ವರ ಬಂದಿದೆ ಎನ್ನುತ್ತಿದ್ದೆವು. ಈಗ ಅದನ್ನು ಸಕಾರಾತ್ಮಕ ಧ್ವನಿ ಬಿಂಬಿಸಲು ಉಪಯೋಗಿಸುತ್ತಿದ್ದಾರೆ’. ಅವರ ಆ ಮಾತು ಕೇಳಿ ಕೆಲವೇ ನಿಮಿಷಗಳ ನಂತರ ‘ಸಖತ್ ಹಾಟ್ ಮಗಾ’ ಎಂಬ ರೇಡಿಯೊ ಉಲಿ ಕಿವಿಮೇಲೆ ಬಿದ್ದಿದ್ದೂ ಒಂಥರಾ ವ್ಯಂಗ್ಯವೇ.

ಇವತ್ತು ಶ್ರಾವ್ಯಭಾಷೆಯೇ ಮಿಸಳಭಾಜಿ ಆಗಿರುವುದರಿಂದ ‘ಕನ್ನಡವೇ ನಿತ್ಯ ಕನ್ನಡವೇ ಸತ್ಯ’ ಎನ್ನುವುದನ್ನು ಬೇರೆ ಪೋಷಾಕಿನೊಟ್ಟಿಗೇ ಸ್ವೀಕರಿಸುವಂತಾಗಿದೆ. ಚಿಣ್ಣರು ಆಟಕ್ಕಿಳಿದರೆ ಅಲ್ಲೂ ಮಿಶ್ರಭಾಷೆ. ‘ಬಾಲ್ ಪಾಸ್ ಮಾಡು....ಷೀ...ಓ ನೋ...ಕಮಾನ್...ಶೂಟ್ ಹಿಮ್....ಇಲ್ಲಿಗೆ ಏಮ್ ಮಾಡು...ಫೋಕಸ್...ಕಾನ್ಸಂಟ್ರೇಟ್...’ ಹೀಗೆ. ಮಳಿಗೆಯಲ್ಲಿ ಕನ್ನಡತಿಯಂತೆ ನಮಸ್ಕಾರ ಮಾಡಿದ ಮೇಲೆ ಸಮವಸ್ತ್ರ ತೊಟ್ಟ ಲಲನೆಯ ಬಾಯಿಂದ ಹೊಮ್ಮುವ ಕನ್ನಡವನ್ನೂ ಇಂಗ್ಲಿಷ್ ಸವರಿರುತ್ತದೆ.

ಇನ್ನು ಸುದ್ದಿವಾಹಿನಿಗಳ ವಾರ್ತಾವಾಚಕರಲ್ಲಿ ಕೆಲವರ ಕನ್ನಡ ದೇವರಿಗೇ ಪ್ರೀತಿ.‌ ಅಲ್ಲೂ ಮೊನಚನ್ನು ತೋರಲು ‘ರಬ್ಬಿಷ್... ನಾನ್‌ಸೆನ್ಸ್... ಈಡಿಯಟ್ಸ್... ಟೇಕ್ ಇಟ್ ಫಾರ್ ಗ್ರಾಂಟೆಡ್ ಅಂದ್ಕೊಂಡುಬಿಟ್ಟಿದಾರೆ....ಐ ಆ್ಯಮ್ ನಾಟ್ ಸರ್‌ಪ್ರೈಸ್ಡ್’ ಹೀಗೆಲ್ಲ ನುಡಿಗಟ್ಟುಗಳು ಹೊಮ್ಮುತ್ತಿವೆ.

ಇದೀಗ ತಪ್ಪು ಅಥವಾ ಸರಿ ಎನ್ನುವ ವ್ಯಾಖ್ಯೆಗಷ್ಟೇ ಸೀಮಿತವಾಗಿಲ್ಲ. ಒಪ್ಪಿತ ಮಾದರಿಯೇ ಆಗಿ ಬೆಳೆಯುತ್ತಿದೆ. ಸಂವಹನದ ಉದ್ದೇಶ ಸಫಲವಾದರೆ ಸಾಕೆಂಬ ಉಮೇದು.

ಗೋಲ್ಡನ್ ಬಜರ್, ಫೈರ್ ಬ್ರ್ಯಾಂಡ್ ಪರ್ಫಾರ್ಮೆನ್ಸ್ - ‘ರಿಯಾಲಿಟಿ’ ಕಾರ್ಯಕ್ರಮದಲ್ಲಿ ಕೊಡುವ ಬಿರುದುಗಳಿವು. ಹೀಗೆ ಸ್ವೀಕೃತ ಮಿಸಳಭಾಜಿ ಭಾಷೆಯ ಕರ್ಣಾನಂದ ಅನುಭವಿಸುತ್ತಿರುವ ಹೊತ್ತಿಗೇ ‘ಈಗ ನಾವು ಈ ಹೊಸ ಮೊಬೈಲ್ ಅನ್ನು ಅನ್‌ಬಾಕ್ಸ್ ಮಾಡೋಣ’ ಎಂಬ ಹೊಸ ವಿಡಿಯೊ ವಿಮರ್ಶೆ ಕೇಳುತ್ತಿದೆ. ವಾಟ್ಸ್‌ಆ್ಯಪ್ ಸಂದೇಶಗಳಲ್ಲೂ ಸಿರಿ ಇಂಗ್ಲಿಷ್‌ಗನ್ನಡವೇ ಗೆಲ್ಲುತ್ತಿದೆ. ಓದೇ ಇರದ ಸಿನಿಮಾ ನಾಯಕನ ಪಾತ್ರ ‘ನಾನು ಫೈಟರ್’ ಎಂದೇ ಗುಟುರು ಹಾಕುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.