ADVERTISEMENT

2021ರ ಜೂನ್ ಅಂತ್ಯದವರೆಗೂ ಮನೆಯಿಂದಲೇ ಕಾರ್ಯಾಚರಣೆ: ಗೂಗಲ್

ಏಜೆನ್ಸೀಸ್
Published 27 ಜುಲೈ 2020, 16:51 IST
Last Updated 27 ಜುಲೈ 2020, 16:51 IST
ಗೂಗಲ್
ಗೂಗಲ್   

ವಾಷಿಂಗ್ಟನ್‌: ಅಮೆರಿಕ ಮೂಲದ ಬೃಹತ್‌ ತಂತ್ರಜ್ಞಾನ ಸಂಸ್ಥೆ ಆಲ್ಫಾಬೆಟ್‌ ಇಂಕ್‌ನ ಗೂಗಲ್‌ ತನ್ನ ಉದ್ಯೋಗಿಗಳಿಗೆ ಮುಂದಿನ ವರ್ಷ ಜುಲೈವರೆಗೂ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಲಿದೆ ಎಂದು ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ ಸೋಮವಾರ ವರದಿ ಮಾಡಿದೆ.

ಸಿಇಒ ಸುಂದರ್‌ ಪಿಚೈ ಕಳೆದ ವಾರ ಕಂಪನಿಯ ಪ್ರಮುಖ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇದೇ ವರ್ಷ ಜೂನ್‌ನಿಂದ ಜಾಗತಿಕವಾಗಿ ಕಚೇರಿಗಳನ್ನು ತೆರೆಯಲಾಗುತ್ತದೆ, ಆದರೆ ಹೆಚ್ಚಿನ ಉದ್ಯೋಗಿಗಳು ವರ್ಷಾಂತ್ಯದ ವರೆಗೂ ಮನೆಯಿಂದಲೇ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ಗೂಗಲ್‌ ಈ ಹಿಂದೆ ಪ್ರಕಟಿಸಿತ್ತು. ಸೋಮವಾರದ ಪ್ರಕಟಣೆಯ ಪ್ರಕಾರ, 2021ರ ಜೂನ್‌ವರೆಗೂ ವರ್ಕ್‌ ಫ್ರಮ್‌ ಹೋಂ ವಿಸ್ತರಿಸಲಾಗುತ್ತದೆ ಎಂದಿದೆ.

ADVERTISEMENT

'ಕಚೇರಿಗೆ ಬಾರದೆಯೂ ಕಾರ್ಯಾಚರಿಸಬಹುದಾದ ಹುದ್ದೆಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಅನ್ವಯಿಸಿಕೊಳ್ಳುವ ಅವಕಾಶವನ್ನು 2021ರ ಜೂನ್‌ 30ರ ವರೆಗೂ ವಿಸ್ತರಿಸಲಾಗಿದೆ' ಎಂದು ಸುಂದರ್‌ ಪಿಚೈ ಉದ್ಯೋಗಿಗಳಿಗೆ ಇಮೇಲ್‌ ರವಾನಿಸಿರುವುದಾಗಿ ವರದಿಯಾಗಿದೆ.

ಗೂಗಲ್‌ನ ಪೂರ್ಣಾವಧಿ ಹಾಗೂ ಯೋಜನೆ ಆಧಾರಿತ ಉದ್ಯೋಗಿಗಳು ಸೇರಿದಂತೆ ಒಟ್ಟು 2,00,000 ಜನರಿಗೆ ಕಂಪನಿಯ ಬದಲಾದ ನಿರ್ಧಾರಕ್ಕೆ ಒಳಗಾಗಲಿದ್ದಾರೆ.

ಅಮೆಜಾನ್‌, ಆ್ಯಪಲ್‌ ಸೇರಿದಂತೆ ಜಗತ್ತಿನ ಬಹುತೇಕ ತಂತ್ರಜ್ಞಾನ ಕಂಪನಿಗಳು ಮುಂದಿನ ವರ್ಷ ಜನವರಿಗೆ ಕಚೇರಿಗೆ ಮರಳುವಂತೆ ಸೂಚಿಸಿವೆ. ಟ್ವಿಟರ್‌ ಉದ್ಯೋಗಿಗಳಿಗೇ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿದೆ. ಅವರು ಬಯಸಿದರೆ, ಕಂಪನಿಯೊಂದಿಗೆ ಕಾರ್ಯನಿರ್ವಹಿಸುವ ಅವಧಿ ಪೂರ್ಣ ಮನೆಯಿಂದಲೇ ಕೆಲಸ ಮಾಡಬಹುದು. ಫೇಸ್‌ಬುಕ್‌ ಸಹ ತನ್ನ 50,000 ಉದ್ಯೋಗಿಗಳಿಗೆ ಶಾಶ್ವತವಾಗಿ ಮನೆಯಿಂದಲೇ ಕಾರ್ಯಚರಿಸುವಂತೆ ಮಾಡಲು ಪ್ರಯತ್ನಿಸುತ್ತಿದೆ.

ಅಮೆರಿಕದಲ್ಲಿ ಒಟ್ಟು 42 ಲಕ್ಷಕ್ಕೂ ಅಧಿಕ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿವೆ ಹಾಗೂ 1,46,000 ಜನರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.