ADVERTISEMENT

ಮೈಕ್ರೊಸಾಫ್ಟ್‌ನ ಓದಿ ಹೇಳುವ ತಂತ್ರಜ್ಞಾನ; ಹಿಂದಿ, ಭಾರತೀಯ ಇಂಗ್ಲಿಷ್ ಸೇರ್ಪಡೆ

ನ್ಯೂರಲ್ ಟಿಟಿಎಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಆಗಸ್ಟ್ 2020, 16:23 IST
Last Updated 25 ಆಗಸ್ಟ್ 2020, 16:23 IST
ನ್ಯೂರಲ್‌ ಟಿಟಿಎಸ್–ಟೆಕ್ಸ್ಟ್‌ ಟು ಸ್ಪೀಚ್: ಚಿತ್ರ ಕೃಪೆ: ಮೈಕ್ರೊಸಾಫ್ಟ್ ಬ್ಲಾಗ್
ನ್ಯೂರಲ್‌ ಟಿಟಿಎಸ್–ಟೆಕ್ಸ್ಟ್‌ ಟು ಸ್ಪೀಚ್: ಚಿತ್ರ ಕೃಪೆ: ಮೈಕ್ರೊಸಾಫ್ಟ್ ಬ್ಲಾಗ್   

ಬೆಂಗಳೂರು: ಅಕ್ಷರಗಳನ್ನು ಮಾತಿನ ರೂಪಕ್ಕೆ ಪರಿವರ್ತಿಸುವ (ನ್ಯೂರಲ್‌ ಟಿಟಿಎಸ್–ಟೆಕ್ಸ್ಟ್‌ ಟು ಸ್ಪೀಚ್) ಸೇವೆಯಲ್ಲಿ ಭಾರತೀಯ ಶೈಲಿಯ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳನ್ನು ಸೇರಿಸಿರುವುದಾಗಿ ಮೈಕ್ರೊಸಾಫ್ಟ್ ಇಂಡಿಯಾ ಪ್ರಕಟಿಸಿದೆ.

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಗುಣಮಟ್ಟದ ಆಡಿಯೊ ಸೇವೆಗೆ ಹೊಸದಾಗಿ 15 ಪ್ರಾಂತೀಯ ಭಾಷೆಗಳನ್ನು ಸೇರಿಸಲಾಗಿದ್ದು, ಅದರಲ್ಲಿ ಭಾರತದ ಎರಡು ಭಾಷೆಗಳೂ ಸೇರಿವೆ. ಮೈಕ್ರೊಸಾಫ್ಟ್‌ನ ಅಝ್ಯೂರ್‌ ಸಂಶೋಧನಾ ವಿಭಾಗವು ಅತ್ಯಂತ ಸಹಜವಾಗಿ ಧ್ವನಿ ಹೊರಡಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಿದೆ. ಧ್ವನಿಯಲ್ಲಿ ಆಯ್ಕೆ, ಸ್ವಯಂ ನಿಯಂತ್ರಣದಂತಹ ಹಲವು ಸೇವೆಗಳನ್ನು ಒಳಗೊಂಡಿದೆ.

ನೀಡುವ ಅಕ್ಷರಗಳನ್ನು ಮನುಷ್ಯನ ಧ್ವನಿಯಷ್ಟೇ ಸಹಜವಾಗಿ ಓದಿ ಹೇಳುವ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಧ್ವನಿಯ ಏರಿಳಿತಗಳು, ಅಗತ್ಯ ಇರುವ ಕಡೆ ಒತ್ತಿ ಆಡುವ ನುಡಿಗಳಿಗೆ ಹೊಂದಿಕೆಯಾಗುವಂತೆ ಮಾಡುವುದೇ ನ್ಯೂರಲ್‌ ಟಿಟಿಎಸ್‌ನ ಗುರಿಯಾಗಿದೆ. ದೂರಸಂಪರ್ಕ, ಮಾಧ್ಯಮ, ಮನರಂಜನೆ, ರಿಟೇಲ್‌, ತಯಾರಿಕೆ ಹಾಗೂ ಉತ್ಪನ್ನ ಮತ್ತು ಸೇವೆಗಳ ಅಭಿವೃದ್ಧಿ ವಲಯಗಳಲ್ಲಿ ಗ್ರಾಹಕರೊಂದಿಗೆ ಸಂವಹನ ನಡೆಸಲು ಸೂಕ್ತವಾಗುವ ರೀತಿಯಲ್ಲಿ ನ್ಯೂರಲ್‌ ಟಿಟಿಎಸ್‌ ಅಭಿವೃದ್ಧಿಯಾಗಿದೆ. ಭಾರತದ ಬಿಸಿನೆಸ್‌ ಟು ಬಿಸಿನೆಟ್‌ ಆನ್‌ಲೈನ್ ಮಾರಾಟ ವೇದಿಕೆ ಉಡಾನ್‌ ಟೆಕ್ಸ್ಟ್‌ ಟು ಸ್ಪೀಚ್‌ ಬಳಸುತ್ತಿದೆ.

ADVERTISEMENT

'ಇಂಗ್ಲಿಷ್‌ (ಭಾರತೀಯ ಶೈಲಿ) ಮತ್ತು ಹಿಂದಿ ಸೇರ್ಪಡೆಯು ಭಾರತದಲ್ಲಿ ವೈಯಕ್ತಿಕ ಹಾಗೂ ವಾಣಿಜ್ಯ ಬಳಕೆಗೆ ಧ್ವನಿ ಆಧಾರಿತ ಸೇವೆಗಳನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ನಮ್ಮ ನಿರಂತರ ಬದ್ಧತೆಯನ್ನು ಪ್ರದರ್ಶಿಸಿರುವುದಾಗಿ' ಮೈಕ್ರೊಸಾಫ್ಟ್‌ ಇಂಡಿಯಾದ ಜನರಲ್ ಮ್ಯಾನೇಜರ್‌ ಸುಂದರ್‌ ಶ್ರೀನಿವಾಸನ್‌ ಹೇಳಿದ್ದಾರೆ.

ಮೈಕ್ರೊಸಾಫ್ಟ್‌ನ ನ್ಯೂರಲ್‌ ಟಿಟಿಎಸ್‌ ಮೂಲಕ ಚಾಟ್‌ಬಾಟ್ಸ್‌ ಹಾಗೂ ವರ್ಚುವಲ್‌ ಅಸಿಸ್ಟಂಟ್‌ಗಳೊಂದಿಗೆ ಸಂವಹನ ಮತ್ತಷ್ಟು ಸಹಜವಾಗಲಿದೆ. ಇ–ಬುಕ್‌ಗಳನ್ನು ಆಡಿಯೊ ಬುಕ್‌ಗಳಾಗಿ ಪರಿವರ್ತಿಸಲು, ವಾಹನಗಳ ಮಾರ್ಗಸೂಚಿ ವ್ಯವಸ್ಥೆಗಳಲ್ಲಿಯೂ ಬಳಕೆ ಮಾಡುವ ಪ್ರಯತ್ನ ಮುಂದುವರಿದಿದೆ.

ಸೇರಿಸಲಾಗಿರುವ ಇತರೆ ಭಾಷೆಗಳು: ಅರಾಬಿಕ್‌ (ಈಜಿಪ್ಟ್‌ ಮತ್ತು ಸೌದಿ ಅರೇಬಿಯಾ), ಡ್ಯಾನಿಷ್, ಫಿನಿಷ್, ಕ್ಯಾಟಲಾನ್‌, ಪಾಲಿಷ್, ಡಚ್‌, ಪೋರ್ಚುಗೀಸ್, ರಷ್ಯನ್‌, ಥಾಯ್‌, ಸ್ವೀಡಿಷ್, ಚೈನೀಸ್‌. ಪ್ರಸ್ತುತ ಮೈಕ್ರೊಸಾಫ್ಟ್ ಟಿಟಿಎಸ್‌ 110 ಧ್ವನಿಗಳು ಹಾಗೂ 45 ಭಾಷೆಗಳನ್ನು ಅಳವಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.