ADVERTISEMENT

ಗೂಗಲ್‌ನಿಂದ ಹೊಸ ಸೋಶಿಯಲ್‌ ನೆಟ್‌ವರ್ಕಿಂಗ್‌ ಆ್ಯಪ್‌ ’ಶೂಲೇಸ್‌’

ಏಜೆನ್ಸೀಸ್
Published 12 ಜುಲೈ 2019, 11:28 IST
Last Updated 12 ಜುಲೈ 2019, 11:28 IST
   

ಬೆಂಗಳೂರು: ಜಗತ್ತಿನ ಬಹುತೇಕ ಎಲ್ಲ ವಿಷಯಗಳನ್ನೂ ಒಡಲೊಳಗೆ ಸಂಗ್ರಹಿಸಿಕೊಂಡಿರುವ ವಿಶ್ವದ ಅತಿ ದೊಡ್ಡ ಅಂತರ್ಜಾಲ ಲೈಬ್ರರಿ ಗೂಗಲ್‌. ಈಗಾಗಲೇ ಸಂಚಾರ, ಹುಡುಕಾಟ ಹಾಗೂ ಅಧಿಕೃತ ಸಂದೇಶ ರವಾನೆಗಾಗಿ ಗೂಗಲ್‌ನ ವಿವಿಧ ಅಪ್ಲಿಕೇಷನ್‌ಗಳು ನಿತ್ಯದ ಬಳಕೆಯಲ್ಲಿ ಜತೆಯಾಗಿವೆ. ಈಗ ಸಂಸ್ಥೆ ಸಾಮಾಜಿಕ ಮಾಧ್ಯಮ ವ್ಯವಸ್ಥೆಯೊಂದನ್ನು ರೂಪಿಸುತ್ತಿರುವುದು ಗೂಗಲ್‌ ಪ್ರಿಯರ ಗಮನ ಸೆಳೆದಿದೆ.

ಗೂಗಲ್‌ ಇತಿಹಾಸದಲ್ಲಿ ಸಾಮಾಜಿಕ ಮಾಧ್ಯಮ ವ್ಯವಸ್ಥೆ ಗೊಂದಲಮಯವಾಗಿಯೇ ಇದೆ. ಗೂಗಲ್‌+ ಹಿಂದಿನ ಅಭಿವೃದ್ಧಿಗಳ ಪೈಕಿ ಯಶಸ್ಸು ಕಂಡ ವೇದಿಕೆಯಾಗಿತ್ತು. ಫೇಸ್‌ಬುಕ್‌ ಮತ್ತು ಟ್ವಿಟರ್ ಸ್ಪರ್ಧಾತ್ಮಕವಾಗಿ ಹೊಮ್ಮಲು ಪರೋಕ್ಷವಾಗಿ ಕಾರಣವಾಗಿದ್ದ ಗೂಗಲ್‌+ ತನ್ನನ್ನು ಸರಿಪಡಿಸಿಕೊಳ್ಳಲಾಗದೆ, ಏಪ್ರಿಲ್‌ನಲ್ಲಿ ಕಾರ್ಯ ಸ್ಥಗಿತಗೊಳಿಸಿತು. ಇದರೊಂದಿಗೆ ಹಲವರ ನೆನಪಿನಲ್ಲಿರುವ ಗೂಗಲ್‌ನ ಮತ್ತೊಂದು ಪ್ರಯತ್ನ ಸ್ಕೀಮರ್‌. ಸ್ಥಳೀಯವಾಗಿ ಸಂಪರ್ಕ ಸಾಧಿಸುವುದು, ಕಾರ್ಯ ಯೋಜನೆ ರೂಪಿಸಲು ಅನುವಾಗುವಂತೆ ರೂಪಿಸಲಾಗಿದ್ದ ಸ್ಕೀಮರ್‌ ಕಾರ್ಯಾರಂಭಗೊಂಡು ಎರಡೇ ವರ್ಷದಲ್ಲಿ ಸ್ಥಗಿತಗೊಂಡಿತು.

ಇದನ್ನೂ ಓದಿ:ಗೂಗಲ್ ಗುರುವಿಗೆ 20 ವರ್ಷ!

ADVERTISEMENT

ಮರಳಿ ಯತ್ನವ ಮಾಡು ಎಂಬಂತೆ ಗೂಗಲ್‌ ಸಾಮಾಜಿಕ ಸಂಪರ್ಕಕ್ಕಾಗಿ ಹೊಸದೊಂದು ಅಪ್ಲಿಕೇಷನ್‌ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ’ಶೂಲೇಸ್‌’ ಎಂದು ಹೆಸರಿಡಲಾಗಿರುವ ವೇದಿಕೆಯು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಆಸಕ್ತಿಗಳ ಆಧಾರದ ಮೇಲೆ ಸ್ಥಳೀಯವಾಗಿ ಸ್ನೇಹಿತರನ್ನು ಕಂಡುಕೊಳ್ಳಲು ಸಹಕಾರಿಯಾಗುವಂತೆ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ಹೊಸ ಪಟ್ಟಣಗಳಿಗೆ ತೆರಳುವವರು ಸಮಾನ ಆಸಕ್ತರನ್ನು ಗುರುತಿಸಿಕೊಳ್ಳುವುದು, ಸಮೀಪದಲ್ಲೇ ಇರುವ ವ್ಯಕ್ತಿಗಳ ಪರಿಚಯದಿಂದ ನೇರ ಭೇಟಿಗೂ ಶೂಲೇಸ್‌ ನೆರವಾಗಲಿದೆ.

ಖಾಸಗಿತನದ ಸುರಕ್ಷತೆಯ ಕಾರಣದಿಂದಲೇ ಗೂಗಲ್‌+ ಹಿನ್ನೆಡೆ ಅನುಭವಿಸಿತ್ತು. ಹೊಸ ವೇದಿಕೆಯು ಅದನ್ನೆಲ್ಲ ಪರಿಹರಿಸಿಕೊಂಡು ಹೊಸ ಅನುಭವ ನೀಡಲು ಸಜ್ಜಾಗುತ್ತಿದೆ. ಆದರೆ, ಪ್ರಸ್ತುತ ಶೂಲೇಸ್‌ ಅಮೆರಿಕದ ಕೆಲವು ನಗರಗಳಲ್ಲಿ ಮಾತ್ರ ಬಳಸಬಹುದಾಗಿದೆ. ಸದ್ಯ ಆಹ್ವಾನದ ಮೇರೆಗೆ ಮಾತ್ರವೇ ಬಳಕೆಗೆ ಅವಕಾಶ ನೀಡಲಾಗಿದೆ. ಗೂಗಲ್‌ ಅಕೌಂಟ್ ಹೊಂದಿರುವ ವ್ಯಕ್ತಿ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌, ಈ ಯಾವುದೇ ವೇದಿಕೆಯಲ್ಲಿ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ ಮುಂದುವರಿಯಬಹುದು.

ಗೂಗಲ್‌+ ಬಳಕೆದಾರರ ಪೈಕಿ 52.5 ದಶಲಕ್ಷ ಖಾತೆಗಳ ಸುರಕ್ಷತಾ ವ್ಯವಸ್ಥೆಗೆ ಹಾನಿಯಾಗಿದ್ದ ಕಾರಣ ಹಾಗೂ ಇಳಿಕೆಯಾದ ಬಳಕೆದಾರರ ಪ್ರಮಾಣದಿಂದಾಗಿ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಲಾಯಿತು. ಇದನ್ನೂ ಮುನ್ನ ಬಝ್ ಎಂಬ ಸಾಮಾಜಿಕ ಸಂಪರ್ಕ ವೇದಿಕೆಯ ಪ್ರಯೋಗ ನಡೆಸಿತ್ತು. 2010ರ ಫೆಬ್ರುವರಿ 9ರಂದು ಆರಂಭವಾಗಿದ್ದ ಬಝ್‌, ಒಂದೇ ವರ್ಷದಲ್ಲಿ ಕಾರ್ಯ ನಿಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.