ADVERTISEMENT

ತ್ಯಾಜ್ಯ ವಿಂಗಡನೆಯ ಯಂತ್ರ ಅಭಿವೃದ್ಧಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:30 IST
Last Updated 28 ಜೂನ್ 2019, 19:30 IST
ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಕಸ ವಿಂಗಡಣೆಗೆ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ
ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಕಸ ವಿಂಗಡಣೆಗೆ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ   

ಪುತ್ತೂರು: ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್‌ಥಿಗಳು ಕಸ ವಿಂಗಡಣೆಗೆ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

‘ಆಟೋಮೇಟೆಡ್ ವೇಸ್ಟ್ ಸೆಗ್ರಿಗೇಶನ್ ಅಂಡ್ ಮಾನಿಟರಿಂಗ್ ಸಿಸ್ಟಮ್’ ಎನ್ನುವ ಈ ಯಂತ್ರವನ್ನು ಅಪಾರ್ಟ್‌ಮೆಂಟ್‌ಗಳು, ಸಣ್ಣ ಕಾಲೊನಿಗಳಲ್ಲಿ ಸ್ಥಾಪಿಸುವುದರಿಂದ ಕಸವನ್ನು ವ್ಯವಸ್ಥಿತವಾಗಿ ವಿಂಗಡಿಸಬಹುದು.

ಯಂತ್ರವು ಕಸ ಹಾಕುವ ತೊಟ್ಟಿ, ಕನ್ವೇಯರ್ ಬೆಲ್ಟ್, ಡಿಟೆಕ್ಟರ್ ವಿಭಾಗ ಹಾಗೂ ಮೂರು ಕಸ ಸಂಗ್ರಹಣಾ ವಿಭಾಗವನ್ನು ಹೊಂದಿದೆ. ತೊಟ್ಟಿಯಲ್ಲಿ ಸಂಗ್ರಹವಾಗುವ ಕಸವು ಕನ್ವೇಯರ್ ಬೆಲ್ಟ್ ಮುಖಾಂತರ ಡಿಟೆಕ್ಟರ್ ವಿಭಾಗಕ್ಕೆ ಬರುತ್ತದೆ. ಮೊದಲಿಗೆ ಇಂಡಕ್ಟಿವ್ ಪ್ರಾಕ್ಸಿಮಿಟಿ ಸೆನ್ಸರ್ ಕಸದಲ್ಲಿರುವ ಲೋಹವನ್ನು ಪರಿಶೀಲಿಸಿ ಪ್ರತ್ಯೇಕಿಸುತ್ತದೆ. ಲೋಹ ತ್ಯಾಜ್ಯವನ್ನು ಅದಕ್ಕೆಂದೇ ಇರುವ ಸಂಗ್ರಹ ವಿಭಾಗಕ್ಕೆ ತಳ್ಳುತ್ತದೆ. ಅಲ್ಲವಾದಲ್ಲಿ ಅದು ಮುಂದುವರಿದು ಲೇಸರ್ ಹಾಗೂ ಎಲ್‌ಡಿಆರ್ ಸೆನ್ಸರ್ ಮೂಲಕ ಘನ ತ್ಯಾಜ್ಯವೇ ಎಂದು ಪರೀಕ್ಷಿಸುತ್ತದೆ. ಇಲ್ಲಿ ಕಾಗದ ಮತ್ತು ಮರದ ವಸ್ತುಗಳು ವಿಂಗಡನೆಗೊಂಡು ನಿಗದಿತ ತೊಟ್ಟಿಗಳಲ್ಲಿ ಬಂದು ಬೀಳುತ್ತವೆ.

ADVERTISEMENT

ತ್ಯಾಜ್ಯವನ್ನು ಪ್ಲಾಸ್ಟಿಕ್ ಎಂದು ಪರಿಶೀಲಿಸಿ ಅದರ ಸಂಗ್ರಹಣಾಗಾರಕ್ಕೆ ರವಾನಿಸುತ್ತದೆ. ಪ್ರತಿ ಸಂಗ್ರಹಣಾ ತೊಟ್ಟಿಗೂ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಅದು ತುಂಬಿದ ತಕ್ಷಣ ಮಹಿತಿಯನ್ನು ನೀಡುತ್ತದೆ. ಪಠ್ಯಕ್ರಮಕ್ಕೆ ಅನುಗುಣವಾಗಿ ಚಿಕ್ಕ ಮಾದರಿಯನ್ನು ಇಲ್ಲಿ ನಿರ್ಮಿಸಲಾಗಿದ್ದು, ಇದೇ ತಂತ್ರಜ್ಞಾನದಿಂದ ದೊಡ್ಡ ಯಂತ್ರಗಳನ್ನು ನಿರ್ಮಿಸಿದರೆ ಕಸ ವಿಂಗಡೆಗೆ ಇದು ಸಹಕಾರಿಯಾಗುತ್ತದೆ ಎಂಬುದು ವಿದ್ಯಾರ್ಥಿಗಳ ಅಭಿಮತ.

ಎಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ. ಶ್ರೀಕಾಂತ್ ರಾವ್ ಅವರ ನಿರ್ದೇಶನ ಸಹಾಯಕ ಪ್ರಾಧ್ಯಾಪಕ ಪ್ರೊ.ಗುರುಸಂದೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶಾಶ್ವತ್.ಎನ್.ಜಿ, ಶೈಲೇಶ್ ಕುಮಾರ್.ಜಿ, ಶೈನಿತಾ.ಯು.ಎಂ ಮತ್ತು ಸಾನಿಯಾ ತಾಜ್ ಇದನ್ನು ನಿರ್ಮಿಸಿದ್ದಾರೆ.

ಕಸ ಭೀತಿ
ಮಾಹಿತಿಗಳ ಪ್ರಕಾರ ದೇಶದಲ್ಲಿ ವಾರ್ಷಿಕ 62 ಸಾವಿರ ದಶಲಕ್ಷ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ ಮರುಬಳಕೆಗೆ ಯೋಗ್ಯವಾದ ತ್ಯಾಜ್ಯಗಳೂ ಇವೆ. ಇವನ್ನು ಸರಿಯಾಗಿ ನಿರ್ವಹಿಸದೆ ಎಲ್ಲೆಂದರಲ್ಲಿ ಬಿಸಾಕುವ ಪ್ರವೃತ್ತಿ ವ್ಯಾಪಕವಾಗಿದೆ. ಪರಿಸರ ಮಾಲಿನ್ಯ, ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಈ ಕಸವನ್ನು ನಿರ್ವಹಿಸುವ ಮತ್ತು ಸಂಸ್ಕರಿಸುವ ಆವಶ್ಯಕತೆ ಹೆಚ್ಚಾಗಿದೆ. ಪ್ರಜ್ಞಾವಂತರು ಮಾಡುವ ಅವಾಂತರಗಳಿಂದ ಕಸವನ್ನು ವಿಂಗಡಿಸುವುದೇ ತಲೆನೋವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.