ದೆಹಲಿ ಏಮ್ಸ್‌ನ ನೇತ್ರತಜ್ಞ ಡಾ. ಜೀವನ್ ಸಿಂಗ್ ತೀತಿಯಾಲ್ ಅವರ ಬೀಳ್ಕೊಡುಗೆ ದೃಶ್ಯ
Jist ಇನ್‌ಸ್ಟಾಗ್ರಾಂ
ನವದೆಹಲಿ: ಬದುಕಿನ ಬಹುತೇಕ ಸಮಯವನ್ನು ವೃತ್ತಿಯ ಬದ್ಧತೆಯಲ್ಲಿ ತೊಡಗಿಸಿಕೊಂಡವರಿಗೆ ನಿವೃತ್ತಿ ಎನ್ನುವುದು ಭಾವುಕ ಕ್ಷಣ. ದೆಹಲಿ ಏಮ್ಸ್‌ನ ನೇತ್ರ ತಜ್ಞ ಡಾ. ಜೀವನ್ ಸಿಂಗ್ ತೀತಿಯಾಲ್ ಅವರ ನಿವೃತ್ತಿಯೂ ಅಂಥದ್ದೊಂದು ಘಟನೆಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಆ ಕ್ಷಣದ ವಿಡಿಯೊ ಅಂತರ್ಜಾಲದಲ್ಲಿ 20 ಲಕ್ಷ ವೀಕ್ಷಣೆ ಕಂಡಿದೆ.
ಡಾ. ಜೀವನ್ ಸಿಂಗ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ. 46 ವರ್ಷಗಳ ವೈದ್ಯಕೀಯ ಜೀವನ ನಂತರ ನಿವೃತ್ತಿ ಘೋಷಿಸಿದ ಇವರನ್ನು ಬೀಳ್ಕೊಡಲು ಏಮ್ಸ್‌ನ ಸಿಬ್ಬಂದಿ ಆಸ್ಪತ್ರೆಯ ಕಾರಿಡಾರ್‌ನ ಎರಡೂ ಬದಿ ನಿಂತಿದ್ದರು. ಇವರಲ್ಲಿ ಕೆಲವರು ಚಪ್ಪಾಳೆ ತಟ್ಟುತ್ತಿದ್ದರೆ, ಇನ್ನೂ ಕೆಲವರು ತಬ್ಬಿಕೊಂಡು ಭಾವುಕರಾದರು. ಇವರೆಲ್ಲರನ್ನೂ ಕಂಡ ಡಾ. ಜೀವನ್ ಸಿಂಗ್ ಒತ್ತರಿಸಿಬರುತ್ತಿದ್ದ ಕಣ್ಣೀರನ್ನು ಧಾರಾಕಾರವಾಗಿ ಸುರಿಸುತ್ತಾ ಸಾಗುವ ದೃಶ್ಯ ಕಣ್ಣಾಲಿಗಳನ್ನು ತೇವವಾಗಿಸುವಂತಿದೆ.
ಹಿರಿಯ ಹಾಗೂ ಕಿರಿಯ ವೈದ್ಯರು, ಶುಶ್ರೂಷಕಿಯರು, ವಾರ್ಡ್‌ಬಾಯ್‌ಗಳು, ರೋಗಿಗಳೂ ಡಾ. ಜೀವನ್ ಸಿಂಗ್ ಅವರ ನಿವೃತ್ತಿಯ ಭಾರವನ್ನು ಸಹಿಸಲಾಗದೆ ಕಣ್ಣೀರು ಸುರಿಸಿದ್ದಾರೆ. ಅವರ ನೋವನ್ನು ಅರಗಿಸಿಕೊಳ್ಳಲಾಗದ ಡಾ. ಸಿಂಗ್ ಅವರೂ ಅಳುತ್ತಲೇ ಆಸ್ಪತ್ರೆಯಿಂದ ಹೊರಗೆ ಹೆಜ್ಜೆ ಹಾಕಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
20 ಲಕ್ಷ ವೀಕ್ಷಣೆ ಕಂಡ ಈ ವಿಡಿಯೊ ಜತೆಗೆ ಹಲವರು ಭಾವುಕ ಸಂದೇಶಗಳನ್ನೂ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಡಾ. ಜೀವನ್ ಸಿಂಗ್ ಅವರನ್ನು ಭೇಟಿಯಾದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅವರ ವ್ಯಕ್ತಿತ್ವ ಹಾಗೂ ಚಿಕಿತ್ಸೆ ನೀಡುವ ರೀತಿಯನ್ನು ಕೊಂಡಾಡಿದ್ದಾರೆ.
‘ವೈದ್ಯರು ಹಾಗೂ ಶಿಕ್ಷಕರಿಗೆ ನಿವೃತ್ತಿ ಇಲ್ಲ’ ಎಂದು ಒಬ್ಬರು ಬರೆದುಕೊಂಡಿದ್ದಾರೆ. ‘ಅದ್ಭುತ ವ್ಯಕ್ತಿಗೆ ನೀಡುವ ಗೌರವ ಇದು’ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ತಮ್ಮ ತಾಯಿಯ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸುವಾಗ ಅವರು ಆಡುತ್ತಿದ್ದ ಆ ಮೆಲುದನಿಯ ಮಾತುಗಳು ಮತ್ತು ನೀಡುತ್ತಿದ್ದ ಪ್ರೋತ್ಸಾಹ ಮರೆಯಲಾಗದು. ಅವರ ಬಳಿ ಚಿಕಿತ್ಸೆಗಾಗಿ 80ಕ್ಕೂ ಹೆಚ್ಚು ಜನ ಸದಾ ಕಾಯುತ್ತಲೇ ಇರುತ್ತಿದ್ದರು’ ಎಂದು ಬರೆದುಕೊಂಡಿದ್ದಾರೆ.
ಡಾ. ಜೀವನ್ ಸಿಂಗ್ ತೀತಿಯಾಲ್ ಅವರು ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಕ್ಕಾಗಿ 2014ರಲ್ಲಿ ಅವರಿಗೆ ಪದ್ಮಶ್ರೀ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.