ADVERTISEMENT

ಅಡಿಕೆ ಚೀಲ ಸಾಗಿಸಲು ‘ಲಿಫ್ಟ್‌’

ಗಾಣಧಾಳು ಶ್ರೀಕಂಠ
Published 2 ಫೆಬ್ರುವರಿ 2021, 19:30 IST
Last Updated 2 ಫೆಬ್ರುವರಿ 2021, 19:30 IST
ಲಿಫ್ಟ್‌ನಲ್ಲಿ ಚೀಲವನ್ನು ಮೇಲಕ್ಕೆ ಸಾಗಿಸುತ್ತಿರುವ ದೃಶ್ಯ
ಲಿಫ್ಟ್‌ನಲ್ಲಿ ಚೀಲವನ್ನು ಮೇಲಕ್ಕೆ ಸಾಗಿಸುತ್ತಿರುವ ದೃಶ್ಯ   

ಕೃಷಿಯಲ್ಲಿ ಬೆಳೆಗಳನ್ನು ಕೊಯ್ದ ಮೇಲೆ ಚೀಲಕ್ಕೆ ತುಂಬಿ ಅದನ್ನು ಮನೆಗೆ ಸಾಗಿಸಿ, ಅಟ್ಟಕ್ಕೆ ಏರಿಸುವುದು ಸಾಹಸದ ಕೆಲಸ. ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ಕಾಲದಲ್ಲಿ ಇದು ಇನ್ನೂ ಸವಾಲಿನ ಕೆಲಸವೇ. ಬೇರೆ ಎಲ್ಲ ಕೆಲಸಗಳಿಗೂ ಹಾಗೂ ಹೀಗೂ ಕಾರ್ಮಿಕರನ್ನು ಹೊಂದಿಸಿಬಿಡಬಹುದು. ಆದರೆ, ಮನೆ ಎದುರಿಗೆ ಬಂದ ಚೀಲಗಳನ್ನು ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ಸಾಗಿಸುವುದಕ್ಕೆ ಕಾರ್ಮಿಕರನ್ನು ಹೊಂದಿಸುವುದೇ ಕಷ್ಟ..!

ಇದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲೆಯ ಮಾಡಾವು ಗ್ರಾಮದ ಕೃಷಿಕ ರಾಜೇಶ್‌ ಅವರು ನೂರು ಕೆ.ಜಿ. ಅಡಿಕೆಚೀಲವನ್ನು ನೆಲದಿಂದ 12ರಿಂದ 13 ಅಡಿ ಎತ್ತರದ ಅಟ್ಟ/ಮಹಡಿವರೆಗೂ ಸರಾಗವಾಗಿ ಸಾಗಿಸುವಂತಹ ಮೋಟಾರ್ ಚಾಲಿತ ಲಿಫ್ಟ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರದಲ್ಲಿ ಅಡಿಕೆ ಚೀಲವಷ್ಟೇ ಅಲ್ಲ, 100 ಕೆ.ಜಿ.ವರೆಗಿನ ಭಾರದ ಯಾವುದೇ ವಸ್ತುವನ್ನು ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ಸುಲಭವಾಗಿ ಸಾಗಿಸಬಹುದು.

ಹೀಗಿದೆ ಉಪಕರಣದ ವಿನ್ಯಾಸ
ಗಟ್ಟಿಯಾದ ಕಬ್ಬಿಣದಿಂದ ಮಾಡಿದ ತಲೆಕೆಳಗಾದ ಇಂಗ್ಲಿಷ್ ‘L’ ಆಕಾರದ ಸ್ಟ್ಯಾಂಡ್, ಒಂದು ಎಚ್‌ಪಿ ಮೋಟಾರ್, ಟ್ರಾಲಿ ಜತೆಗೆ ಹೋಯಿಸ್ಟ್‌ ರೋಪ್‌ (ಕ್ರೇನ್‌ಗಳಲ್ಲಿ ಬಳಸುವಂತಹ ಹಿಗ್ಗುವ–ಕುಗ್ಗವ ವೈರ್/ಹಗ್ಗ), ಒಂದು ಉಕ್ಕಿನ ಕೊಕ್ಕೆ ಇವು ಉಪಕರಣಕ್ಕೆ ಬಳಸಿರುವ ಬಿಡಿ ಭಾಗಗಳು.

ADVERTISEMENT

ಉಲ್ಟಾ ‘ಎಲ್’ ಆಕಾರದ ಸ್ಟ್ಯಾಂಡ್ ಅನ್ನು ಮಹಡಿಯ ಒಂದು ಗೋಡೆಗೆ ಭದ್ರವಾಗಿ ಜೋಡಿಸುತ್ತಾರೆ. ಸ್ಟ್ಯಾಂಡ್‌ನ ಮೇಲ್ಭಾಗದಲ್ಲಿರುವ ತುದಿಗೆ ಮೋಟಾರ್ ಜೋಡಿಸಿದ್ದಾರೆ. ಮೋಟಾರ್‌ ಭಾಗದಿಂದ ಟ್ರಾಲಿ ಸಹಿತ ಹೋಯಿಸ್ಟ್‌ ವೈರ್‌ ಅಳವಡಿಕೆ. ಅದೇ ವೈರ್‌ನ ಒಂದು ತುದಿಗೆ ಕೊಕ್ಕೆಯಂತಹ ವಸ್ತುವಿನ ಜೋಡಣೆ. ಮೋಟಾರ್‌ನಿಂದ ಒಂದು ವೈರನ್ನು ಸ್ವಿಚ್‌ಗಳಿರುವ ನಿಯಂತ್ರಕ(ಕಂಟ್ರೋಲರ್‌) ಸೇರಿಸಿದ್ದಾರೆ. ಆ ನಿಯಂತ್ರಕದಲ್ಲಿ ಚೀಲವನ್ನು ಮೇಲೆತ್ತಲು ಮತ್ತು ಕೆಳಗಿಳಿಸಲು ಎರಡು ಗುಂಡಿಗಳಿವೆ.

ಸಾಧನದ ಕಾರ್ಯವಿಧಾನ
ಈ ಯಂತ್ರದ ಬಳಕೆಗೆ ಇಬ್ಬರು ಅಗತ್ಯ. ಒಬ್ಬರು ಕೆಳಗೆ ನಿಂತು ಹೋಯಿಸ್ಟ್ ವೈರ್ ತುದಿಯ ಕೊಕ್ಕೆಗೆ ಚೀಲವನ್ನು ಸಿಕ್ಕಿಸಬೇಕು. ಮೇಲೆ ನಿಂತವರು, ಮೋಟಾರ್ ಸ್ವಿಚ್ ಆನ್ ಮಾಡಿ, ನಿಯಂತ್ರಕದಲ್ಲಿರುವ ಮೇಲೆತ್ತುವ ಗುಂಡಿಯನ್ನು ಒತ್ತಬೇಕು. ಆಗ ಹೋಯಿಸ್ಟ್ ರೋಪ್‌ ಚೀಲವನ್ನು ಮೇಲಕ್ಕೆ ಸಾಗಿಸುತ್ತದೆ.

‘ಚೀಲ ಎತ್ತುವಾಗ ನಡುವೆ ವಿದ್ಯುತ್‌ ಕೈ ಕೊಟ್ಟರೆ ಚೀಲ ಕೆಳಗಿಳಿಯುವುದಿಲ್ಲ. ಬದಲಿಗೆ ನಿಂತ ಜಾಗದಲ್ಲೇ ಇರುತ್ತದೆ. ವಿದ್ಯುತ್‌ ಬಂದ ನಂತರವೂ, ನಿಯಂತ್ರಕದಲ್ಲಿನ ಸ್ವಿಚ್‌ ಒತ್ತಿದ ನಂತರವೇ ಚೀಲ ಮೇಲಕ್ಕೆ / ಕೆಳಕ್ಕೆ ಹೋಗುತ್ತದೆ’ ಎನ್ನುತ್ತಾರೆ ಯಂತ್ರ ಅಭಿವೃದ್ಧಿಪಡಿಸಿರುವ ರಾಜೇಶ್.

ಡಿಪ್ಲೊಮೊ ಮೆಕ್ಯಾನಿಕಲ್ ಓದಿರುವ ಇವರು, 2010ರಲ್ಲಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರದ್ದು ಕ್ರೇನ್‌ಗಳೊಂದಿಗೆ ಕಾರ್ಯನಿರ್ವಹಣೆ. ಕೆಲವು ವರ್ಷಗಳ ನಂತರ ಉದ್ಯೋಗ ಬಿಟ್ಟು ಊರು ಸೇರಿ, ಕೃಷಿ ಮಾಡುತ್ತಾ, ಕ್ರೇನ್‌ನಲ್ಲಿ ಬಳಸುವ ತಂತ್ರಜ್ಞಾನವನ್ನು ಉಪಯೋಗಿಸಿ, ಕೃಷಿಕರಿಗೆ ಅನುಕೂಲವಾಗುವ ಈ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ.

ಚೀಲ ಮೇಲೆತ್ತುವ ಮೋಟಾರ್ ಚಾಲಿತ ಲಿಫ್ಟ್

ಏನನ್ನೂ ಸಾಗಿಸಬಹುದು
ಕಾರ್ಮಿಕರ ಕೊರತೆಯಿಂದಾಗಿ ತಮ್ಮ ಮನೆಯಲ್ಲಿ ಅಡಿಕೆಚೀಲಗಳ ಸಾಗಾಟಕ್ಕೆ ತೊಂದರೆಯಾದಾಗ, ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. 2016ರಲ್ಲಿ ತಯಾರಾದ ಈ ಯಂತ್ರವನ್ನು ಸುಮಾರು 2 ವರ್ಷ ತಮ್ಮ ಮನೆಯಲ್ಲೇ ಬಳಸಿ ನೋಡಿದ ನಂತರ, ಬೇರೆ ರೈತರಿಗೂ ಮಾಡಿಕೊಟ್ಟಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30ರಿಂದ 35 ಮಂದಿ ಅಡಿಕೆಕೃಷಿಕರು ಈ ಲಿಫ್ಟ್ ಬಳಸುತ್ತಿದ್ದಾರೆ.

‘ಈ ಯಂತ್ರದಿಂದ ಅಡಿಕೆ ಚೀಲವಷ್ಟೇ ಅಲ್ಲ, ಯಾವುದೇ ಭಾರದ ವಸ್ತುಗಳನ್ನು ಸಾಗಿಸಬಹುದು. ಹೀಗಾಗಿ ಕೆಲವು ಕಟ್ಟಡ ನಿರ್ಮಾಣ ಮಾಡುವವರು ಕಲ್ಲು, ಸಿಮೆಂಟ್ ಮತ್ತಿತರ ಭಾರದ ವಸ್ತುಗಳನ್ನು ಮೇಲಕ್ಕೆ ಸಾಗಿಸಲು ಈ ಯಂತ್ರವನ್ನು ಬಳಸುತ್ತಿದ್ದಾರೆ’ ಎನ್ನುತ್ತಾರೆ ರಾಜೇಶ್.

ಈ ಯಂತ್ರದ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಬಹುದು: 9008416679

ಚಿತ್ರ ಹಾಗೂ ವಿಡಿಯೊ ಕೃಪೆ: ರಾಜೇಶ್ ಮಾಡಾವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.