ADVERTISEMENT

ರೈಲು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿ ಗೆದ್ದ ‘ಬನಿ’ಯ ಕಥೆಯಿದು

ಮೃತ್ಯುಂಜಯ ಬೋಸ್
Published 5 ಫೆಬ್ರುವರಿ 2026, 7:48 IST
Last Updated 5 ಫೆಬ್ರುವರಿ 2026, 7:48 IST
<div class="paragraphs"><p>ಬನಿ ಹೆಸರಿನ ಆನೆ ಮರಿ</p></div>

ಬನಿ ಹೆಸರಿನ ಆನೆ ಮರಿ

   

ಚಿತ್ರ ಕೃಪೆ: WildlifeSOS

ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಅಮ್ಮನೊಂದಿಗೆ ಕಾಡು ಸುತ್ತುತ್ತಾ ಬೆಳೆಯುತ್ತಿದ್ದ ಎಳೆಯ ಜೀವಕ್ಕೆ ಮತ್ತೆ ಎದ್ದು ನಿಲ್ಲಲಾಗದಷ್ಟು ದೊಡ್ಡ ಅಪಘಾತವಾಗಿತ್ತು. 

ADVERTISEMENT

9ನೇ ತಿಂಗಳಿನಲ್ಲಿದ್ದಾಗ ಅಮ್ಮನೊಂದಿಗೆ ಓಡಾಡುತ್ತಿರುವಾಗ ರೈಲೊಂದು ಗುದ್ದಿದ ಪರಿಣಾಮ ಕಾಲುಗಳು ಸ್ವಾದೀನ ಕಳೆದುಕೊಂಡವು, ಇನ್ನೊಂದೆಡೆ ಅಮ್ಮನ ದುರ್ಮರಣ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಗೆ ನೆರವಾಗಿದ್ದು ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಅರಣ್ಯ ಅಧಿಕಾರಿಗಳು. 

ಇದು ‘ಬನಿ’ ಎನ್ನುವ ಹೆಣ್ಣಾನೆಯ ಕಥೆ. ಎರಡು ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ರೈಲು ಹಳಿಯೊಂದನ್ನು ದಾಟುತ್ತಿದ್ದಾಗ ರೈಲೊಂದು ಗುದ್ದಿ ತಾಯಿ ಆನೆ ಮೃತಪಟ್ಟಿತ್ತು. ಬನಿಯ ಕಾಲುಗಳಿಗೆ ಪಾರ್ಶ್ವವಾಯು ಹೊಡೆದು ಎದ್ದು ನಿಲ್ಲಲಾಗದ ಸ್ಥಿತಿಯಲ್ಲಿ ಹಳಿಯ ಮೇಲೆ ಬಿದ್ದುಕೊಂಡಿತ್ತು. ಅದನ್ನು ಗಮನಿಸಿದ ಉತ್ತರಾಖಂಡ ಮತ್ತು ಉತ್ತರಪ್ರದೇಶದ ಅಧಿಕಾರಿಗಳು ಆನೆ ಮರಿಯನ್ನು ರಕ್ಷಿಸಿ ಮಥುರಾದ ಆನೆಗಳ ಆಸ್ಪತ್ರೆ ಕ್ಯಾಂಪಸ್‌ಗೆ ರವಾನಿಸಿದ್ದರು. 

ಅಲ್ಲಿ ಆನೆ ಮರಿಗೆ ‘ಬನಿ’ ಎಂದು ಹೆಸರಿಡಲಾಗಿತ್ತು.

ಎರಡು ವರ್ಷಗಳ ಚಿಕಿತ್ಸೆಯ ನಂತರ ಬನಿ ಈಗ ಯಾವುದೇ ಬೆಂಬಲವಿಲ್ಲದೆ ಎದ್ದು ನಿಲ್ಲುತ್ತಾಳೆ. ವಿಧವಿಧವಾದ ಆಹಾರವನ್ನು ಸೇವಿಸುತ್ತಾಳೆ. 

ವನ್ಯಜೀವಿ ಎಸ್ಒಎಸ್‌ ತಂಡ ಹೇಳುವ ಪ್ರಕಾರ, ‘ಕ್ಯಾಂಪಸ್‌ಗೆ ಬನಿಯನ್ನು ಕರೆದುಕೊಂಡು ಬಂದಾಗ ಆಕೆ ಆಘಾತದಿಂದ ಉಂಟಾಗುವ ಸ್ಪಾಸ್ಟಿಕ್ ಪ್ಯಾರಾಪರೆಸಿಸ್‌ನಿಂದ ಬಳಲುತ್ತಿದ್ದಳು. ನಿಂತುಕೊಳ್ಳಲು ಅಥವಾ ಸೊಂಡಿಲನ್ನು ಅತ್ತಿಂದಿತ್ತ ಅಲುಗಾಡಿಸಲೂ ಸಾಧ್ಯವಾಗುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಅಂತರರಾಷ್ಟ್ರೀಯ ತಜ್ಞರ ಜತೆಗಿನ ಸಂಯೋಜನೆಯಿಂದ ಬನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಲೇಸರ್‌ ಥೆರಫಿ, ಅಕ್ಯೂಪಂಕ್ಚರ್, ಆಯುರ್ವೇದ ಮಸಾಜ್, ವಿಶೇಷ ಪೋಷಕಾಂಶಗಳು, ಹೈಡ್ರೋಥೆರಫಿ ನೀಡಲಾಗುತ್ತಿದೆ. ಈಗ ಬನಿ ಯಾವ ಸಹಾಯವೂ ಇಲ್ಲದೆ ನಿಂತುಕೊಳ್ಳುತ್ತಾಳೆ. ಪಾರ್ಶ್ವವಾಯುವಿಗೆ ಒಳಗಾಗಿದ್ದ ಬನಿ ಈಗ ಗುಣಮುಖವಾಗಿದ್ದಾಳೆ. ನೀರಿನಲ್ಲಿ ಆಟವಾಡುತ್ತಾಳೆ, ಮರಗಳಿಂದ ಸೊಪ್ಪುಗಳನ್ನು ಎಳೆದು ತಿನ್ನುತ್ತಾಳೆ. ಡ್ರಮ್‌ಗಳೊಂದಿಗೆ ಆಟವಾಡುತ್ತಾಳೆ. ಹೀಗಾಗಿ ಮಾನಸಿಕವಾಗಿಯೂ ಸದೃಢವಾಗಿದ್ದಾಳೆ’ ಎಂದಿದ್ದಾರೆ.

ಬನಿ ಮರುಹುಟ್ಟಿಗೆ ಎರಡು ವರ್ಷಗಳಾದ ಹಿನ್ನೆಲೆ ಚಿಕಿತ್ಸೆ ನೀಡುತ್ತಿದ್ದ ತಂಡ ವಿಶೇಷ ಆಹಾರವನ್ನು ನೀಡಿದೆ. ಕಲ್ಲಂಗಡಿ, ಪಪ್ಪಾಯ, ಪೇರಳೆ, ಬಾಳೆಹಣ್ಣು, ಕೇಕ್‌, ಬಿಟ್ರೂಟ್ ಸೇರಿದಂತೆ ವಿವಿಧ ರೀತಿಯ ಆಹಾರವನ್ನು ನೀಡಿದೆ.

ಈ ಬಗ್ಗೆ ಮಾತನಾಡಿದ ಬನಿಗೆ ಚಿಕಿತ್ಸೆ ನೀಡಿದ ವೈದ್ಯ, ಡಾ. ಇಳಯರಾಜ, ‘ಬನಿಯ ಸ್ನಾಯುಗಳು ಬಲವಾಗಲು ವಿಶೇಷ ಚಿಕಿತ್ಸೆ ನೀಡಲಾಗಿದೆ. ಅಕ್ಯೂಪಂಕ್ಚರ್ ಚಿಕಿತ್ಸೆಯನ್ನು ದೇಶದಲ್ಲಿ ಮೊದಲ ಬಾರಿಗೆ ಆನೆಗೆ ನೀಡಲಾಗಿದೆ. ಇದರಿಂದ ಬನಿಯ ಆರೋಗ್ಯ ಸುಧಾರಿಸಿದೆ’ ಎಂದು ತಿಳಿಸಿದ್ದಾರೆ.

‘ಬನಿಯ ಕಥೆಯು ಆನೆಗಳಿಗೆ ರೈಲು ಅಪಘಾತ ಎಷ್ಟು ವಿನಾಶಕಾರಿಯಾಗಬಹುದು ಎಂಬುದನ್ನು ತೋರಿಸಿದೆ. ಬನಿಯ ತಾಯಿ ಬದುಕುಳಿಯಲಿಲ್ಲ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕ ಕಾರಣದಿಂದಾಗಿ ಬನಿ ಬದುಕಿದ್ದಾಳೆ ಅಷ್ಟೇ’ ಎಂದು ವೈಲ್ಡ್‌ಲೈಫ್ ಎಸ್‌ಒಎಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಸತ್ಯನಾರಾಯಣ್ ತಿಳಿಸಿದ್ದಾರೆ.

ವನ್ಯಜೀವಿ ಎಸ್‌ಒಎಸ್‌ನ ಸಹ-ಸಂಸ್ಥಾಪಕಿ ಮತ್ತು ಕಾರ್ಯದರ್ಶಿ ಗೀತಾ ಶೇಷಮಣಿ, ‘ತನ್ನ ತಾಯಿಯನ್ನು ಕಳೆದುಕೊಂಡು ಗಂಭೀರ ಗಾಯಗಳಿಂದ ಬಳಲುತ್ತಿದ್ದ ಬನಿ ನಮ್ಮ ಬಳಿಗೆ ಬಂದಾಗ, ನಿಜಕ್ಕೂ ಬದುಕುವುದು ಕಷ್ಟವಾಗಿತ್ತು. ಆದರೆ ಈಗ, ಎರಡು ವರ್ಷಗಳ ನಂತರ, ಅವಳು ನಡೆಯುತ್ತಿದ್ದಾಳೆ, ಆಟವಾಡುತ್ತಿದ್ದಾಳೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.