ADVERTISEMENT

ಸಂಶೋಧನೆ ಮೇಲೆ ಹೂಡಿಕೆ ಹೆಚ್ಚಲಿ: ತಂತ್ರಜ್ಞಾನ ಸಲಹೆಗಾರ ಕುಮಾರ್‌ ರಂಗನಾಥನ್‌

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 20:54 IST
Last Updated 19 ನವೆಂಬರ್ 2020, 20:54 IST

ಬೆಂಗಳೂರು: ‘ಸಂಶೋಧನೆ ಮತ್ತು ಅಭಿವೃದ್ಧಿಯ (ಆರ್‌ಆ್ಯಂಡ್‌ಡಿ) ಮೇಲೆ ಮಾಡುವ ವೆಚ್ಚದಲ್ಲಿ ಏರಿಕೆ ಆಗಬೇಕು. ಆಗ ಮಾತ್ರವೇ ತಂತ್ರಜ್ಞಾನದಲ್ಲಿ ಆವಿಷ್ಕಾರ ಸಾಧ್ಯವಾಗಲಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ’ ಎಂದು ತಂತ್ರಜ್ಞಾನ ಸಲಹೆಗಾರ ಕುಮಾರ್‌ ರಂಗನಾಥನ್‌ ಅಭಿಪ್ರಾಯಪಟ್ಟರು.

‘ಸದ್ಯ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಮಾಡುತ್ತಿರುವ ವೆಚ್ಚವು ದೇಶದ ಒಟ್ಟಾರೆ ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 0.6–0.7ರಷ್ಟಿದೆ. ಜಪಾನ್‌ ಶೇ 3.2ರಷ್ಟು, ಯುಎಸ್‌ಎ ಶೇ 2.8 ಮತ್ತು ಚೀನಾ ಶೇ 2.1ರಷ್ಟು ವೆಚ್ಚ ಮಾಡುತ್ತಿವೆ. ಸಂಶೋಧನೆ ಮತ್ತು ಅಭಿವೃದ್ಧಿ ಮೇಲೆ ಅತಿ ಕಡಿಮೆ ವೆಚ್ಚ ಮಾಡುತ್ತಿರುವಾಗ ದೇಶ ಸೂಪರ್‌ ಪವರ್ ಆಗುವುದು ಸಾಧ್ಯವಿಲ್ಲ’ ಎಂದರು.

‘ಬೌದ್ಧಿಕ ಆಸ್ತಿಯ ಕುರಿತು ತಿಳಿವಳಿಕೆ ನೀಡುವ ಕೆಲಸ ಆಗಬೇಕಿದೆ. ಈ ಕುರಿತ ಜ್ಞಾನ ವೃದ್ಧಿಸುವಂತಹ ಶಿಕ್ಷಣ ಕ್ಷೇತ್ರಗಳು, ಗುಣಮಟ್ಟದ ಬೋಧಕ ವರ್ಗದ ಅಗತ್ಯವಿದೆ. ಸ್ನಾತಕೋತ್ತರ ಪದವಿಯ ಬಳಿಕ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ಮಧ್ಯೆ ಸಹಯೋಗ ಆಗಬೇಕಿದೆ. ಆ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ, ಬೌದ್ಧಿಕ ಆಸ್ತಿಯ (ಐಪಿ) ರಕ್ಷಣೆಯಂತಹ ವಿಷಯಗಳ ಮೇಲೆ ಕೆಲಸ ಮಾಡಬೇಕು’ ಎಂದರು.

ADVERTISEMENT

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯ ಪ್ರೊಫೆಸರ್ ತಮ್ಮಯ್ಯ ರಾಮಕೃಷ್ಣ ಅವರೂ ಸಂಶೋಧನೆ ಮೇಲೆಹೂಡಿಕೆ ಹೆಚ್ಚಾಗಬೇಕಿದೆ ಎಂದರು.

ಕನ್ಸ್ಯೂಮರ್‌ ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳು ಹಾಗೂಎಲೆಕ್ಟ್ರಾನಿಕ್ಸ್‌ ಜಗತ್ತಿನಲ್ಲಿ ಬೌದ್ಧಿಕ ಆಸ್ತಿಯ
ರಕ್ಷಣೆ ಕುರಿತು ಫಿಲಿಪ್ಸ್‌ ಎಲೆಕ್ಟ್ರಾನಿಕ್ಸ್‌ಇಂಡಿಯಾ ಲಿಮಿಟೆಡ್‌ನ ಐಪಿ ಸಲಹೆಗಾರ ಡಾ. ರವಿ ತುಮಕೂರು ಮಾತನಾಡಿದರು. ‘ಭವಿಷ್ಯದಲ್ಲಿ ವಿಷ್ಯುಯಲ್‌ ಎಕ್ಸ್‌ಪೀರಿಯನ್ಸ್‌, ಡೇಟಾ ಅನಲಿಟಿಕ್ಸ್‌, ಬ್ಲಾಕ್‌ಚೈನ್‌, ಕಾಗ್ನೆಟಿವ್ ಸೈನ್ಸ್‌ಗೆ ಸಂಬಂಧಿಸಿದಂತೆ ಉದ್ಯಮಗಳು ಹೆಚ್ಚಿನ ಗಮನ ನೀಡಲಿವೆ’ ಎಂದರು.

‘ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಬಿಸಿನೆಸ್‌ ವಾತಾವರಣದಲ್ಲಿ ಬೌದ್ಧಿಕ ಆಸ್ತಿ ಹಕ್ಕನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ.ತಂತ್ರಜ್ಞಾನವನ್ನು ಬಳಸಿಕೊಂಡು ಪೇಟೆಂಟ್‌ ಪರಿಶೀಲನೆ ನಡೆಸುವುದು ತ್ವರಿತವಾಗುವಂತೆ ಮಾಡಬೇಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.