ADVERTISEMENT

‘ವರ್ಕ್‌ ಫ್ರಂ ಎನಿವೇರ್‌’ಗೆ ಶೀಘ್ರವೇ ಅವಕಾಶ: ಸಚಿವ ರವಿಶಂಕರ್‌ ಪ್ರಸಾದ್

ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:41 IST
Last Updated 20 ನವೆಂಬರ್ 2020, 1:41 IST
ರವಿಶಂಕರ್‌ ಪ್ರಸಾದ್
ರವಿಶಂಕರ್‌ ಪ್ರಸಾದ್   

ಬೆಂಗಳೂರು: ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ‘ವರ್ಕ್‌ ಫ್ರಮ್‌ ಹೋಂ’ಮಾತ್ರವಲ್ಲ, ‘ವರ್ಕ್‌ ಫ್ರಂ ಎನಿವೇರ್‌’ಗೆ
(ಮನೆಯಿಂದ ಅಲ್ಲದೇ, ಎಲ್ಲಿಂದಲಾದರೂ ಕೆಲಸ ಮಾಡುವುದು) ಅನುಕೂಲ ಕಲ್ಪಿಸಲು ಕಾನೂನು ಜಾರಿಗೆ ತರಲಾಗುವುದು ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದರು.

23 ನೇ ‘ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಮನೆಯಿಂದಲೇ ಶೇ 7 ರಷ್ಟು ಅಭಿವೃದ್ಧಿಯನ್ನು ಸಾಧಿಸಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಎಲ್ಲಿಂದಲಾದರೂ ಕೆಲಸ ಮಾಡುವ (ವರ್ಕ್‌ ಫ್ರಂ ಎನಿವೇರ್‌) ಸಂಬಂಧ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದೂ ಅವರು ಹೇಳಿದರು.

ಚೀನಾ ಬಗ್ಗೆ ಅಸಮಾಧಾನಗೊಂಡಿರುವ ಕೆಲವು ಮೊಬೈಲ್‌ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿವೆ. ಸುಮಾರು ₹11 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಇಲ್ಲಿ ತಯಾರಾಗುವ ಮೊಬೈಲ್‌ಗಳ ಪೈಕಿ 7 ಲಕ್ಷದಷ್ಟು ಸೆಟ್‌ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರೆ, ಉಳಿದ ಸುಮಾರು 5 ಲಕ್ಷ ಮೊಬೈಲ್‌ ಸೆಟ್‌ಗಳು ರಫ್ತು ಆಗಲಿವೆ ಎಂದು ಹೇಳಿದರು.

ದತ್ತಾಂಶ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಿವೆ. ಸದ್ಯವೇ ದತ್ತಾಂಶ ರಕ್ಷಣಾ ಕಾನೂನು ಜಾರಿಗೆ ತರಲಾಗುವುದು. ಕರ್ನಾಟಕ ದತ್ತಾಂಶ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿದರೆ, ಐಟಿ ಕ್ಷೇತ್ರದಂತೆ ಬೃಹತ್‌ ಆಗಿ ಬೆಳೆಯಲು ಕರ್ನಾಟಕಕ್ಕೆ ಅವಕಾಶವಿದೆ ಎಂದು ರವಿಶಂಕರ್‌ ಪ್ರಸಾದ್‌ ತಿಳಿಸಿದರು.

ಡಿಜಿಟಲ್ ತಾಂತ್ರಿಕತೆಯ ಬೆಳವಣಿಗೆಗೆ ಪೂರಕವಾಗಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿರುವ ಕೇಂದ್ರ ಸರ್ಕಾರವು 1000 ದಿನಗಳಲ್ಲಿ 6 ಲಕ್ಷ ಕಿ.ಮೀ. ಉದ್ದದಷ್ಟು ಆಪ್ಟಿಕ್ ಫೈಬರ್ ಕೇಬಲ್ ಜಾಲ ನಿರ್ಮಿಸಲು ಯೋಜನೆ ಹಾಕಿಕೊಂಡಿದೆ ಎಂದು ಅವರು ಹೇಳಿದರು.

₹ 30 ಸಾವಿರ ಕೋಟಿ ಡಿಜಿಟಲ್‌ ಆರ್ಥಿಕತೆ

ಮುಂದಿನ 5 ವರ್ಷಗಳಲ್ಲಿ ₹30 ಸಾವಿರ ಕೋಟಿ ಡಿಜಿಟಲ್ ಆರ್ಥಿಕತೆಯ ಗುರಿ ಹಾಕಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಸದ್ಯಕ್ಕೆ ₹ 5,200 ಕೋಟಿ ಡಿಜಿಟಲ್ ಆರ್ಥಿಕತೆ ಗುರಿಯನ್ನು ರಾಜ್ಯವು ದಾಟಿದೆ. ಮುಂದಿನ ಐದು ವರ್ಷಗಳಲ್ಲಿ ₹30 ಸಾವಿರ ಕೋಟಿ ಗುರಿಯನ್ನು ಮುಟ್ಟಲು ಎಲ್ಲ ರೀತಿಯ ಕ್ರಮಗಳನ್ನು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು. ಪ್ರಧಾನಮಂತ್ರಿ ಮೋದಿಯವರು ನಿಗದಿಪಡಿಸಿರುವ ₹1 ಲಕ್ಷ ಕೋಟಿ ಡಿಜಿಟಲ್‌ ಆರ್ಥಿಕತೆ ಗುರಿಗೆ ಹೆಚ್ಚಿನ ಕೊಡುಗೆ ನೀಡಲು ಕರ್ನಾಟಕ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಐಟಿ-ಬಿಟಿ ಸೇರಿದಂತೆ ಸರ್ವ ಕ್ಷೇತ್ರಗಳಲ್ಲೂ ಸುಧಾರಣೆಗಳನ್ನು ತರಲಾಗಿದೆ ಎಂದು ಹೇಳಿದರು.

60 ಲಕ್ಷ ಉದ್ಯೋಗದ ಗುರಿ

ಐಟಿ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.