ADVERTISEMENT

ತಂತ್ರಜ್ಞಾನ: ‘ಎಐ’ ಕಾಲದ ಜಾಹೀರಾತು ಜಂಜಡ

ಕೃಷ್ಣ ಭಟ್ಟ
Published 27 ಮೇ 2025, 16:22 IST
Last Updated 27 ಮೇ 2025, 16:22 IST
   

ಗೂಗಲ್ ಸರ್ಚ್‌ನಲ್ಲಿ ಜನರು ಹುಡುಕಾಟ ನಡೆಸಿ, ಅಲ್ಲಿಂದ ಜನರು ಬೇರೆ ಬೇರೆ ವೆಬ್‌ಸೈಟ್‌ಗಳಿಗೆ ಹೋಗಿ ಅಲ್ಲಿ ಮಾಡುವ ಖರೀದಿ ಅಥವಾ ಇನ್ನಿತರ ಚಟುವಟಿಕೆಗಳು ಈವರೆಗೆ ಅಪಾರ ಸಂಖ್ಯೆಯ ಡೇಟಾ ಸೃಷ್ಟಿ ಮಾಡುತ್ತಿತ್ತು. ಅಷ್ಟೇ ಅಲ್ಲ, ಅದರಿಂದ ಗೂಗಲ್ ಹಾಗೂ ಇ-ಕಾಮರ್ಸ್‌ ಕಂಪನಿಗಳು ಅಪಾರ ಲಾಭ ಮಾಡಿಕೊಳ್ಳುತ್ತಿದ್ದವು. ಈ ಡೇಟಾದಿಂದ ಇಡೀ ಇಂಟರ್ನೆಟ್ ಉದ್ಯಮಕ್ಕೆ ಲಾಭವಾಗುತ್ತಿತ್ತು. ಗೂಗಲ್ ನಮಗೆ ಉಚಿತವಾಗಿ ಒದಗಿಸಿಕೊಡುವ ಗೂಗಲ್ ಸರ್ಚ್ ನಮ್ಮ ಇಡೀ ನಡೆ–ನುಡಿಯನ್ನು ಗಮನಿಸುತ್ತಿತ್ತು ಮತ್ತು ವಿಶ್ಲೇಷಿಸುತ್ತಿತ್ತು. ಆ ಡೇಟಾವನ್ನು ಜಾಹೀರಾತು ಕೊಡುವವರಿಗೆ ವಿವಿಧ ರೂಪದಲ್ಲಿ ಕೊಡುತ್ತಿತ್ತು.
ಆದರೆ, ಈಗ ಈ ಇಡೀ ವ್ಯವಸ್ಥೆ ಬದಲಾಗಿದೆ!

ಜನರು ಎಐ ಮೋಡ್‌ಗೆ ಬದಲಾಗುತ್ತಿದ್ದಾರೆ. ಗೂಗಲ್ ಕೂಡ ‘ಎಐ ಓವರ್‌ವ್ಯೂ’ ಶುರು ಮಾಡಿದೆ. ಅಂದರೆ, ನಾವು ಏನನ್ನಾದರೂ ಹುಡುಕಾಟ ನಡೆಸಿದರೆ, ಮೊದಲು ನಮ್ಮ ಹುಡುಕಾಟದ ಫಲಿತಾಂಶ ಸಾರಾಂಶರೂಪದಲ್ಲಿ ಬಂದು ಕುಳಿತಿರುತ್ತದೆ. ಆಮೇಲೆ, ಅದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳ ಲಿಂಕ್‌ಗಳು ಕಾಣಿಸಿಕೊಳ್ಳುತ್ತವೆ. ಮೊದಲು ಈ ವೆಬ್‌ಸೈಟ್‌ಗಳೇ ಮೊದಲು ಬರುತ್ತಿದ್ದವು. ನಾವು ಈ ವೆಬ್‌ಸೈಟ್‌ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಅದನ್ನು ಆಧರಿಸಿ ಇಡೀ ಇಂಟರ್ನೆಟ್ ಜಾಹೀರಾತು ಉದ್ಯಮ ನಡೆಯುತ್ತಿತ್ತು. ಈಗ ಮೊದಲು ಎಐ ವಿವರಣೆ ಕೊಡುವುದರಿಂದ ನಾವು ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ, ಎಐ ಸಾರಾಂಶ ರೂಪದಲ್ಲಿ ಕೊಟ್ಟ ಮಾಹಿತಿಯನ್ನಷ್ಟೇ ಓದಿಕೊಂಡು ಹೋಗುತ್ತೇವೆ.

ಇನ್ನೂ ಮುಂದುವರಿದು, ಹೊಸ ತಲೆಮಾರಿನ ಜನರಿಗಾಗಿ ಎಐ ಮೋಡ್ ಅನ್ನು ಆರಂಭಿಸುತ್ತೇವೆ ಎಂದು ಗೂಗಲ್ ಹೇಳಿಕೊಂಡಿದೆ. ಅಂದರೆ, ಈಗ ವಿವಿಧ ಟ್ಯಾಬ್‌ಗಳಿಗೂ ಮೊದಲೇ ‘ಎಐ ಮೋಡ್’ ಎಂಬ ಟ್ಯಾಬ್ ಇರುತ್ತದೆ. ಅಲ್ಲೇ ನಮ್ಮ ಹುಡುಕಾಟದ ಫಲಿತಾಂಶ ಸಿಗುತ್ತದೆ. ಅಲ್ಲದೆ, ಅಲ್ಲಿ ವೆಬ್‌ಸೈಟ್‌ಗಳ ಉಲ್ಲೇಖ ಇರುವುದಿಲ್ಲ. ಬರಿ ಮಾಹಿತಿಯಷ್ಟೇ ಇರುತ್ತದೆ. ಅಲ್ಲಿಂದ ನಾವು ಇನ್ನಷ್ಟು ಮಾಹಿತಿ ಬೇಕೆಂದಾದರೆ, ಲಿಂಕ್ ಕ್ಲಿಕ್ ಮಾಡಿ ಬೇರೆ ವೆಬ್‌ಸೈಟ್‌ಗೆ ಹೋಗುವ ಪ್ರಮೇಯ ಇರುವುದಿಲ್ಲ. ಎಐ ಕೊಟ್ಟ ಮಾಹಿತಿಯನ್ನು ಆಧರಿಸಿ ನಾವು ಮುಂದೆ ಏನು ಮಾಡಿದೆವು ಎಂಬುದು ಗೂಗಲ್‌ ಆಗಲೀ ಅಥವಾ ಇತರ ಸರ್ಚ್ ಇಂಜಿನ್‌ಗಳಿಗೆ ಲೆಕ್ಕಕ್ಕೆ ಸಿಗುವುದಿಲ್ಲ. ನಾವು ನೇರವಾಗಿ ಇ-ಕಾಮರ್ಸ್ ವೆಬ್‌ಸೈಟ್‌ಗೆ ಹೋಗಿ ಉತ್ಪನ್ನ ಖರೀದಿ ಮಾಡಿರಬಹುದು. ಅಥವಾ ಎಲೆಕ್ಟ್ರಿಕ್ ಶಾಪ್‌ಗೆ ಹೋಗಿ ಏನನ್ನೋ ಖರೀದಿ ಮಾಡಿರಬಹುದು. ಇಲ್ಲಿ ಹುಡುಕಾಟ ಮತ್ತು ನಮ್ಮ ವರ್ತನೆಯ ಮಧ್ಯೆ ಲಿಂಕ್ ಅಷ್ಟು ನಿಖರವಾಗಿ ಸಿಗುವುದಿಲ್ಲ.
ಈ ಎಐ ಸರ್ಚ್ ಎಂಬುದು ಶೇ 10ರಷ್ಟು ದರದಲ್ಲಿ ಏರಿಕೆ ಕಾಣುತ್ತಿದೆಯಂತೆ. ಬಹುಶಃ ಮುಂದಿನ ದಿನಗಳಲ್ಲಿ ಈ ವೇಗ ಇನ್ನಷ್ಟು ಏರಿಕೆಯಾಗಬಹುದು. ಜನ ಸಾಂಪ್ರದಾಯಿಕ ಸರ್ಚ್ ಎಂಜಿನ್‌ಗಳನ್ನೇ ಪೂರ್ತಿ ಕೈಬಿಟ್ಟು, ಸೀದಾ ಎಐ ಬಳಿಯೇ ಮಾಹಿತಿ ಕೇಳಬಹುದು. ಬ್ರೌಸರ್ ತೆರೆಯುವ ಸನ್ನಿವೇಶವೇ ಕಡಿಮೆಯಾಗಬಹುದು!

ADVERTISEMENT

ಹಾಗಾದರೆ, ಜಾಹೀರಾತು ಕೊಡುವವರಿಗೆ ನಮ್ಮ ಡೇಟಾ, ನಮ್ಮ ಕುಕೀಸ್ ಎಲ್ಲಿಂದ ಸಿಗಬೇಕು? ಅದನ್ನು ಅವರು ವಿಶ್ಲೇಷಣೆ ಮಾಡಿ, ನಮ್ಮ ಆಸಕ್ತಿ-ಅನಾಸಕ್ತಿಗಳನ್ನು ಅಧ್ಯಯನ ಮಾಡಿ ಅದನ್ನು ಅವರು ತಮ್ಮ ಉತ್ಪನ್ನಗಳಲ್ಲಿ ಅಳವಡಿಸಿಕೊಳ್ಳುವುದು ಹೇಗೆ? ಅದರಿಂದ ನೇರವಾಗಿಯೂ ಪರೋಕ್ಷವಾಗಿಯೂ ಹಣ ಮಾಡಿಕೊಳ್ಳುವುದು ಹೇಗೆ?

ನಾವು ಈಗಂತೂ ಏನೋ ಒಂದು ವಿಷಯದ ಬಗ್ಗೆ ಹುಡುಕಿದರೆ, ಮರುಕ್ಷಣದಿಂದಲೇ ಯಾವ ವೆಬ್‌ಸೈಟ್‌ಗೆ ಹೋದರೂ, ಅದೇ ವಿಷಯದ ಕುರಿತ ಜಾಹೀರಾತು ಕಾಣಿಸುತ್ತದೆ. ಇ-ಕಾಮರ್ಸ್‌ನಲ್ಲಿ ಅದೇ ಉತ್ಪನ್ನಗಳು ಕಾಣಲು ಶುರುವಾಗುತ್ತದೆ. ಆದರೆ, ಮುಂದಿನ ದಿನಗಳಲ್ಲಿ ಈ ಡೇಟಾ ಸಿಗದೇ ಇದ್ದರೆ ಕಂಪನಿಗಳು ಜನರ ವಿಶ್ಲೇಷಣೆ ಮಾಡುವುದು ಹೇಗೆ? ‘ಎಸ್‌ಇಒ’ ಅಂದರೆ, ಸರ್ಚ್ ಇಂಜಿನ್ ಆಪ್ಟಿಮೈಸೇಶನ್‌ ಕಥೆಯೇನು? ಎಸ್‌ಇಒ ದಿಕ್ಕು ಬದಲಾದರೆ, ಇಡೀ ಇಂಟರ್ನೆಟ್‌ ಆಧರಿತ ಜಾಹೀರಾತು, ಉತ್ಪನ್ನ ಮತ್ತು ಸೇವಾ ವಲಯವೇ ಬುಡಮೇಲಾಗುತ್ತದೆಯಲ್ಲ!

ಈ ವಿಷಯದಲ್ಲಿ ಏನು ಮಾಡಬೇಕು ಎಂದು ಬಹುಶಃ ಸರ್ಚ್‌ ಇಂಜಿನ್‌ ಸಂಸ್ಥೆಗಳಿಗೂ ಗೊತ್ತಿರುವ ಹಾಗಿಲ್ಲ. ಆದರೆ, ಸರ್ಚ್ ಇಂಜಿನ್‌ ಸಂಸ್ಥೆಗಳಿಗೆ ನಮ್ಮಂತಹ ಹುಡುಕಾಟ ಮಾಡುವವರೇ ಆದ್ಯತೆ. ಅವರನ್ನು ಸಂತೃಪ್ತಿಪಡಿಸುವುದೇ ಮೊದಲ ಗುರಿ. ಗ್ರಾಹಕರೇ ಅವರು. ಹೀಗಾಗಿ, ಅವರನ್ನು ಸಂತೃಪ್ತಿಪಡಿಸಿದರೆ, ಅವರನ್ನು ಉಳಿಸಿಕೊಂಡರೆ, ಮುಂದೆ ಆದಾಯದ ದಾರಿಯನ್ನು ಹುಡುಕಬಹುದು ಎಂದು ಅವು ಯೋಚಿಸುತ್ತಿವೆ.

ಬಹುಶಃ ಸಂಸ್ಥೆಗಳು ಈ ಹೊಸ ಪರಿಸ್ಥಿತಿಯಲ್ಲಿ ಆದಾಯದ ಹೊಸ ಹೊಸ ಮೂಲಗಳನ್ನು ಹುಡುಕಿಕೊಳ್ಳಲು ಆರಂಭಿಸಬಹುದು. ನಾವು ಯಾವುದಾದರೂ ವಿಷಯದ ಬಗ್ಗೆ ಹುಡುಕಾಟ ನಡೆಸಿದಾಗ, ಬ್ರ್ಯಾಂಡ್‌ಗಳ ಮಾಹಿತಿಯನ್ನೂ ಅದು ಕೊಡಬಹುದು. ಉದಾಹರಣೆಗೆ, ನಾವು ಕೂದಲಿಗೆ ಸಂಬಂಧಿಸಿದ ಏನನ್ನೋ ಹುಡುಕಿದರೆ, ಕೂದಲು ಉದುರುವ ಎಣ್ಣೆಯ ಜಾಹೀರಾತಿನ ರೂಪದಲ್ಲಿ ಕೆಲವು ಬ್ರ್ಯಾಂಡ್‌ಗಳ ಹೆಸರು ಹಾಗೂ ಅದರ ಮಾಹಿತಿಯನ್ನೂ ಈ ಎಐ ಕೊಡಬಹುದು. ಅದಕ್ಕಾಗಿ ಎಐ ಏಜೆಂಟ್‌ಗಳನ್ನು ತನ್ನ ಎಐ ಮೋಡ್‌ನ ಒಳಗೇ ಕುಳ್ಳಿರಿಸಬಹುದು ಅಥವಾ ಬ್ರ್ಯಾಂಡ್‌ಗಳ ಹೆಸರನ್ನು ಎಐ ತನ್ನ ಉತ್ತರದಲ್ಲಿ ಸೇರಿಸುವುದಕ್ಕೆಂದು ಬ್ರ್ಯಾಂಡ್‌ಗಳಿಗೆ ಇಂತಿಷ್ಟು ದರದಲ್ಲಿ ಪ್ಯಾಕೇಜ್ ನೀಡಬಹುದು.

ದಶಕಗಳ ಹಿಂದೆ ಸರ್ಚ್ ಇಂಜಿನ್ ಎಂಬ ಪರಿಕಲ್ಪನೆಯೇ ಗೊತ್ತಿಲ್ಲದಿದ್ದಾಗ ಅದನ್ನೊಂದು ಬ್ರ್ಯಾಂಡ್ ಮಾಡಿ ಗೂಗಲ್ ಗೆದ್ದಿತ್ತು. ಈಗ, ಈ ಸರ್ಚ್ ಎಂಜಿನ್ ಎಂಬ ಪರಿಕಲ್ಪನೆಯೇ ಕಳೆಗುಂದುತ್ತಿದೆ. ಆದರೆ, ಅದರ ಮೇಲೆ ನಿಂತಿದ್ದ ಜಾಹೀರಾತು ವಲಯಕ್ಕೆ ಹೊಸ ಆಧಾರ ಎಲ್ಲಿ ಸಿಗುತ್ತದೆ ಎಂಬುದು ಕುತೂಹಲದ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.