ADVERTISEMENT

ಏನಿದು ಸೈಬರ್‌ ಸಿಕ್‌ನೆಸ್‌?

ಸುಧಾ ಹೆಗಡೆ
Published 2 ಸೆಪ್ಟೆಂಬರ್ 2020, 19:30 IST
Last Updated 2 ಸೆಪ್ಟೆಂಬರ್ 2020, 19:30 IST
   

ಹೆಚ್ಚು ಕಾಲ ಕಂಪ್ಯೂಟರ್‌ ಅಥವಾ ಮೊಬೈಲ್‌ ನೋಡುವುದರಿಂದ, ಒಂದೇ ಸಮನೆ ಸ್ಕ್ರಾಲ್ ಮಾಡುವುದರಿಂದ ಹಲವರಿಗೆ ತಲೆಸುತ್ತು, ವಾಕರಿಕೆಯಂತಹ ಸಮಸ್ಯೆಗಳು ತಲೆದೋರುತ್ತಿರುವುದು ವರದಿಯಾಗಿದೆ. ಈ ‘ಸೈಬರ್‌ ಸಿಕ್‌ನೆಸ್‌’ಗೆ ಪರಿಹಾರ ಇಲ್ಲವೇ?

ನಿಮ್ಮ ಫೋನ್‌ನಲ್ಲಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಯಾವುದಾದರೂ ಫೈಲ್‌ ತೆರೆದುಕೊಂಡು ಅಥವಾ ಅಂತರ್ಜಾಲದ ಮಾಹಿತಿಯ ಮೇಲೆ ಸ್ಕ್ರಾಲ್‌ ಮಾಡುತ್ತ ಸಾಗಿದಾಗ ತಲೆ ಸುತ್ತಿದಂತಾಗುವುದು, ಕೆಲವೊಮ್ಮೆ ವಾಕರಿಕೆ ಬರುವುದು ಆಗುತ್ತಿದೆಯೇ? ಮನೆಯಿಂದಲೇ ಕಚೇರಿ ಕೆಲಸ ಮಾಡುವ ಈ ದಿನಗಳಲ್ಲಿ ನಿಮ್ಮ ಸ್ನೇಹಿತರಲ್ಲಿ ಅಥವಾ ಸಹೋದ್ಯೋಗಿಗಳಲ್ಲಿ ಕೆಲವರಿಗಾದರೂ ಈ ಅನುಭವವಾಗಿರಬಹುದು.

ವೈದ್ಯಲೋಕದಲ್ಲಿ ‘ಸೈಬರ್‌ ಅನಾರೋಗ್ಯ’ ಎಂದೇ ಕರೆಯಲಾಗುವ ಈ ಸಮಸ್ಯೆ ಇಂದಿನ ದಿನಗಳಲ್ಲಿ ಕಂಪ್ಯೂಟರ್‌ ಬಳಕೆದಾರರಲ್ಲಿ ಸಾಮಾನ್ಯ.

ADVERTISEMENT

ತಲೆಸುತ್ತು, ವಾಕರಿಕೆ
ಕಂಪ್ಯೂಟರ್‌ ಅಥವಾ ಮೊಬೈಲ್‌ ಫೋನ್‌ ಅನ್ನು ಅತಿಯಾಗಿ ಬಳಸಿದರೆ ‘ಒಣ ಕಣ್ಣಿ’ನ ಸಮಸ್ಯೆ, ಸ್ಪಾಂಡಿಯೋಲೊಸಿಸ್‌, ಭುಜ, ಕತ್ತು, ಸೊಂಟ ನೋವು ಬರಬಹುದು. ಆದರೆ, ಈ ಸೈಬರ್‌ ಅನಾರೋಗ್ಯಕ್ಕೆ ಕಾರಣ, ಸ್ಕ್ರಾಲಿಂಗ್‌. ಅಂದರೆ ನಾವು ಒಂದೇ ಸಮನೆ ಮೌಸ್‌ ಅಥವಾ ಕರ್ಸರ್‌ ಅನ್ನು ಮೇಲೆ– ಕೆಳಗೆ ಓಡಿಸುತ್ತ ಹೋದಾಗ ಮಾಹಿತಿಯನ್ನು ನಮ್ಮ ಕಣ್ಣು ನೋಡಿದರೂ ಮೆದುಳು ಅದನ್ನು ಗ್ರಹಿಸುವುದಿಲ್ಲ. ಅಂದರೆ ವಾಹನದಲ್ಲಿ ಕೂತಾಗ ಅದು ಚಲಿಸಿದಂತೆ ನಮ್ಮ ದೇಹಕ್ಕೆ ಅನುಭವವಾದರೂ, ನಮ್ಮ ಕಣ್ಣುಗಳು ನಾವು ಸೀಟ್‌ನಲ್ಲೇ ಕೂತಿರುವುದನ್ನು ಸೂಚಿಸುತ್ತವೆ. ಹೀಗಾಗೇ ಹಲವರಿಗೆ ಕಿರಿಕಿರಿಯಾಗಿ ವಾಂತಿ ಮಾಡಿಕೊಳ್ಳುವುದು. ಡಿಜಿಟಲ್‌ ಮೋಷನ್‌ನಲ್ಲಿ ಇದರ ವಿರುದ್ಧದ ಪ್ರಕ್ರಿಯೆ ಆಗುತ್ತದೆ. ಅಂದರೆ ನಾವು ಕುರ್ಚಿಯಲ್ಲೇ ಕುಳಿತಿದ್ದರೂ, ಸ್ಕ್ರಾಲ್‌ ಆದಂತೆ ಕಣ್ಣುಗಳು ಲ್ಯಾಪ್‌ಟಾಪ್‌ ಪರದೆಯ ಮೇಲೆ ಚಲಿಸುತ್ತಿರುತ್ತವೆ. ಆದರೆ, ಮೆದುಳು ಅಷ್ಟು ವೇಗವಾಗಿ ಗ್ರಹಿಸಲಾರದು. ಇದರಿಂದ ಕಿರಿಕಿರಿ, ಉದ್ವೇಗ, ತಲೆನೋವು, ತಲೆಸುತ್ತು ಮೊದಲಾದ ಸಮಸ್ಯೆಗಳು ತಲೆದೋರಬಹುದು. ಕೆಲವೊಮ್ಮೆ ವಾಂತಿಯೂ ಆಗಬಹುದು.

ದೀರ್ಘಕಾಲ ಸ್ಕ್ರಾಲ್‌ ಮಾಡಿದಾಗ ಈ ತರಹದ ಅನುಭವಗಳು ಬಹುತೇಕರಿಗೆ ಆಗಿರಬಹುದು. ಆದರೆ, ಸ್ವಲ್ಪ ಸೂಕ್ಷ್ಮ ಇರುವವರು, ಹಿಂದೆ ತಲೆಗೆ ಪೆಟ್ಟಾಗಿ ಮೆದುಳು ಕಲೆಸಿದಂತಾದ (ಕಂಕಶನ್‌) ಸಮಸ್ಯೆ ಇರುವವರಿಗೆ ಇದು ಸಾಮಾನ್ಯ ಎಂದು ಮಿನ್ನೆಸೋಟ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ. ಹಾಗೆಯೇ ಮಹಿಳೆಯರಲ್ಲಿ ಕೂರುವ ಭಂಗಿಯಿಂದಾಗಿ ಈ ಸಮಸ್ಯೆ ಹೆಚ್ಚು ಎನ್ನಲಾಗಿದೆ.

ವರ್ಚುವಲ್‌ ರಿಯಾಲಿಟಿ ವೀಕ್ಷಿಸಿದಾಗಲೂ ಬಹುತೇಕರಿಗೆ ಈ ಅನುಭವವಾಗಿರಬಹುದು. ವೇಗವಾಗಿ ಓಡುವ ಚಿತ್ರಗಳಿಂದಾಗಿ ಅಸಾಧ್ಯ ಕಿರಿಕಿರಿಯಾಗಿ ತಲೆಸುತ್ತಿದಂತಾಗುವುದು, ಯಾವಾಗ ಅದು ನಿಲ್ಲುತ್ತದೋ ಎಂಬ ಉದ್ವೇಗವಾಗುವುದು ಸಾಮಾನ್ಯ ಎನ್ನುತ್ತಾರೆ ತಜ್ಞರು.

ಇದು ಹೊಸ ಸಮಸ್ಯೆಯಾಗಿರುವುದರಿಂದ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ. ಆದರೆ, ಆ್ಯಪಲ್‌ ಫೋನ್‌ನಲ್ಲಿ ‘ರೆಡ್ಯೂಸ್‌ ಮೋಷನ್‌’ ಎಂಬ ಸೌಲಭ್ಯ ನೀಡಲಾಗಿದೆ. ಇದಕ್ಕಿರುವ ಪರಿಹಾರವೆಂದರೆ ನಮ್ಮ ಕಣ್ಣುಗಳು ಈ ಸ್ಕ್ರಾಲಿಂಗ್‌ಗೆ ಹೊಂದುಕೊಳ್ಳುವಂತೆ ನೋಡಿಕೊಳ್ಳುವುದು.

ಪರಿಹಾರ ಇಲ್ಲವೇ?
‘ಪರದೆಯ ಮೇಲಿನ ಬೆಳಕನ್ನು ಕಡಿಮೆ ಮಾಡುವುದು, ಆರಾಮ ಭಂಗಿಯಲ್ಲಿ ಕೂರುವುದು, ಪರದೆ ಮತ್ತು ಕಣ್ಣಿನ ಮಧ್ಯೆ ಸಾಕಷ್ಟು ಅಂತರ ಕಾಪಾಡುವುದು, ನಿಧಾನವಾಗಿ ಮಾಹಿತಿ ಓದಿಕೊಂಡು ಮುಂದಿನ ಮಾಹಿತಿಗೆ ಸ್ಕ್ರಾಲ್ ಮಾಡುವುದು, ಮಧ್ಯೆ ಮಧ್ಯೆ ವಿರಾಮ ಮಾಡುವುದು, ಗೋಡೆಯನ್ನೋ ಅಥವಾ ಕಿಟಕಿ ಹೊರಗಡೆ ಯಾವುದೋ ವಸ್ತುವನ್ನು ನೋಡುವುದು, ದೀರ್ಘವಾಗಿ ಉಸಿರಾಟ ನಡೆಸುವುದು ಮೊದಲಾದವುಗಳಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು’ ಎನ್ನುತ್ತಾರೆ ನರರೋಗ ತಜ್ಞ ಡಾ.ಎಸ್‌.ಸತೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.