ADVERTISEMENT

ಹೆಲ್ಮೆಟ್‌ಗೂ ಬಂತು ಎಸಿ ಸಾಧನ!

ಹೆಲ್ಮೆಟ್‌–ಜಾಕೆಟ್‌ಗಳಲ್ಲಿ ಅಳವಡಿಸುವ ಹವಾನಿಯಂತ್ರಿತ ಸಾಧನ ಕಂಡುಹಿಡಿದ ಟೆಕಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 20:34 IST
Last Updated 14 ಸೆಪ್ಟೆಂಬರ್ 2019, 20:34 IST
ವಾತಾನುಕೂಲ ಸಾಧನ ಅಳವಡಿಸಿರುವ ಹೆಲ್ಮೆಟ್‌
ವಾತಾನುಕೂಲ ಸಾಧನ ಅಳವಡಿಸಿರುವ ಹೆಲ್ಮೆಟ್‌   

ಬೆಂಗಳೂರು: ಬೇಸಿಗೆ ದಿನಗಳಲ್ಲಿ ಹೆಲ್ಮೆಟ್‌ ಧರಿಸುವುದರಿಂದ ತಲೆಯಿಂದ ಬೆವರಿಳಿಯುತ್ತದೆ ಎಂಬ ಅಳಲಿಗೆ ಪರಿಹಾರವಾಗಿ, ನಗರದ ಮೆಕಾನಿಕಲ್‌ ಎಂಜಿನಿಯರೊಬ್ಬರು ಹೆಲ್ಮೆಟ್‌ಗೆ ಅಳವಡಿಸುವ ಹವಾನಿಯಂತ್ರಿತ ಸಾಧನವೊಂದನ್ನು ವಿನ್ಯಾಸಗೊಳಿಸಿದ್ದಾರೆ. ಇದಕ್ಕೆ ‘ವಾತಾನುಕೂಲ’ ಎಂದು ಹೆಸರಿಡಲಾಗಿದೆ. ಬೇಸಿಗೆಯಲ್ಲಿ ತಂಪು ಹಾಗೂ ಚಳಿಗಾಲದಲ್ಲಿ ಬಿಸಿಯ ಅನುಭವವನ್ನು ಈ ಸಾಧನ ನೀಡುತ್ತದೆ.

ಬಹುರಾಷ್ಟ್ರೀಯ ಕಂಪನಿಯೊಂದರ ನಿರ್ದೇಶಕ‌ರಾಗಿರುವ ಸಂದೀಪ್‌ ದಹಿಯಾ ಈ ಆವಿಷ್ಕಾರ ಮಾಡಿದ್ದಾರೆ. ‘ಬಳಕೆದಾರ ಸ್ನೇಹಿ ಉತ್ಪನ್ನ’ಗಳನ್ನು ವಿನ್ಯಾಸಗೊಳಿಸುವುದರಲ್ಲಿ ಆಸಕ್ತಿ ಹೊಂದಿರುವ ಅವರು, ಆರ್‌.ಟಿ. ನಗರದಲ್ಲಿರುವ ತಮ್ಮ ಗ್ಯಾರೇಜ್‌ ಕಂ ವರ್ಕ್‌ಶಾಪ್‌ನಲ್ಲಿ ರೂಪಿಸಿರುವ ಈ ಸಾಧನ ಎಲ್ಲರ ಗಮನ ಸೆಳೆಯುತ್ತಿದೆ. ಹೆಲ್ಮೆಟ್‌ ಮಾತ್ರವಲ್ಲದೆ, ಜಾಕೆಟ್‌ನಲ್ಲಿಯೂ ಈ ಸಾಧನವನ್ನು ಅಳವಡಿಸಬಹುದು.

ನಾಲ್ಕೂವರೆ ವರ್ಷಗಳಿಂದ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂದೀಪ್‌, ಈ ಉದ್ದೇಶದಿಂದ ವಿವಿಧ ಮಾದರಿಯ ಎಂಟು ಹೆಲ್ಮೆಟ್‌ಗಳಲ್ಲಿ ಈ ಸಾಧನ ಅಳವಡಿಸಿದ್ದಾರೆ. ಈಗ ತಮ್ಮ ಕನಸಿನ ಹೆಲ್ಮೆಟ್‌ಗೆ ಅಂತಿಮ ರೂಪ ನೀಡಿದ್ದಾರೆ. ಬೈಕ್‌ಗಳಲ್ಲಿ ಅಳವಡಿಸುವ ಮಾದರಿಯ 12 ವೋಲ್ಟ್‌ ಸಾಮರ್ಥ್ಯದ ಬ್ಯಾಟರಿಯನ್ನು (ಡಿ.ಸಿ) ಇದಕ್ಕೆ ಬಳಸಲಾಗಿದೆ.

ADVERTISEMENT

‘ಬೈಕ್‌ ಸವಾರರು ಸಿಗ್ನಲ್‌ಗಳಲ್ಲಿ ಕಾಯುವ ಸಂದರ್ಭದಲ್ಲಿ ಬಿಸಿಲಿನ ಬೇಗೆ ತಾಳಲಾರದೆ ತಮ್ಮ ಹೆಲ್ಮೆಟ್‌ಗಳನ್ನು ತೆಗೆದು ತೈಲ ಟ್ಯಾಂಕ್‌ನ ಮೇಲಿಡುತ್ತಾರೆ. ‘ವಾತಾನುಕೂಲ’ ವಿನ್ಯಾಸಕ್ಕೆ ಇದೇ ನನಗೆ ಪ್ರೇರಣೆ ನೀಡಿತು. ನಾನೂ ಒಬ್ಬ ಬೈಕ್‌ ಸವಾರ. ಹೆಲ್ಮೆಟ್‌ ಜೀವರಕ್ಷಕ ಎನಿಸಿದರೂ, ಧರಿಸಿದಾಗ ಒಳಗೆ ಗಾಳಿಯಾಡದೆ ಬೆವರುತ್ತದೆ. ಈ ಕಾರಣದಿಂದ ಎಲ್ಲ ವಾತಾವರಣಕ್ಕೆ ಹೊಂದುವ ಸಾಧನದ ವಿನ್ಯಾಸಕ್ಕೆ ಮುಂದಾದೆ’ ಎಂದು ಅವರು ವಿವರಿಸಿದರು.

ಈ ಹೆಲ್ಮೆಟ್‌ 1.7 ಕೆ.ಜಿ ತೂಕವಿದೆ. ಮಾರುಕಟ್ಟೆಯಲ್ಲಿ ಲಭ್ಯ ಇರುವ ಬಹುತೇಕ ಹೆಲ್ಮೆಟ್‌ಗಳು 800 ಗ್ರಾಂನಿಂದ 2 ಕೆ.ಜಿ ತೂಕವಿದೆ. ಏರ್‌ ಕೂಲರ್‌ ಅಳವಡಿಸಿದ ಹೆಲ್ಮೆಟ್‌ನಲ್ಲಿ ಎರಡು ಭಾಗಗಳಿವೆ. ಹೆಲ್ಮೆಟ್‌ ಒಳಗೆ ಗಾಳಿಯಾಡಲು ರಬ್ಬರ್‌ ಟ್ಯೂಬ್‌ಗಳಿರುವ ಭಾಗ ಮತ್ತು ಬೆನ್ನಿಗೆ ಹಾಕಿಕೊಳ್ಳುವ ಬ್ಯಾಕ್‌ಪ್ಯಾಕ್‌. ಬ್ಯಾಕ್‌ಪ್ಯಾಕ್‌ನಲ್ಲಿ ಹೆಲ್ಮೆಟ್‌ ಒಳಗೆ ಅಳವಡಿಸುವ ಸಾಧನಗಳಿರುತ್ತವೆ.

ಬಿಸಿಯನ್ನು ತಣಿಸುವ ಸಾಧನ ಏರ್‌ ಕೂಲಿಂಗ್‌ ಕೆಲಸ ಮಾಡುತ್ತದೆ. ಅದಕ್ಕೆ ನೀರಿನ ಅಗತ್ಯ ಇಲ್ಲ. ಈ ಸಾಧನ ಸೆಮಿ ಕಂಡಕ್ಟರ್‌ ಹೊಂದಿದ್ದು, ಉಷ್ಣತೆಯನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಹೆಲ್ಮೆಟ್‌ಗೆ ಬ್ಯಾಟರಿ ಸಂಪರ್ಕ ಇಲ್ಲ. ಆದರೆ, ರಬ್ಬರ್‌ ಟ್ಯೂಬ್‌ನಿಂದ ಗಾಳಿಯಾಡುವ ವ್ಯವಸ್ಥೆ ಮಾಡಲಾಗಿದೆ. ಅದು ಎ.ಸಿ ನಿಯಂತ್ರಿಸುವ ಸಾಧನ ಹೊಂದಿದ ಸಣ್ಣ ರಿಮೋಟ್‌ಗೆ ಸಂಪರ್ಕ ಹೊಂದಿದೆ.

ಆರ್‌.ಟಿ ನಗರದಲ್ಲಿರುವ ಮನೆಯಿಂದ ಯುಬಿ ಸಿಟಿಯಲ್ಲಿರುವ ತಮ್ಮ ಕಚೇರಿಗೆ ತೆರಳಲು ಸಂದೀಪ್‌ ಅವರು ತಿಂಗಳಿನಿಂದ ಪ್ರಾಯೋಗಿಕವಾಗಿ ಈ ಹೆಲ್ಮೆಟ್‌ ಬಳಸುತ್ತಿದ್ದಾರೆ. ‘ಹೆಲ್ಮೆಟ್‌ ಜೊತೆ ಬೆನ್ನ ಹಿಂದಿರುವ ಸಾಧನ ನೋಡಿ ಹಲವರು ಅದೇನೆಂದು ಪ್ರಶ್ನಿಸುತ್ತಾರೆ. ಏರ್‌ –ಕೂಲರ್‌ ಎಂದಾಗ ಆಶ್ಚರ್ಯ ವ್ಯಕ್ತಪಡಿಸುತ್ತಾರೆ’ ಎಂದೂ ವಿವರಿಸಿದರು.

*
40 ಸಾಧನ ಅಭಿವೃದ್ಧಿಪಡಿಸಿದ್ದು, ಸ್ನೇಹಿತರು ಮತ್ತು ಪರಿಚಯಸ್ಥರಿಗೆ ಕೊಡುತ್ತಿದ್ದೇನೆ. ಈ ಸಾಧನದ ಬೆಲೆ ಎಷ್ಟೆಂದು ಈಗಲೇ ಹೇಳಲು ಆಗದು.
-ಸಂದೀಪ್‌ ದಹಿಯಾ, ‘ವಾತಾನುಕೂಲ’ ಸಾಧನ ವಿನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.