ADVERTISEMENT

ಎಲ್. ವಿ. ಎಂ. 3: ಮತ್ತೊಂದು ಯಶಸ್ಸು!

ಬಿ.ಆರ್‌.ಗುರುಪ್ರಸಾದ್‌
Published 28 ಮಾರ್ಚ್ 2023, 19:30 IST
Last Updated 28 ಮಾರ್ಚ್ 2023, 19:30 IST
ಎಲ್. ವಿ. ಎಂ. 3ರ ಶಾಖಕವಚದ ಎರಡು ಹೋಳುಗಳ ನಡುವೆ ಇರುವ 36 ಒನ್ ವೆಬ್ ಉಪಗ್ರಹಗಳುಚಿತ್ರಕೃಪೆ: ಇಸ್ರೊ
ಎಲ್. ವಿ. ಎಂ. 3ರ ಶಾಖಕವಚದ ಎರಡು ಹೋಳುಗಳ ನಡುವೆ ಇರುವ 36 ಒನ್ ವೆಬ್ ಉಪಗ್ರಹಗಳುಚಿತ್ರಕೃಪೆ: ಇಸ್ರೊ   

ಕಳೆದ ಭಾನುವಾರ (ಮಾರ್ಚ್ 26, 2023) ‘ಇಸ್ರೊ’ದ ವಿಜ್ಞಾನಿ ಹಾಗೂ ಎಂಜಿನಿಯರ್‌ಗಳಿಗೆ ವಿಶೇಷ ದಿನ. ಏಕೆಂದರೆ ಆ ದಿನ ಬೆಳಿಗ್ಗೆ ಭಾರತ ಇದುವರೆವಿಗೂ ನಿರ್ಮಿಸಿರುವ ರಾಕೆಟ್ ವಾಹನಗಳಲ್ಲೇ ಅತಿ ಶಕ್ತಿಶಾಲಿಯಾದ ‘ಎಲ್ ವಿ ಎಂ 3’ (ಇದಕ್ಕೆ ‘ಜಿ. ಎಸ್. ಎಲ್. ವಿ. ಮಾರ್ಕ್ 3’ ಎಂಬ ಹೆಸರೂ ಇದೆ) ಜಾಗತಿಕ ಮಟ್ಟದಲ್ಲಿ ಸಂಪರ್ಕ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಒಂದಾದ ‘ಒನ್ ವೆಬ್’ ಸಂಸ್ಥೆಗೆ ಸೇರಿದೆ 36 ಉಪಗ್ರಹಗಳನ್ನು ಹೊತ್ತು ಉಡಾವಣೆಗೆ ಸಿದ್ಧವಾಗಿ ನಿಂತಿತ್ತು.

ಕಳೆದ ಅಕ್ಟೋಬರ್‌ನಲ್ಲಿ ಅದೇ ರಾಕೆಟ್ ವಾಹನವು 36 ‘ಒನ್ ವೆಬ್’ ಉಪಗ್ರಹಗಳನ್ನು ನಿಗದಿಯಾದ ಕಕ್ಷೆಗೆ ಯಶಸ್ವಿಯಾಗಿ ಹಾರಿಬಿಟ್ಟಿತ್ತು. ಆ ಅನುಭವ ತಮಗಿದ್ದರೂ ಉಪಗ್ರಹ ಉಡಾವಣಾ ಕಾರ್ಯದ ಸಂಕೀರ್ಣತೆಯ ಅರಿವಿದ್ದ ಇಸ್ರೊ ಸಮೂಹ ಅದೇ ಬಗೆಯ 36 ಉಪಗ್ರಹಗಳನ್ನು ಮತ್ತೆ ಹಾರಿಬಿಡುವುದಕ್ಕೆ ಮೊದಲು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿತ್ತು. ಮಾರ್ಚ್ 26ರಂದು ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ, ಸುಮಾರು 14 ಮಹಡಿಗಳ ಎತ್ತರವಿದ್ದ ‘ಎಲ್ ವಿ ಎಂ 3’ ಗುಡುಗುತ್ತಾ ಶ್ರೀಹರಿಕೋಟಾ ದ್ವೀಪದಲ್ಲಿರುವ ಸತೀಶ್ ಧವನ್ ಅಂತರಿಕ್ಷ ಕೇಂದ್ರದಲ್ಲಿನ ಎರಡನೇ ಉಡಾವಣಾ ವೇದಿಕೆಯಿಂದ ಮೇಲೇರಿತು. ಉಡಾವಣೆಯ ವೇಳೆಯಲ್ಲಿ ಸುಮಾರು 640 ಟನ್ (ಆರು ಲಕ್ಷ ನಲವತ್ತು ಸಾವಿರ ಕಿಲೋಗ್ರಾಂ!) ತೂಕವಿದ್ದ ಎಲ್. ವಿ. ಎಂ. 3 ರಾಕೆಟ್ ವಾಹನವು ಮೊದಲು ಸ್ವಲ್ಪ ನಿಧಾನವಾಗಿ ಮೇಲೇರಿದರೂ ನಂತರ ವೇಗವನ್ನು ತ್ವರಿತವಾಗಿ ಹೆಚ್ಚಿಸಿಕೊಳ್ಳುತ್ತಾ ಅಂತರಿಕ್ಷದತ್ತ ಸಾಗಲಾರಂಭಿಸಿತು. ಆ ವಾಹನದ ಚಲನೆಗೆ ಎರವಾದ ಎರಡು ‘ಬೂಸ್ಟರ್’ ರಾಕೆಟ್ಟುಗಳು ತಮ್ಮಲ್ಲಿದ್ದ ಘನರೂಪದ (ಸಾಲಿಡ್) ನೋದನಕಾರಿಗಳನ್ನು (ಅಂದರೆ ಇಂಧನ-ದಹನಾನುಕೂಲಿಗಳ ಮಿಶ್ರಣವನ್ನು) ಬಕಾಸುರನಂತೆ ಆ ವೇಳೆಯಲ್ಲಿ ಕಬಳಿಸುತ್ತಿದ್ದವು.

ಇವುಗಳ ಪ್ರಚಂಡ ಶಕ್ತಿಯೇ ಸಾಲದೆಂಬಂತೆ ‘ಎಲ್. ವಿ. ಎಂ. 3’ರ ಕೆಳಭಾಗದ ಮಧ್ಯದಲ್ಲಿರುವ ಎರಡು ‘ದ್ರವ’ ರಾಕೆಟ್ ಯಂತ್ರಗಳು ಜೀವತಳೆದು ರಾಕೆಟ್‌ನ ಚಲನೆಗೆ ತಾವೂ ಕೊಡುಗೆ ನೀಡಲಾರಂಭಿಸಿದವು. ಅನಂತರ ಮೊದಲಿಗೆ ಎರಡು ಬೂಸ್ಟರ್ ರಾಕೆಟ್ಟುಗಳು, ನಂತರ ಆ ರಾಕೆಟ್ ವಾಹನದ ಹೆಗಲಿನ ಮೇಲಿದ್ದ ಉಪಗ್ರಹಗಳನ್ನು ಚಿಪ್ಪಿನಂತೆ ಆವರಿಸಿದ್ದ ರಾಕೆಟ್‌ನ ‘ಶಾಖಕವಚ’ ಮತ್ತು ಆ ಬಳಿಕ ಎರಡು ‘ದ್ರವ’ರಾಕೆಟ್ ಯಂತ್ರಗಳನ್ನು ಹೊಂದಿದ್ದ ಹಂತ – ಇವೆಲ್ಲವೂ ಸಕಾಲಕ್ಕೆ ಬೇರ್ಪಟ್ಟು ಭೂಮಿಯತ್ತ ಧಾವಿಸಿದವು.

ಹೀಗೆ ಎಲ್. ವಿ. ಎಂ. 3 ಸಾಕಷ್ಟು ಹಗುರವಾದಂತೆ ಅದರ ಅಂತಿಮ ‘ಕ್ರಯೋಜನಿಕ್’ ಹಂತ ಕಾರ್ಯಾರಂಭ ಮಾಡಿತು. ದ್ರವಜಲಜನಕ (ಹೈಡ್ರೊಜನ್) ಅನ್ನು ಇಂಧನವಾಗಿ ಹಾಗೂ ದ್ರವ ಆಮ್ಲಜನಕವನ್ನು ದಹನಾನುಕೂಲಿ (ಆಕ್ಸಿಡೈಸರ್) ಆಗಿ ಬಳಸುವ ಇಂತಹ ಅತ್ಯಂತ ಸಂಕೀರ್ಣವಾದ ಹಾಗೂ ದಕ್ಷವಾದ ರಾಕೆಟ್ ಹಂತದ ತಂತ್ರಜ್ಞಾನವನ್ನು ಇಂದು ಕರಗತಮಾಡಿಕೊಂಡಿರುವ ಕೆಲವೇ ಬೆರಳಣಿಕೆಯ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಕೊನೆಗೆ ಆ ಹಂತವೂ ತನ್ನ ಕಾರ್ಯವನ್ನು ತೃಪ್ತಿಕರವಾಗಿ ಮುಗಿಸಿದಂತೆ ಅದರ ವೇಗ ಗಂಟೆಗೆ ಒಂದಲ್ಲ ಎರಡಲ್ಲ, ಸುಮಾರು 27 ಸಾವಿರ ಕಿಲೋಮೀಟರ್ ಗಳನ್ನು ತಲುಪಿತು. ಇದರೊಂದಿಗೇ ಆ ಹಂತ ಸುಮಾರು 450 ಕಿಲೋಮೀಟರ್ ಎತ್ತರದ ಕಕ್ಷೆಯನ್ನು ಪ್ರವೇಶಿಸಿತು. ನಂತರದ ಕೆಲ ಕ್ಷಣಗಳಲ್ಲೇ 36 ‘ಒನ್ ವೆಬ್’ ಉಪಗ್ರಹಗಳು ಗುಂಪುಗುಂಪಾಗಿ ಆ ಹಂತದಿಂದ ಬೇರ್ಪಟ್ಟವು. ಈ ರೀತಿ ‘ಎಲ್. ವಿ. ಎಂ. 3’ಯ ಆರನೆಯ ಯಾನ ಯಶಸ್ವಿಯಾಯಿತು. 2016ರಲ್ಲಿ ಉಪಗ್ರಹವೊಂದನ್ನು ಮೊದಲ ಬಾರಿ ಭೂಕಕ್ಷೆಗೆ ಕೊಂಡೊಯ್ದ ‘ಎಲ್. ವಿ. ಎಂ. 3’ರ ಇದುವರೆಗಿನ ಯಾನಗಳೆಲ್ಲವೂ ಯಶಸ್ವಿಯಾಗಿವೆ. ಇದು ಅಂತರಿಕ್ಷ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಎಷ್ಟೆಂಬುದನ್ನು ಸೂಚಿಸುತ್ತದೆ.

ADVERTISEMENT

ಕಳೆದ ಮೂರು ದಶಕಗಳಲ್ಲಿ ಪ್ರಚಂಡವಾದ ಯಶಸ್ಸನ್ನು ಕಂಡಿರುವ ಪಿ. ಎಸ್. ಎಲ್. ವಿ. ರಾಕೆಟ್ ವಾಹನಕ್ಕೆ ಇಂದು ‘ಭಾರತದ ಕಾರ್ಯಾಶ್ವ ರಾಕೆಟ್’ ಎಂಬ ಹೆಸರಿದೆ. ಅದಕ್ಕಿಂತ ಸುಮಾರು ನಾಲ್ಕು ಪಟ್ಟು ಸಾಮರ್ಥ್ಯವುಳ್ಳ ಈ ’ಎಲ್ ವಿ ಎಂ 3’ ಭಾರತದ ’ಹೊಸ ಕಾರ್ಯಾಶ್ವ’ ರಾಕೆಟ್ಟಾಗಿ ಹೊರಹೊಮ್ಮುವ ಲಕ್ಷಣಗಳು ಇದೀಗ ಗೋಚರಿಸುತ್ತಿರುವಂತೆ ಕಾಣುತ್ತದೆ.

ಕಳೆದ ವಾರದ 36 ಉಪಗ್ರಹಗಳ ಉಡಾವಣೆಯೂ ಸೇರಿದಂತೆ ಇದುವರೆವಿಗೂ ಭಾರತ 34 ರಾಷ್ಟ್ರಗಳಿಗೆ ಸೇರಿದ ಒಟ್ಟು 422 ವಿದೇಶಿ ಉಪಗ್ರಹಗಳನ್ನು ಉಡಾಯಿಸಿದೆ. ಅವುಗಳಲ್ಲಿ ಬಹುತೇಕವನ್ನು ಉಡಾಯಿಸಿದ್ದು ಪಿ. ಎಸ್. ಎಲ್. ವಿ. 2017ರ ಫೆಬ್ರುವರಿಯಲ್ಲಿ ಆ ರಾಕೆಟ್ ವಾಹನವು 104 ಉಪಗ್ರಹಗಳನ್ನು ತನ್ನ ಒಂದೇ ಯಾನದಲ್ಲಿ ಉಡಾಯಿಸುವ ಮೂಲಕ ವಿಶ್ವದಾಖಲೆಯೊಂದನ್ನು ನಿರ್ಮಿಸಿತ್ತು ಎಂಬುದನ್ನು ನಾವಿಲ್ಲಿ ನೆನೆಯಬಹುದು. ಕಳೆದ ಐದು ತಿಂಗಳ ಸುಮಾರಿನಲ್ಲಿ 72 ವಿದೇಶಿ ಉಪಗ್ರಹಗಳನ್ನು ತನ್ನ ಇತ್ತೀಚಿನ ಎರಡು ಯಾನಗಳಲ್ಲಿ ಅದಕ್ಕಿಂತ ಪ್ರಬಲವಾದ ‘ಎಲ್. ವಿ. ಎಂ. 3’ ಉಡಾಯಿಸಿದೆ. ಮಾನವ ಗಗನಯಾತ್ರಿಗಳನ್ನು ಭೂಕಕ್ಷೆಗೆ ಭಾರತದ ನೆಲದಿಂದ ಹಾರಿಬಿಡುವ ಉದ್ದೇಶ ಹೊಂದಿರುವ ಗಗನಯಾನ ಕಾರ್ಯಕ್ರಮದ ನೌಕೆಯನ್ನು ಹಾರಿಬಿಡುವುದೂ ಇದೇ ‘ಎಲ್. ವಿ. ಎಂ. 3’ ರಾಕೆಟ್ ವಾಹನವೇ ಆಗಿದೆ. ಉಪಗ್ರಹ ಉಡಾವಣಾ ರಾಕೆಟ್ ನಂತಹ ಸಂಕೀರ್ಣ ತಾಂತ್ರಿಕ ಸಾಧನದ ನಿರ್ಮಾಣದಲ್ಲಿ ಭಾರತ ಬಹುಮಟ್ಟಿಗೆ ಸ್ವಪ್ರಯತ್ನದಿಂದ ಸಾಧಿಸಿರುವ ಕಾರ್ಯ ‘ಎಲ್. ವಿ. ಎಂ. 3’ ವಾಹನದ ಇತ್ತೀಚಿನ ಯಶಸ್ಸಿನಿಂದ ಹೊರಜಗತ್ತಿಗೆ ಮತ್ತೊಮ್ಮೆ ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಲ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.